ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಆಶಾರಾಣಿ ಅಭಿಪ್ರಾಯ

| Published : Sep 08 2025, 01:00 AM IST

ಸಾರಾಂಶ

ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದುದು, ವೃತ್ತಿಪರ ಶಿಕ್ಷಕರು ಮಾತ್ರವಲ್ಲದೆ ಕೌಶಲ್ಯಾಧಾರಿತ ತರಬೇತಿ ಕೇಂದ್ರಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೂ ವಿಶೇಷ ಸ್ಥಾನಮಾನವಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಆರ್ಯವೈಶ್ಯ ಲೇಡೀಸ್ ಗ್ರೂಪ್ ಇಂಟರ್ ನ್ಯಾಷನಲ್ ವಿಂಗ್ ವತಿಯಿಂದ ಅರ್ಥಪೂರ್ಣ ಹಾಗೂ ವಿನೂತನ ಶೈಲಿಯಲ್ಲಿ ಶಿಕ್ಷಕರ ದಿನವನ್ನು ಆಚರಣೆ ಮಾಡಿದರು.

ವಿದ್ಯಾಸಂಸ್ಥೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲೆಗಳಲ್ಲಿ ವೃತ್ತಿ ಪರವಾಗಿ ಕೆಲಸ ಮಾಡುವ ಶಿಕ್ಷಕರು ಮಾತ್ರವಲ್ಲದೆ ವಿವಿಧ ಕಡೆಗಳಲ್ಲಿನ ಟ್ಯೂಷನ್, ನೃತ್ಯ, ಟೈಲರಿಂಗ್, ವಿವಿಧ ರೀತಿಯ ಕೌಶಲ್ಯ ತರಬೇತಿ ಕೇಂದ್ರಗಳಲ್ಲಿ ತರಬೇತಿ ಶಿಕ್ಷಕರಾಗಿ ಕೆಲಸ ಮಾಡಿದವರನ್ನು ಸಹ ಶಿಕ್ಷಕರೇ ಎಂದು ಪರಿಗಣಿಸಿ, ಶಿಕ್ಷಕರ ದಿನಾಚರಣೆ ಅಂಗವಾಗಿ ಅವರನ್ನು ಗುರುತಿಸಿ, ಗೌರವಿಸಿ ಸನ್ಮಾನಿಸಲಾಯಿತು.

ಅದರಂತೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ ಭಾರತಿ ವಿದ್ಯಾ ಸಂಸ್ಥೆಯ ನಿವೃತ್ತ ಶಿಕ್ಷಕಿ ನಳಿನಾಕ್ಷಿ, ಚಿತ್ರ ಕಲೆಯಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಮತ್ತು ಲಿಮ್ಕಾ ದಾಖಲೆ ಮಾಡಿದ ಶಿಕ್ಷಕಿ ಅನಿತಾ ಸಾಯಿ, ರೂಪ, ಪದ್ಮಿನಿ ಶ್ರೀಧರ್, ಮೌನಿಕಾ, ಅಶ್ವಿನಿ, ಮಣಿಕಂಠ, ಐಶ್ವರ್ಯ ತೇಜಸ್ವಿನಿ ಸೇರಿ ವಿವಿಧ ಸಂಘ ಸಂಸ್ಥೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ 25 ಕ್ಕೂ ಅಧಿಕ ಮಂದಿ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ಆರ್ಯ ವೈಶ್ಯ ಲೇಡೀಸ್ ಗ್ರೂಪ್ ಇಂಟರ್ ನ್ಯಾಷನಲ್ ಅಧ್ಯಕ್ಷೆ ಆಶಾರಾಣಿ ಮಾತನಾಡಿ, ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದುದು, ವೃತ್ತಿಪರ ಶಿಕ್ಷಕರು ಮಾತ್ರವಲ್ಲದೆ ಕೌಶಲ್ಯಾಧಾರಿತ ತರಬೇತಿ ಕೇಂದ್ರಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೂ ವಿಶೇಷ ಸ್ಥಾನಮಾನವಿದೆ. ಅವರು ಅವಿರತವಾಗಿ ಶ್ರಮಿಸಿ ಈ ರೀತಿಯಿಂದಲೂ ವಿದ್ಯೆ ಕಲಿಸುತ್ತಿರುವ ಶಿಕ್ಷಕರ ಕಾರ್ಯವೈಖರಿಗೆ ಬೆಲೆ ಕಟ್ಟಲಾಗದು. ಇಂತಹ ಶಿಕ್ಷಕರು ಜೀವನದ ನಿಜವಾದ ಪ್ರೇರಣಾಶಕ್ತಿಗಳು ಎಂದರೆ ಅತಿಶಯೋಕ್ತಿಯಲ್ಲ, ಪ್ರಸಕ್ತ ಸಾಲಿನಿಂದ ವಾಸವಿ ವಿದ್ಯಾಸಂಸ್ಥೆಯಲ್ಲಿ ಆರ್ಯವೈಶ್ಯ ಲೇಡೀಸ್ ಗ್ರೂಪ್ ಇಂಟರ್ ನ್ಯಾಷನಲ್ ವಿಂಗ್ ಇಂತಹ ಶಿಕ್ಷಕರನ್ನು ಸಹ ಗೌರವಿಸಿ, ಸನ್ಮಾನ ಮಾಡುವ ಕೆಲಸಕ್ಕೆ ಮುಂದಾಗಿದೆ. ನಿರಂತರವಾಗಿ ಇಂತಹ ಸೇವೆ ಮಾಡುವುದಾಗಿ ಆಶಾ ರಾಣಿ ಇದೇ ವೇಳೆ ಭರವಸೆ ನೀಡಿದರು.

ವಾಸವಿ ವಿದ್ಯಾಸಂಸ್ಥೆ ಹಾಗೂ ಆರ್ಯವೈಶ್ಯ ಲೇಡೀಸ್ ಗ್ರೂಪ್ ಇಂಟರ್ ನ್ಯಾಷನಲ್ ವಿಂಗ್ ಕಾರ್ಯದರ್ಶಿ ಸೌಮ್ಯ, ಪದಾಧಿಕಾರಿಗಳಾದ ಮೀನಾ, ಮಾನಸ, ದೀಕ್ಷಿತಾ, ತೇಜಸ್ವಿನಿ, ಐಶ್ವರ್ಯ ಸೇರಿ ವಾಸವಿ ವಿದ್ಯಾ ಸಂಸ್ಥೆಯ ಸಹ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.