ಶಿಕ್ಷಕರು ಮೇಲ್ಮನೆಗೆ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ

| Published : May 27 2024, 01:08 AM IST

ಶಿಕ್ಷಕರು ಮೇಲ್ಮನೆಗೆ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿರುವ ವ್ಯಕ್ತಿಯನ್ನು ಶಿಕ್ಷಕ ಮತದಾರರು ಆಯ್ಕೆ ಮಾಡಿ ಮೇಲ್ಮನೆಗೆ ಕಳುಹಿಸುವ ಮೂಲಕ ಶಿಕ್ಷಣ ಕ್ಷೇತ್ರದ ಘನತೆಯನ್ನು ಎತ್ತಿ ಹಿಡಿಯುವಂತೆ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ವಿಠಲಾಪುರ ಜಯರಾಂ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿರುವ ವ್ಯಕ್ತಿಯನ್ನು ಶಿಕ್ಷಕ ಮತದಾರರು ಆಯ್ಕೆ ಮಾಡಿ ಮೇಲ್ಮನೆಗೆ ಕಳುಹಿಸುವ ಮೂಲಕ ಶಿಕ್ಷಣ ಕ್ಷೇತ್ರದ ಘನತೆಯನ್ನು ಎತ್ತಿ ಹಿಡಿಯುವಂತೆ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ವಿಠಲಾಪುರ ಜಯರಾಂ ಕರೆ ನೀಡಿದರು.

ಪಟ್ಟಣದ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆದ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ಜೂ.3 ರಂದು ನಡೆಯುವ ಚುನಾವಣೆಯಲ್ಲಿ ಶಿಕ್ಷಕರು ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡುವ ಮೂಲಕ ಸಾಮಾಜಿಕ ಮೌಲ್ಯವನ್ನು ಎತ್ತಿಹಿಡಿಯಬೇಕಾಗಿದೆ ಎಂದರು.

ಜಾತಿ, ಹಣ, ಧರ್ಮ ಹಾಗೂ ಪಕ್ಷದ ಅಭಿಮಾನವನ್ನು ಬದಿಗೊತ್ತಿ ವ್ಯಕ್ತಿ ಅರ್ಹತೆಯನ್ನು ಆಧರಿಸಿ ಶಿಕ್ಷಕರು ಮತ ಚಲಾಯಿಸಬೇಕು. ಮರಿತಿಬ್ಬೇಗೌಡರು ಈಗಾಗಲೇ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಶಿಕ್ಷಕ ಸಮುದಾಯದ ಘನತೆ ಗೌರವಗಳಿಗೆ ಚ್ಯುತಿಬಾರದಂತೆ ಕೆಲಸ ಮಾಡಿದ್ದಾರೆ ಎಂದರು.

ಪ್ರಸಕ್ತ ವಿಧಾನ ಪರಿಷತ್ತು ತನ್ನ ನೈತಿಕ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಹಣ ಬಲ ಹೊಂದಿದವರು ಮೇಲ್ಮನೆಯನ್ನು ಪ್ರವೇಶಿಸುತ್ತಿದ್ದಾರೆ. ಶಿಕ್ಷಕರ ಮತಗಳು ಮಾರಾಟದ ಸರಕಾಗಬಾರದು. ತಮ್ಮ ಸಮಸ್ಯೆಗಳಿಗೆ ನಿರಂತರ ಹೋರಾಟ ಮಾಡುವ ಹೋರಾಟಗಾರನನ್ನು ಪ್ರಜ್ಞಾವಂತ ಶಿಕ್ಷಕರು ತಮ್ಮ ಪ್ರತಿನಿಧಿಯನ್ನಾಗಿಸಕೊಳ್ಳಬೇಕೆಂದು ಮನವಿ ಮಾಡಿದರು.ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರು ಶಿಕ್ಷಕ ಸಮುದಾಯದ ವೇತನ ತಾರತಮ್ಯ ನೀತಿ, ಬಡ್ತಿ ಉಪನ್ಯಾಸಕರ ಸಮಸ್ಯೆ, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಮಸ್ಯೆ, ಅತಿಥಿ ಶಿಕ್ಷಕರ ಸಮಸ್ಯೆಗಳು ಸೇರಿದಂತೆ ಶಿಕ್ಷಣ ಕ್ಷೇತ್ರದ ಹಲಲಪ ಸಮಸ್ಯೆಗಳ ನಿವಾರಣೆಗೆ ನಡೆದ ಹೋರಾಟದ ಮುಂಚೂಣಿಯಲ್ಲಿದ್ದವರು ಎಂದರು.

ಶಿಕ್ಷಣ ಕ್ಷೇತ್ರದ ಜ್ಞಾನವೇ ಇಲ್ಲದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಿಂದ ಸದನದಲ್ಲಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸಲು ಸಾಧ್ಯವಿಲ್ಲ.ಮರಿತಿಬ್ಬೇಗೌಡರನ್ನು ಆಯ್ಕೆ ಮಾಡದಿದ್ದರೆ ಮುಂದೊಂದು ದಿನ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಮತಯಾಚನೆಗೆ ಅನುಸರಿಸಬೇಕಾದ ಕಾರ್ಯಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಕರ್ನಾಟಕ ರಾಜ್ಯ ಬಡ್ತಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಿ.ಆರ್.ರಮೇಶ್, ಶಿಕ್ಷಕ ಕ್ಷೇತ್ರದ ಮತದಾರರುಗಳಾದ ಮಂಜೇಗೌಡ, ಜೆ.ಜಿ.ರಾಜೇಗೌಡ, ಕತ್ತರಘಟ್ಟ ವಾಸು, ಬಿ.ಆರ್.ವೆಂಕಟೇಶ್ ಹಾಗೂ ಮತ್ತಿತ್ತರಿದ್ದರು.