ಕನ್ನಡಪ್ರಭ ವಾರ್ತೆ ತುಮಕೂರು

ಇಂದಿನ ಬುದ್ಧಿವಂತ ಮಕ್ಕಳಿಗೆ ಬೋಧನೆ ಮಾಡಲು ಬುದ್ಧಿವಂತ ಶಿಕ್ಷಕರ ಅಗತ್ಯವೂ ಇದೆ. ಹಾಗಾಗಿ ಕೃತಕ ಬುದ್ಧಿಮತ್ತೆಯ ಬಗ್ಗೆ ಮೊದಲು ಶಿಕ್ಷಕರು ಜ್ಞಾನವನ್ನು ಸಂಪಾದಿಸಿ, ತದನಂತರ ಮಕ್ಕಳಿಗೆ ಹೇಳಿಕೊಡುವ ಮೂಲಕ ಅವರನ್ನು ಕೌಶಲ್ಯವಂತರನ್ನಾಗಿ ಮಾಡಬೇಕೆಂದು ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಉಪನ್ಯಾಸಕರಲ್ಲಿ ಮನವಿ ಮಾಡಿದರು.

ನಗರದ ಸಿದ್ಧಗಂಗಾ ಕಾಲೇಜಿನ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ತುಮಕೂರು ವಿವಿ ಕಾಲೇಜು ಅಧ್ಯಾಪಕರ ಸಂಘ ವತಿಯಿಂದ ಕೃತಕ ಬುದ್ಧಿಮತ್ತೆ ಮತ್ತು ಭಾರತದಲ್ಲಿ ಉನ್ನತ ಶಿಕ್ಷಣ: ಅವಕಾಶಗಳು ಮತ್ತು ಸವಾಲುಗಳು ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಕೃತಕ ಬುದ್ಧಿಮತ್ತೆ(ಎಐ)ಯಿಂದ ಯುವ ಸಮೂಹದಲ್ಲಿ ಸಾಕಷ್ಟು ಬದಲಾವಣೆ ತರಲು ಅವಕಾಶವಿದೆ. ಈ ನಿಟ್ಟಿನಲ್ಲಿ ಇಂದಿನ ವಿಚಾರ ಸಂಕಿರಣ ಅತ್ಯಂತ ಮಹತ್ವ ಪಡೆದಿದೆ ಎಂದರು.

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಹೊರತಾಗಿಯೂ ಕಳೆದ ಎರಡು ವರ್ಷಗಳಿಂದ ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಪರಿಹಾರದತ್ತ ಗಮನಹರಿಸುವ ಕೆಲಸ ಮಾಡುತ್ತಲೇ ಬಂದಿದ್ದೇನೆ. ಶಿಕ್ಷಕರೇ ಮತದಾರರಾಗಿರುವ ಈ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧವಾಗಿದ್ದು, ಹಳೆಯ ಪಿಂಚಣಿ ಪದ್ಧತಿಯನ್ನು ಇಂದಿನ ಸರ್ಕಾರವೇ ಘೋಷಣೆ ಮಾಡಲಿದೆ. ವಿಧಾನ ಪರಿಷತ್ ಸದಸ್ಯರಾಗಿರುವ ಪುಟ್ಟಣ್ಣಯ್ಯ ಮತ್ತು ಡಿ.ಟಿ.ಶ್ರೀನಿವಾಸ್ ಅವರು ಸಹಕಾರದೊಂದಿಗೆ ಈಗಾಗಲೇ ವಿಚಾರವನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಅವರು, ತಮ್ಮ ಅವಧಿಯಲ್ಲಿಯೇ ಸರ್ಕಾರಿ ನೌಕರರಿಗೆ ಓಟಿಎಸ್ ಜಾರಿಗೆ ತರುವ ಭರವಸೆ ನೀಡಿದ್ದಾರೆ. ಒಟಿಎಸ್ ಅತ್ಯಂತ ಅಗತ್ಯವಾಗಿದೆ. ಸರ್ಕಾರಿ ನೌಕರರ ಮಕ್ಕಳು, ತಂದೆ, ತಾಯಿಗಳನ್ನು ಸಾಕಬೇಕೆಂದರೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ ಎಂದು ಶಶಿ ಹುಲಿಕುಂಟೆ ಮಠ್ ನುಡಿದರು.


ಕೃತಕ ಬುದ್ಧಿಮತ್ತೆ ಮತ್ತು ಭಾರತದಲ್ಲಿ ಉನ್ನತ ಶಿಕ್ಷಣ ಅವಕಾಶಗಳು ಮತ್ತು ಸವಾಲುಗಳು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ, ಕೃತಕ ಬುದ್ಧಿಮತ್ತೆ ಎಂಬುದು 21ನೇ ಶತಮಾನದ ಕ್ರಾಂತಿ. ಕೈಗಾರಿಕಾ ಕ್ರಾಂತಿ, ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ನಂತರ ಆಗಿರುವ ಮೂರನೇ ದೊಡ್ಡ ಕ್ರಾಂತಿ ಎಐ. ಇದನ್ನು ಆಯಾಯ ವಿಷಯಗಳಿಗೆ ಅನುಗುಣವಾಗಿ ಪದವಿ ತರಗತಿಗಳಿಗೆ ಎಐ ಪರಿಚಯಿಸುವ ಹೊಸ ಪಠ್ಯಕ್ರಮವನ್ನು ಅಧ್ಯಾಪಕರು ಮಾಡಬೇಕಾಗಿದೆ. ಎಐ ಎಂಬುದು ಜ್ಞಾನ ಆಧಾರಿತವಾಗಿದ್ದು, ಮಾಹಿತಿಗಳ ಕಣಜವಾಗಿದೆ. ಅದನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ಆಗಬೇಕು. ತಂತ್ರಜ್ಞಾನ ಆಧಾರಿತ ಭೋಧನೆ, ಕ್ಲೌಡ್ ಕಂಪ್ಯೂಟ್ ನಿಂದ ನಾವು ಕೂಡ ಇಂದಿನ ಅಗತ್ಯಕ್ಕೆ ತಕ್ಕಂತೆ ಅಪ್‌ಡೆಟ್ ಆಗಬೇಕಿದೆ ಎಂದರು.

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ತುಮಕೂರು ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಜಿ.ತಿಪ್ಪೇಸ್ವಾಮಿ ವಹಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ.ಟಿ.ಗಂಗಾಧರಯ್ಯ, ಪ್ರಾಂಶುಪಾಲರಾದ ಪ್ರೊ..ಟಿ.ಡಿ.ವಸಂತ, ಪ್ರೊ.ಕೆ.ಸಿ.ಬಸವರಾಜು, ಡಾ.ಎನ್.ಪಿ.ಶಿವಾನಂದಯ್ಯ, ಡಾ.ಡಿ.ಶಿವಲಿಂಗಯ್ಯ, ಡಾ.ಆರ್.ಪುಟ್ಟರಾಜು, ತುಮಕೂರು ವಿವಿಯ ಪ್ರೊ.ಪರಮಶಿವಯ್ಯ, ತುಮಕೂರು ವಿವಿ ಕಾಲೇಜು ಅಧ್ಯಾಪಕರ ಸಂಘದ ಪದಾಧಿಕಾರಿಗಳಾದ ಡಾ.ನಾಗರಾಜು ಎಂ.ಎಸ್, ಹನುಮಂತರಾಯಪ್ಪ, ಡಾ.ರೇಣುಕಾ ಪ್ರಸಾದ್, ಡಾ.ಹೊನ್ನಾಂಜನೇಯ, ಡಾ.ನಳಿನಿ ಎನ್., ಡಾ.ನಾಗರಾಜು. ಜಿ.ಕೆ., ಡಾ.ಜಯಪ್ರಕಾಶ್.ಪಿ.ಸಿ ಹಾಗೂ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

ಕೃತಕ ಬುದ್ಧಿಮತ್ತೆ ಮತ್ತು ಭಾರತದಲ್ಲಿ ಉನ್ನತ ಶಿಕ್ಷಣ ಅವಕಾಶಗಳು ಮತ್ತು ಸವಾಲುಗಳು ಎಂಬ ವಿಚಾರಸಂಕಿರಣದಲ್ಲಿ 89 ಲೇಖನಗಳು ಮಂಡನೆಯಾದವು. ನೂರಾರು ಉಪನ್ಯಾಸಕರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.