ಶಿಕ್ಷಕರು ಜವಾಬ್ದಾರಿಯಿಂದ ನುಣುಚಿಕೊಳ್ಳುವ ದಾರಿ ಹುಡುಕದೆ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಪರಿಣಾಮಕಾರಿ ಬೋಧನೆಗೆ ಕಾಳಜಿ ವಹಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ಕರೆ ನೀಡಿದರು.
ಹಾನಗಲ್ಲ: ಶಿಕ್ಷಕರು ಜವಾಬ್ದಾರಿಯಿಂದ ನುಣುಚಿಕೊಳ್ಳುವ ದಾರಿ ಹುಡುಕದೆ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಪರಿಣಾಮಕಾರಿ ಬೋಧನೆಗೆ ಕಾಳಜಿ ವಹಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ಕರೆ ನೀಡಿದರು.
ಬುಧವಾರ ಇಲ್ಲಿನ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ಸೇವಾನಿರತ ಶಿಕ್ಷಕರಿಗೆ ಆಯೋಜಿಸಿದ್ದ ಪಿಎಬಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಶಾಲೆಗಳ ದಾಖಲಾತಿ ಕುಂಠಿತವಾಗಲು ಶಿಕ್ಷಕರೇ ಕಾರಣವಾಗಬೇಡಿ. ಈಗ ಬೇಕಾಗಿರುವ ಶೈಕ್ಷಣಿಕ ಬದಲಾವಣೆಗೆ ಸರಿಯಾಗಿ ಕೆಲಸ ಮಾಡುವ ಮನೋಸ್ಥಿತಿ ಶಿಕ್ಷಕರದ್ದಾಗಲಿ. ವರ್ಗ ಕೋಣೆಯಲ್ಲಿ ಮೊಬೈಲ್ ಬಳಸುತ್ತಲೇ ಕಾಲ ಕಳೆಯುವ ಶಿಕ್ಷಕರಿಗೆ ಸಾರ್ವಜನಿಕರು ಬುದ್ಧಿ ಹೇಳುವ ಸ್ಥಿತಿ ತಂದುಕೊಳ್ಳಬೇಡಿ. ನಮ್ಮ ಗೌರವ ಉಳಿಸಿಕೊಂಡು ಶಾಲೆಗಳನ್ನು ಉನ್ನತ ಶೈಕ್ಷಣಿಕ ಕೇಂದ್ರಗಳನ್ನಾಗಿ ಮಾಡಿ. ವಿದ್ಯಾರ್ಥಿಗಳಿಗೆ ಉತ್ತಮ ಕನಸು ಕಟ್ಟಿ ಕೊಡುವ ಕೆಲಸ ಶಿಕ್ಷಕರಿಂದಾಗಬೇಕು. ಬದಲಾದ ವ್ಯವಸ್ಥೆಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣಕ್ಕೆ ಮುಂದಾಗಿ ಎಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಮೌಲ್ಯಯುತ ಶಿಕ್ಷಣವೇ ಇಂದಿನ ಮೊದಲ ಆದ್ಯತೆ. ಶಿಕ್ಷಕರಿಗೂ ಇಂದು ಸವಾಲುಗಳಿವೆ. ಹಲವು ಸಂದರ್ಭದಲ್ಲಿ ವ್ಯವಸ್ಥೆಯ ವಿರುದ್ಧ ಈಜಬೇಕಾದ ಅನಿವಾರ್ಯತೆಯೂ ಶಿಕ್ಷಕರಿಗಿದೆ. ನಾಳೆಗಳಿಗಾಗಿ ವಿದ್ಯಾರ್ಥಿಗಳಿಗೆ ಇಂದೇ ಒಳಿತನ್ನು ಕಟ್ಟಿಕೊಡುವ ಇಚ್ಛಾಶಕ್ತಿ ಶಿಕ್ಷಕರಿಗೆ ಬೇಕಾಗಿದೆ. ತರಬೇತಿಗಳು ನಮ್ಮ ಕಲಿಕ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿಗಳಾಗಿವೆ. ನಮ್ಮಲ್ಲಿರುವ ಜ್ಞಾನ ಸಂಪತ್ತನ್ನು ಮಕ್ಕಳಿಗೆ ಧಾರೆ ಎರೆಯುವ ಮನಸ್ಸು ಶಿಕ್ಷಕರದ್ದಾಗಬೇಕು ಎಂದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ ಮಾತನಾಡಿ, ಸರ್ಕಾರ ಹಾಗೂ ಇಲಾಖೆಯ ಆದೇಶಗಳನ್ನು ಪಾಲಿಸುವುದು ನಮ್ಮ ಆದ್ಯತೆ. ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಶಿಕ್ಷಕರಿಗೆ ಪಾಠದ ಹಾಗೂ ಪರೀಕ್ಷಾ ಸಿದ್ಧತೆಯ ಒತ್ತಡಗಳಿವೆ. ಹತ್ತು ಹಲವು ರಜೆ, ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ನಡುವೆ ಪಾಠಗಳಿಗೆ ಸಮಯ ಹೊಂದಿಸಲೂ ಶಿಕ್ಷಕರಿಗೆ ಕಷ್ಟವಾಗಿದೆ. ಇದರಲ್ಲಿ ತರಬೇತಿಗಳಿಗಾಗಿ ಸಮಯ ಮೀಸಲಿಡುವುದು ಕಷ್ಟದ ಕೆಲಸವಾದರೂ ಇದು ಅನಿವಾರ್ಯ ಹಾಗೂ ಆವಶ್ಯಕ ಎಂದರು.ಹಾವೇರಿ ಡೈಟ್‌ನ ಉಪನ್ಯಾಸಕ ಹಾಗೂ ತರಬೇತಿದಾರ ಆರ್. ರವಿಂದ್ರ, ಕ್ಷೇತ್ರ ಸಮನ್ವಯಾಧಿಕಾರಿ ಡಿ. ನಾಗೇಂದ್ರಪ್ಪ, ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ವಿ.ಬಿ. ಚಿಕ್ಕೇರಿ, ಎನ್.ವಿ. ಅಗಸನಹಳ್ಳಿ, ವೀರಪ್ಪ ಕರೆಗೊಂಡರ, ಎಂ.ಎ. ಮನ್ನಂಗಿ, ವಿ.ಟಿ. ಪಾಟೀಲ, ಶಂಭುಲಿಂಗಯ್ಯ ಹಿರೇಮಠ, ಗಂಗಾಧರ ವಡ್ಡರ, ಸಿದ್ದಲಿಂಗೇಶ ಕಾಯಕದ, ಗೀತಾ ಎಸ್., ಎಸ್.ಆರ್. ಎಡಚಿ, ಬಿ.ಎನ್. ಸಂಗೂರ ಪಾಲ್ಗೊಂಡಿದ್ದರು.