ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವವರು ಸಮಸ್ಯೆಗೆ ಸ್ಪಂದಿಸಿಲ್ಲ: ಕಾಂಗ್ರೆಸ್‌ ಅಭ್ಯರ್ಥಿ ಆರೋಪ

| Published : Apr 17 2024, 01:18 AM IST

ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವವರು ಸಮಸ್ಯೆಗೆ ಸ್ಪಂದಿಸಿಲ್ಲ: ಕಾಂಗ್ರೆಸ್‌ ಅಭ್ಯರ್ಥಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆಯ ಮೂರು ತಾಲೂಕುಗಳನ್ನು ಒಳಗೊಂಡ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಸಕ್ತ 19,380 ಮತದಾರರಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಶಿಕ್ಷಕರ ಪೂರ್ಣ ಸಮಸ್ಯೆ ಪರಿಹಾರಕ್ಕೆ ಮೂಲ ಶಿಕ್ಷಕರಾಗಿರುವ ನನ್ನ ಅಭ್ಯರ್ಥಿತನವನ್ನು ಮತದಾರರು ಬೆಂಬಲಿಸಬೇಕು. ಕಳೆದ ಆರು ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುವ ಭೋಜೇ ಗೌಡರು ಶಿಕ್ಷಕರ ಯಾವುದೇ ಸಮಸ್ಯೆ ಸ್ಪಂದಿಸಿಲ್ಲ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಕೆ.ಕೆ.ಮಂಜುನಾಥ್‌ ಕುಮಾರ್‌ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೆ ಪಿಂಚಣಿ ಯೋಜನೆ ರದ್ದುಗೊಳಿಸಿದಾಗ ಅದನ್ನು ಮರಳಿ ಜಾರಿಗೆ ಯತ್ನಿಸುವುದಾಗಿ ಭೋಜೇ ಗೌಡರು ಭರವಸೆ ನೀಡಿದ್ದರು. ಇದನ್ನು ಶಿಕ್ಷಕರು ನಂಬಿ ಅವರನ್ನು ಬೆಂಬಲಿಸಿದರು. ಆದರೆ ಗೆದ್ದ ಬಳಿಕ ಇದನ್ನು ಭೋಜೇ ಗೌಡರು ಮರೆತು ಇಡೀ ಶಿಕ್ಷಕ ಸಮುದಾಯಕ್ಕೆ ದ್ರೋಹ ಬಗೆದರು, ಇದು ಅಕ್ಷಮ್ಯವಾಗಿದ್ದು, ಶಿಕ್ಷಕರು ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಭೋಜೇ ಗೌಡರು ಶಿಕ್ಷಕ ಹಿನ್ನೆಲೆಯವರಲ್ಲ, ಶಿಕ್ಷಕರ ನೋವು, ನಾಡಿಮಿಡಿತ ಅವರಿಗೆ ಅರ್ಥವಾಗುವುದಿಲ್ಲ. ಎನ್‌ಇಪಿ, ಎಸ್‌ಇಪಿ, ಕೊಠಾಡಿ ಆಯೋಗ ವರದಿ ಅವರಿಗೆ ಗೊತ್ತಿಲ್ಲ. ಅಂತಹವರನ್ನು ಮತ್ತೆ ಆರಿಸಬೇಕೇ ಎಂಬ ಬಗ್ಗೆ ಶಿಕ್ಷಕರು ನೈತಿಕ ನಿರ್ಧಾರ ಕೈಗೊಳ್ಳಬೇಕು ಎಂದು ಎಂದು ಡಾ.ಮಂಜುನಾಥ್‌ ಹೇಳಿದರು. ಲೋಕಸಭಾ ಚುನಾವಣೆಯ ಮತದಾನ ದಿನವೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮೌಲ್ಯಮಾಪನ ನಡೆಸುವಂತೆ ಕೆಲವು ಶಿಕ್ಷಕರಿಗೆ ಕರ್ತವ್ಯ ವಿಧಿಸಲಾಗಿದೆ. ಅಧಿಕಾರಿಗಳ ಈ ಕ್ರಮ ಸರಿಯಲ್ಲ ಎಂದರು.

ಮತ ಎಣಿಕೆ ಮುಗಿದ ಒಂದು ವಾರದಲ್ಲಿ ಚುನಾವಣೆಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್‌ 4ರಂದು ನಡೆಯಲಿದೆ. ಮತ ಎಣಿಕೆ ಮುಗಿದ ಒಂದು ವಾರದಲ್ಲಿ ನೈಋತ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯೂ ನಡೆಯಲಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಡಾ.ಮಂಜುನಾಥ್‌ ಹೇಳಿದರು. ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆಯ ಮೂರು ತಾಲೂಕುಗಳನ್ನು ಒಳಗೊಂಡ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಸಕ್ತ 19,380 ಮತದಾರರಿದ್ದಾರೆ. ಲೋಕಸಭಾ ಚುನಾವಣಾ ಮತದಾನ ಬಳಿಕ ಶಿಕ್ಷಕರ ಕ್ಷೇತ್ರ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸುವ ಸಾಧ್ಯತೆ ಇದೆ ಎಂದರು. ಮುಖಂಡರಾದ ಸಲೀಂ, ಜೆ.ಪಿ.ಎಂ.ಚೆರಿಯನ್‌, ಸಂತೋಷ್‌ ಡಿಕ್ರಾಸ್ತಾ, ಮೋಹನ್‌, ಹ್ಯಾರಿಸ್‌ ಡಿಸೋಜಾ, ಪ್ರಕಾಶ್‌ ಸಾಲಿಯಾನ್‌ ಇದ್ದರು.