ಸಾರಾಂಶ
ಶಿರಹಟ್ಟಿ: ಶಿಕ್ಷಕರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾಗಿದೆ. ಸಂಸ್ಕಾರಯುತ ನೈತಿಕ ಶಿಕ್ಷಣ ಬೋಧಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಬೇಕಿದೆ. ಅಂದಾಗ ಭಾರತದ ಭವಿಷ್ಯವನ್ನು ರೂಪಿಸುವ ವಿದ್ಯಾರ್ಥಿಗಳನ್ನು ಕಾಣಬಹುದು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು. ಜಿಪಂ, ತಾಲೂಕು ಆಡಳಿತ, ಲಕ್ಷ್ಮೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ಇವರ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ೧೩೭ನೇ ಜನ್ಮದಿನಾಚರಣೆ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕ, ಶಿಕ್ಷಕಿಯರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕರು ಪ್ರಾಥಮಿಕ ಹಂತದಲ್ಲಿಯೇ ಗ್ರಾಮೀಣ ಭಾಗದ ಬಡ ಮಕ್ಕಳು ಹಾಗೂ ಯಾವುದೇ ಜಾತಿ ಧರ್ಮ ನೋಡದೇ ಮೌಲ್ಯಾಧಾರಿತ ಶಿಕ್ಷಣವನ್ನು ಕಲಿಸುವ ಮೂಲಕ ದೇಶದ ಭವಿಷ್ಯ ಮತ್ತು ಭಾರತದ ಉತ್ತಮ ಪ್ರಜೆಗಳಾಗುವಂತೆ ರೂಪಿಸುವ ಮಹತ್ತರ ಹೊಣೆ ನಿಮ್ಮದಾಗಿದೆ ಎಂದರು. ಭಯ ಮತ್ತು ಶಸ್ತ್ರಗಳಿಂದ ದೇಶವನ್ನಾಳಲು ಸಾಧ್ಯವಿಲ್ಲ. ಶಿಕ್ಷಣದಿಂದ ಮಾತ್ರ ಉತ್ತಮ ಆಡಳಿತ ನಡೆಸಲು ಸಾಧ್ಯ ಎಂಬುದು ನಿರೂಪಿತವಾಗಿದೆ. ಭವ್ಯ ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡುವ ಮಹತ್ತರ ಜವಾಬ್ದಾರಿ ಶಿಕ್ಷರದ್ದಾಗಿದೆ ಎಂದರು. ಮಕ್ಕಳ ಹೃದಯದಲ್ಲಿ ಅಕ್ಷರ ಬೀಜ ಬಿತ್ತಿ ಮೌಲ್ಯಯುತ ಸಮಾಜ ನಿರ್ಮಾಣ ಮಾಡಿ ಅತ್ಯಂತ ಗುರುತರವಾದ ಸಮಾಜಮುಖಿ ಕೆಲಸ ಮಾಡುತ್ತಿರುವ ಶಿಕ್ಷಕ ಸಮುದಾಯದ ಸೇವೆ ಸ್ಮರಣೀಯ. ದೇಶದ ಅಭಿವೃದ್ಧಿಗೆ ಪೂರಕವಾದ ಶಿಕ್ಷಕರ ಕಾಯಕ ಅತ್ಯಂತ ಪ್ರಮುಖವಾದುದು. ಆದರೆ ಇಂದು ಕೆಲ ಶಿಕ್ಷಕರಲ್ಲಿ ನೈತಿಕತೆ ಕ್ಷೀಣಿಸುತ್ತಿರುವುದು ವಿಷಾದನೀಯ. ಶಿಕ್ಷಕ ವೃತ್ತಿಗೆ ಗೌರವ ತಂದುಕೊಟ್ಟ ರಾಧಾಕೃಷ್ಣನ್ ಅವರ ಆದರ್ಶ ಬದುಕು ಶಿಕ್ಷಕರಿಗೆ ಮಾದರಿಯಾಗಲಿ ಎಂದು ಕರೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರಾದ ಆರ್.ಎಸ್. ಬುರಡಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಗುಣ ಸ್ವಭಾವಗಳನ್ನು ಅರ್ಥ ಮಾಡಿಕೊಂಡು ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಮತ್ತು ಅವರ ಶ್ರೇಯಸ್ಸಿಗೆ ದುಡಿಯುತ್ತಿರುವ ಶಿಕ್ಷಕರ ಕಾರ್ಯ ದೊಡ್ಡದು ಎಂದರು. ಭವಿಷ್ಯತ್ತಿನ ಸಮಾಜದ ಭದ್ರತೆ ಎಂಬ ಕಟ್ಟಡಕ್ಕೆ ಇಂದಿನ ವಿದ್ಯಾರ್ಥಿಗಳೇ ಅಡಿಗಲ್ಲು. ಅಂತಹ ಅಡಿಗಲ್ಲನ್ನು ಭದ್ರವಾಗಿ ನೆಡುವ ಕಾರ್ಯ ಶಿಕ್ಷಕರ ಅತಿ ಮುಖ್ಯ ಜವಾಬ್ದಾರಿಯಾಗಿದೆ. ದಾರ್ಶನಿಕ, ತತ್ವಜ್ಞಾನಿ, ಶಿಕ್ಷಣ ತಜ್ಞ ಡಾ. ಎಸ್. ರಾಧಾಕೃಷ್ಣನ್ ಅವರ ಜೀವನ ಚರಿತ್ರೆಯನ್ನು ಪುನರಾವಲೋಕನ ಮಾಡಿಕೊಳ್ಳುವುದು ಅಗತ್ಯವಿದೆ ಎಂದರು. ಮಗು ಮಾನವನಾಗಿ, ನಾಗರಿಕನಾಗಿ ಎಲ್ಲರೊಡನೆ ಸ್ನೇಹ ಗೌರವದಿಂದ ವರ್ತಿಸುವಂತೆ ಮಾಡುವುದೇ ಶಿಕ್ಷಣ. ಇಂತಹ ಶಿಕ್ಷಣ ನೀಡುವ ಶಕ್ತಿಯನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು. ಮಕ್ಕಳು ಈ ದೇಶದ ಅಮೂಲ್ಯ ಸಂಪತ್ತು. ಅವರನ್ನು ಸರಿದಾರಿಗೆ ತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು. ಬೆಳ್ಳಟ್ಟಿ ರಾಮಲಿಂಗೇಶ್ವರ ಮಠದ ಬಸವರಾಜ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಇತಿಹಾಸ ಮತ್ತು ವರ್ತಮಾನವನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಭವಿಷ್ಯ ನಿರ್ದರಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ದೇಶದ ಶಿಲ್ಪಿಗಳು. ಅವರು ಈ ದೇಶಕಟ್ಟುವ ಮಹಾನ್ ಚೇತನಗಳನ್ನು ರೂಪಗೊಳಿಸುವ ಅತ್ಯಂತ ಗುರುತರವಾದ ಜವಾಬ್ದಾರಿ ಹೊಂದಿದವರಾಗಿದ್ದಾರೆ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯಕ, ತಹಸೀಲ್ದಾರ್ ಕೆ. ರಾಘವೇದ್ರರಾವ್ ಮಾತನಾಡಿದರು. ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ವಿ.ವಿ. ಕಪ್ಪತ್ತನವರ, ಜಾನು ಲಮಾಣಿ, ನಾಗರಾಜ ಲಕ್ಕುಂಡಿ, ಶರಣಬಸವ ಪಾಟೀಲ, ಪಪಂ ಮುಖ್ಯಾಧಿಕಾರಿ ಸವಿತಾ ತಾಂಭ್ರೆ, ಮಂಜುನಾಥ ಕೊಕ್ಕರಗುಂದಿ, ಬಸವರಾಜ ಹರ್ಲಾಪೂರ, ಗಿರೀಶ ಕೋಡಬಾಳ, ಎಸ್.ಎಫ್. ಮಠದ, ಭರಮಪ್ಪ ಸ್ವಾಮಿ, ಬಿ.ಬಿ. ಕಳಸಾಪೂರ, ಕಾಶಪ್ಪ ಸ್ವಾಮಿ, ತಿಪ್ಪಣ್ಣ ಕೊಂಚಿಗೇರಿ ಇತರರು ಇದ್ದರು.