ಸಾರಾಂಶ
ಶಿರಹಟ್ಟಿ: ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯವಾದದ್ದು ಎಂದು ನಿವೃತ್ತ ಉಪನ್ಯಾಸಕ ಹಾಗೂ ಹಿರಿಯ ಸಾಹಿತಿ ಚಂದ್ರಶೇಖರ್ ವಸ್ತ್ರದ ಹೇಳಿದರು.
ತಾಲೂಕಿನ ಮಾಗಡಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲ ಮತ್ತು ಪ್ರೌಢ ಶಾಲೆಯ ೧೯೯೩ ರಿಂದ ೨೦೦೩ರ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಉತ್ತಮ ಶಿಕ್ಷಕ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡುವ ವಿದ್ಯಾರ್ಥಿಗಳನ್ನು ಸೃಷ್ಟಿಸಲು ಸಾಧ್ಯ ಎಂದರು.
ಶಿಕ್ಷಕರ ವೃತ್ತಿ ಜೀವನದ ಸಾಧನೆ ಏನು ಎಂಬುದು ನಿವೃತ್ತಿ ದಿನ ಅವರಿಗೆ ಸಲ್ಲುವ ಅಭಿನಂದನೆಯಲ್ಲಿ ತಿಳಿಯುತ್ತದೆ. ಶಿಕ್ಷಕರು ಜೀವನದುದ್ದಕ್ಕೂ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಉತ್ತಮ ಸಾಧಕರನ್ನು ಸೃಷ್ಟಿಸುತ್ತಾರೆ. ಶಿಕ್ಷಕರ ಸಾಧನೆ, ಸಂಯಮ ಅಪಾರ ಎಂದರು.ಶಿಕ್ಷಣ ಕೇವಲ ಪದವಿಗಷ್ಟೇ ಮೀಸಲಾಗಿರದೆ ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ಪಾತ್ರ ವಹಿಸಬೇಕು. ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಮೂಲಕ ಸಶಕ್ತ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುವುದರಲ್ಲಿ ಸಂದೇಹವಿಲ್ಲ. ಮಕ್ಕಳಿಗೆ ಜ್ಞಾನಾರ್ಜನೆ ನೀಡುವುದು, ಕಲೆ, ಸಾಹಿತ್ಯ, ಸಂಸ್ಕೃತಿಯ ಕುರಿತು ಮನವರಿಕೆ ಮಾಡುವುದು ಕೌಶಲ್ಯ ಕ್ರಿಯಾಶೀಲತೆ ಬೆಳೆಸುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಆಗಾಗ್ಗೆ ಕಲುಷಿತಗೊಳ್ಳುವ ಸಮಾಜ ಸುಧಾರಿಸುವ ಮಾರ್ಗ ತೆರೆದುಕೊಳ್ಳತ್ತದೆ. ಸಮಾಜಕ್ಕೆ ಇಂಥ ಅಮೂಲ್ಯ ಕೊಡುಗೆ ನೀಡುವ ಅವಕಾಶ ಶಿಕ್ಷಕರಿಗೆ ಮಾತ್ರ ಇರುತ್ತದೆ ಎಂದು ಹೇಳಿದರು.
ಮಾಗಡಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶ್ರೀನಿವಾಸ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಶಿಕ್ಷಕರು ಸದಾ ಅಧ್ಯಯನಶೀಲರಾಗಿ ಇರಬೇಕಾಗುತ್ತದೆ. ಆದರೆ ಇತ್ತೀಚೆಗೆ ಶಿಕ್ಷಕರು ಓದುವ ಸಂಸ್ಕೃತಿಯಿಂದ ವಿಮುಖಗೊಳ್ಳುತ್ತಿರುವುದು ಕಂಡುಬರುತ್ತಿದೆ ಎಂದು ವಿಷಾಧಿಸಿದರು.ಶಿಕ್ಷಕರ ಮೇಲೆ ಸಮಾಜ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಒಳ್ಳೆಯ ಕೆಲಸ ಕಾರ್ಯ ಮಾಡುವ ಮೂಲಕ ಗುರು ಪರಂಪರೆಯ ಘನತೆ, ಗೌರವ ಎತ್ತಿ ಹಿಡಿಯುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಕಲಿಸಿದ ಗುರುಗಳನ್ನು ಮರೆಯದೆ ಗೌರವಿಸುವ ಮೂಲಕ ಹಳೆ ವಿದ್ಯಾರ್ಥಿಗಳು ಭಾರತೀಯ ಗುರುಪರಂಪರೆ ಮುಂದುವರೆಸಿರುವುದು ಹೆಮ್ಮೆಯ ಸಂಗತಿ ಎಂದರು.
ಫಕ್ಕೀರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರವಿ ಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಚ್.ಬಿ. ರಡ್ಡೆರ, ಪಿ.ಬಿ. ಖರಾಟೆ, ಪಿ.ಎಸ್.ಸಜ್ಜನ್ ಮಾತನಾಡಿದರು.
ಹಳೆಯ ವಿದ್ಯಾರ್ಥಿಗಳಾದ ಪ್ರಶಾಂತ ಕಾಳಗಿ, ಮೋಹನ ಲಕ್ಷ್ಮೇಶ್ವರ, ಲಲಿತಾ ಕೋಳಿವಾಡ, ಸರಿತಾಬೇಗಂ ಕುರ್ತಕೋಟಿ, ಶ್ರೀಕಾಂತ ಈಳಿಗೇರ ಸೇರಿದಂತೆ ಇತರರು ಅನಿಸಿಕೆ ವ್ಯಕ್ತಪಡಿಸಿದರು.ಸುಮಂಗಲಾ ಗಿಡಕಾವು ಪ್ರಾರ್ಥಿಸಿ, ದೀಪಾ ಅಣ್ಣಿಗೇರಿ ಸ್ವಾಗತಿಸಿದರು. ಡಾ.ಪ್ರವೀಣ. ಮುಳ್ಳೂರ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ಕುರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಭಂಡಿವಾಡ, ಗೋಪಾಲ ಭರಮಗೌಡ್ರ, ಸಂಜೀವರೆಡ್ಡಿ ವೇಂಕರೆಡ್ಡಿ, ಮುತ್ತು ದಳವಾಯಿ, ಗಂಗಾಧರ ಹನಸಿ ಸೇರಿದಂತೆ ಇತರರು ಇದ್ದರು.ಸಂಪದ ಮಲ್ಲೂರು ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.