ನಮ್ಮಲ್ಲಿ ಶಿಕ್ಷಕರಿಗೆ ಮೊದಲ ಆದ್ಯತೆ ದೊರೆಯಬೇಕು

| Published : Sep 06 2025, 01:00 AM IST

ನಮ್ಮಲ್ಲಿ ಶಿಕ್ಷಕರಿಗೆ ಮೊದಲ ಆದ್ಯತೆ ದೊರೆಯಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕಾದಲ್ಲಿ ಶಿಕ್ಷಕರಿಗೆ ಸಿಗುವ ಮೊದಲ ಆದ್ಯತೆ ಮತ್ತು ಗೌರವ ನಮ್ಮ ದೇಶದಲ್ಲೂ ಸಿಗುವಂತಾಗಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ಅಮೆರಿಕಾದಲ್ಲಿ ಶಿಕ್ಷಕರಿಗೆ ಸಿಗುವ ಮೊದಲ ಆದ್ಯತೆ ಮತ್ತು ಗೌರವ ನಮ್ಮ ದೇಶದಲ್ಲೂ ಸಿಗುವಂತಾಗಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಪಟ್ಟಣದ ಜಿಜೆಸಿ ಕುವೆಂಪು ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ಹಾಗೂ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಾಧಾಕೃಷ್ಣನ್ ರವರ 138 ನೇ ಜಯಂತ್ಯುತ್ಸವ, ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.ಅಮೇರಿಕಾದಲ್ಲಿ ಶಿಕ್ಷಕರಿಗೆ ಮಹತ್ವದ ಸ್ಥಾನವಿದೆ. ಶಿಕ್ಷಕರಿಗೆ ಉತ್ತಮ ಗೌರವ ಸ್ಥಾನ ಇದೆ. ಅದೇ ಪ್ರಕಾರ ನಮ್ಮ ದೇಶದಲ್ಲೂ ಶಿಕ್ಷಕರಿಗೆ ಗೌರವ ಸ್ಥಾನಮಾನ ದೊರೆಯುವಂತಾಗಲಿ ಎಂದು ಹಾರೈಸಿದರು. ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಇಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆಗುತ್ತಿಲ್ಲ. ಈ ಬಗ್ಗೆ ಸದನದಲ್ಲಿಯೂ ಚರ್ಚಿಸಿದ್ದೇನೆ. ಆಂಧ್ರ ಪ್ರದೇಶದ ಮಾದರಿಯಲ್ಲಿ ಅತಿಥಿ ಶಿಕ್ಷಕರಿಗೆ ಹೆಚ್ಚಿನ ಗೌರವ ಧನ ನೀಡಬೇಕು ಇಲ್ಲವೇ ಖಾಯಂಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಜನರಲ್ಲಿ ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದಾಗಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ಎಸ್.ಎಸ್.ಎಲ್.ಸಿ ಸಾಧನೆಯಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದ್ದರೆ ತುರುವೇಕೆರೆ ಎರಡನೇ ಸ್ಥಾನದಲ್ಲಿತ್ತು. ಹಾಗಾಗಿ ಈ ಬಾರಿ ತುರುವೇಕೆರೆ ತುಮಕೂರು ಜಿಲ್ಲೆಯಲ್ಲೇ ಮೊದಲ ಸ್ಥಾನ ಪಡೆಯುವಂತೆ ಮಾಡಬೇಕು ಎಂದು ವೇದಿಕೆಯಲ್ಲಿದ್ದ ಬಿಇಒ ಸೋಮಶೇಖರ್ ಅವರಿಗೆ ಸೂಚಿಸಿದರು.

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಸಾಹಿತ್ಯ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಮೈಸೂರು ದಸರಾ ಉದ್ಱಾಟನೆಗೆ ಆಹ್ವಾನಿಸಿದೆ. ಆದರೆ ಅವರು ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಜಾತಿ, ಧರ್ಮದ ಲೇಪನ ಮಾಡಿ ವಿರೋಧಿಸುವುದು ಸರಿಯಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಕ್ಷೇಪಿಸಿದರು. ಎನ್.ಡಿ.ಎ ಮೈತ್ರಿ ಇರುವ ಕಾರಣ ಈ ಬಗ್ಗೆ ನಾನು ಮಾತನಾಡಬಾರದೆಂದಿದ್ದೆ. ಆದರೂ ಕೂಡ ಮನಸ್ಸು ತಡೆಯುತ್ತಿಲ್ಲ. ಬಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಬೂಕರ್ ಪ್ರಶಸ್ತಿ ಪಡೆಯುವುದೆಂದರೆ ಅದು ಸಾಮಾನ್ಯವೇನಲ್ಲ. ಈ ಪ್ರಶಸ್ತಿ ಗಳಿಸುವುದೆಂದರೆ ದೇಶವನ್ನು ಪ್ರತಿನಿಧಿಸಿದಂತೆ. ಇವರ ಲೇಖನಗಳನ್ನು ಸಹ ಓದಿದ್ದೇನೆ. ಮತ್ತೆ ಮತ್ತೆ ಓದಬೇಕಿನಿಸುವ ಬರವಣಿಗೆ ಅವರದು. ಈ ಹಿಂದೆ ಕನ್ನಡದ ಖ್ಯಾತ ಸಾಹಿತಿ ಕೆ.ಎಸ್.ನಿಸ್ಸಾರ್ ಅಹಮದ್ ಅವರು ಕೂಡ ದಸರಾ ಉದ್ಘಾಟನೆ ಮಾಡಿದ್ದರು. ಹಿಂದೆ ಇಲ್ಲದ ವಿರೋಧ ಈಗ ಏಕೆ ಈ ವಿವಾದ ಮುನ್ನೆಲೆಗೆ ಬಂದಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ವಿಷಾದಿಸಿದರು. ಇದೇ ವೇಳೆ ನಿವೃತ್ತ ಶಿಕ್ಷಕರಿಗೆ ಮತ್ತು ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ಬಿಇಒ ಕಚೇರಿಯಿಂದ ರಾಧಾಕೃಷ್ಣನ್ ರವರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಮಂಗಳವಾದ್ಯ ಹಾಗೂ ಸೋಮನ ಕುಣಿತದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಬಿಇಒ ಎನ್.ಸೋಮಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಇ.ಒ.ಶಿವರಾಜಯ್ಯ, ಗ್ರೇಟ್-2 ತಹಸೀಲ್ದಾರ್ ಬಿ.ಸಿ.ಸುಮತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶೀಲಾ ಶಿವಪ್ಪ ನಾಯಕ, ಸದಸ್ಯರಾದ ಚಿದಾನಂದ್, ಸುರೇಶ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ಅಕ್ಷರದಾಸೋಹದ ನಿರ್ದೇಶಕಿ ಎಚ್.ಕೆ.ಸವಿತಾ, ಬಿಇಒ ಕಚೇರಿಯ ವ್ಯವಸ್ಥಾಪಕ ಕೃಷ್ಣಪ್ರಸಾದ್, ಕಸಾಪ ಅಧ್ಯಕ್ಷ ಡಿ.ಪಿರಾಜು, ಸಾವಿತ್ರಿಭಾಫುಲೆ ಸಂಘದ ಭವ್ಯಾ ಸಂಪತ್, ಇಸಿಒ ಸಿದ್ದಪ್ಪ, ವಕೀಲ ಧನಪಾಲ್ ಮತ್ತಿತರರು ಇದ್ದರು.