ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಒಬ್ಬ ವೈದ್ಯ ಕೆಟ್ಟವನಾದರೆ ಒಬ್ಬ ರೋಗಿ ಮಾತ್ರ ಸಾಯುತ್ತಾನೆ. ಆದರೆ ಶಿಕ್ಷಕ ಕೆಟ್ಟವನಾದರೆ ನೂರಾರು ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ. ಆದ್ದರಿಂದ ಶಿಕ್ಷಕರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಖ್ಯಾತ ನಗೆ ಭಾಷಣಗಾರರಾದ ಸುಧಾ ಬರಗೂರು ತಿಳಿಸಿದರು.ಪಟ್ಟಣದ ಎವಿಕೆ ಸಮುದಾಯ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 138ನೇ ಜಯಂತ್ಯುತ್ಸವ ಅಂಗವಾಗಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಿಗೆ ಸಂತೋಷದಿಂದ ಪಾಠ ಮಾಡಬೇಕು. ಮನೆಯ ಸಮಸ್ಯೆಯನ್ನು ಶಾಲೆಗೆ ತರಬೇಡಿ. ಶಿಕ್ಷಕರು ಒಂದು ದೇಶದ ಶಕ್ತಿ ಇದ್ದಂತೆ. ಕನ್ನಡ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ದೊಡ್ಡ ದೊಡ್ಡ ಸರ್ಕಾರಿ ಕೆಲಸದಲ್ಲಿ ಇರುವುದಕ್ಕೆ ಸಾವಿರಾರು ಉದಾಹರಣೆಗಳು ಇವೆ.ಸರ್ಕಾರ ಅಂಗನವಾಡಿ ಶಿಕ್ಷಕಿಯರನ್ನು ಹಾಗೂ ಶಿಕ್ಷಕರನ್ನು ಸರ್ಕಾರದ ಯೋಜನೆಗಳ ಅನುಷ್ಟಾನ ಮಾಡಲು ಬಳಸಿಕೊಳ್ಳುವುದರಿಂದ ಮಕ್ಕಳಿಗೆ ಶಿಕ್ಷಣ ಕಳಿಸಲು ತೊಂದರೆಯಾಗುತ್ತದೆ. ಇಷ್ಟೆಲ್ಲಾ ಕಷ್ಟವಿದ್ದರೂ ಶಿಕ್ಷಕರು ಸದಾ ನಗುಮುಖದಿಂದ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುತ್ತಾರೆ. ಶಿಕ್ಷಕರು ಮಕ್ಕಳನ್ನು ಮೌಲ್ಯಯುತ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ನಿರ್ಮಾಣ ಮಾಡುವ ಶಕ್ತಿ ಶಿಕ್ಷಕರಲ್ಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಶಿಕ್ಷಣದಲ್ಲಿ ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದು, ಪ್ರಸ್ತುತ ಸಾಲಿನಲ್ಲಿ ಐದನೇ ಸ್ಥಾನಕ್ಕೆ ಹೋಗಿರುವುದು ಬೇಸರದ ಸಂಗತಿಯಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಮೊದಲನೇ ಸ್ಥಾನದಲ್ಲಿ ಬರುವಂತೆ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರು ಶ್ರಮಿಸಬೇಕು.ಯಾವ ಕಾರಣಕ್ಕೆ ಎಸ್ ಎಸ್ ಎಲ್ ಸಿ ಫಲಿತಾಂಶ ಕುಸಿಯಲು ಸಾಧ್ಯ ಎಂಬುದನ್ನು ಅವಲೋಕಿಸಿ ಮೊದಲಿನಿಂದ ಫಲಿತಾಂಶವನ್ನು ತರುವ ಪ್ರಯತ್ನ ಆಗಬೇಕು. ಫಲಿತಾಂಶ ಕೇವಲ ಶಾಲೆಗೆ, ಶಿಕ್ಷಕರಿಗೆ, ತಾಲೂಕಿಗೆ ಅಲ್ಲದೆ ನಮ್ಮಗಳಿಗೂ ತಲೆ ತಗ್ಗಿಸುವಂತಾಗಿದೆ. ಹಾಗಾಗಿ ಈ ಬಾರಿ ಉತ್ತಮ ಫಲಿತಾಂಶವನ್ನು ತಂದು ಕೊಡುವಂತೆ ಶಿಕ್ಷಕರಿಗೆ ಕರೆ ನೀಡಿದರು. ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರ ಮಾಹಿತಿಯನ್ನು ಆರು ತಿಂಗಳು ಮುನ್ನವೇ ಮಾಹಿತಿ ಪಡೆದು ಸಮಯಕ್ಕೆ ಸರಿಯಾಗಿ ಶಿಕ್ಷಕರ ನೇಮಕ ಮಾಡಿಕೊಂಡು, ಮಕ್ಕಳಿಗೆ ತೊಂದರೆಯಾಗದಂತೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ಕೊಳ್ಳಬೇಕು. ಇದುವರೆಗೂ ರಾಜ್ಯದಲ್ಲಿ 60 ರಿಂದ 70 ಸಾವಿರ ಅತಿಥಿ ಶಿಕ್ಷಕರ ಮೂಲಕ ವಿದ್ಯೆ ಕೊಡಿಸುತ್ತಿದ್ದೇವೆ ಎಂದರು. ಇದೇ ವೇಳೆ ನಿವೃತ್ತ ಶಿಕ್ಷಕರಿಗೆ ತಾಲೂಕು ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆರತಿ ಬಿ., ಇಓ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಸ್ ನಟರಾಜ್, ಪಪಂ ಅಧ್ಯಕ್ಷೆ ಆಯಿಷಾ ತಾಸೀನ್, ಕಸಾಪ ಅಧ್ಯಕ್ಷ ಯತೀಶ್, ಬಿಆರ್ ಸಿ ಮಧುಸೂಧನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಸಿ. ರಮೇಶ್,ಡಯಟ್ ಪದ್ಮಜಾ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ ಆರ್ ವೆಂಕಟೇಶ್, ಪಪಂ ಸದಸ್ಯರಾದ ಮೋಹನ್, ಮಹಮ್ಮದ್ , ಕೃಷ್ಣಮೂರ್ತಿ, ಶೌಕತ್ ಅಲಿ, ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ತಾಲೂಕಿನ ಎಲ್ಲಾ ಶಿಕ್ಷಕರು ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು.