ಸಾರಾಂಶ
ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕು. ಬೋಧನಾ ಕ್ರಮದಲ್ಲಿ ಬದಲಾವಣೆ ತಂದುಕೊಳ್ಳಬೇಕಿದೆ. ಕೇವಲ ಪಠ್ಯ ವಿಷಯಗಳನ್ನಷ್ಟೇ ಬೋಧಿಸುವುದು ಶಿಕ್ಷಕರ ಕೆಲಸವಲ್ಲ. ಮಕ್ಕಳಲ್ಲಿ ಸಾಮಾನ್ಯ ಜ್ಞಾನವನ್ನು ಬೆಳೆಸಬೇಕು. ಒಳ್ಳೆಯ ವಿಷಯಗಳನ್ನು ಅವರ ಮನಸ್ಸಿಗೆ ಮುಟ್ಟುವಂತೆ ಹೇಳಬೇಕು. ಆಗ ಭವಿಷ್ಯದಲ್ಲಿ ಅವರು ಉತ್ತಮ ಪ್ರಜೆಗಳಾಗಲು ಸಾಧ್ಯ.
ಕನ್ನಡಪ್ರಭ ವಾರ್ತೆ ಮಂಡ್ಯ
ಶಿಕ್ಷಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ತೋರಿಸುವ ಕಾಳಜಿ ಮತ್ತು ಬದ್ಧತೆಯನ್ನು ತಮ್ಮ ಜವಾಬ್ದಾರಿ ನಿಭಾಯಿಸುವುದರಲ್ಲೂ ತೋರಿಸುವ ಅಗತ್ಯವಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಅಧಿವೇಶನದಲ್ಲಿ ಮಾತನಾಡಿ, ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕು. ಬೋಧನಾ ಕ್ರಮದಲ್ಲಿ ಬದಲಾವಣೆ ತಂದುಕೊಳ್ಳಬೇಕಿದೆ. ಕೇವಲ ಪಠ್ಯ ವಿಷಯಗಳನ್ನಷ್ಟೇ ಬೋಧಿಸುವುದು ಶಿಕ್ಷಕರ ಕೆಲಸವಲ್ಲ. ಮಕ್ಕಳಲ್ಲಿ ಸಾಮಾನ್ಯ ಜ್ಞಾನವನ್ನು ಬೆಳೆಸಬೇಕು. ಒಳ್ಳೆಯ ವಿಷಯಗಳನ್ನು ಅವರ ಮನಸ್ಸಿಗೆ ಮುಟ್ಟುವಂತೆ ಹೇಳಬೇಕು. ಆಗ ಭವಿಷ್ಯದಲ್ಲಿ ಅವರು ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ನಿಮ್ಮ ಬೇಡಿಕೆಗಳನ್ನು ಸಮಾಧಾನದಿಂದ ಹೇಳಬೇಕು. ಸಿಎಂ, ಸಚಿವರ ಮನವೊಲಿಸಿ ಈಡೇರಿಸಿಕೊಳ್ಳಬೇಕು. ೫೦ ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇರುವುದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣವಲ್ಲ. ಹಿಂದಿನ ಸರ್ಕಾರಗಳು ನೇಮಕಾತಿ ಮಾಡಿಕೊಂಡು ಬಂದಿದ್ದರೆ ಇಂತಹ ಪರಿಸ್ಥಿತಿ ಇರುತ್ತಿರಲಿಲ್ಲ. ಎಲ್ಲಾ ಹುದ್ದೆಗಳಿಗೂ ಒಟ್ಟಿಗೆ ಭರ್ತಿ ಮಾಡಲಾಗುವುದೂ ಇಲ್ಲ. ಸರ್ಕಾರ ಗ್ಯಾರಂಟಿಗಳಿಗೆ ಹಣ ಖರ್ಚು ಮಾಡುತ್ತಿದೆ. ಅಭಿವೃದ್ಧಿಗೆ ಹಣ ನೀಡುತ್ತಿದೆ. ವೇತನ-ಪಿಂಚಣಿಯನ್ನೂ ಪಾವತಿಸುತ್ತಿದೆ. ಅದೇ ರೀತಿ ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ಕೊಟ್ಟಿದೆ. ಕಾನೂನಾತ್ಮಕ ಸಮಸ್ಯೆಗಳನ್ನು ನೋಡಿಕೊಂಡು ಜಾರಿಗೊಳಿಸುವುದಾಗಿ ಹೇಳಿದರು.ಸಚಿವರೆದುರು ತೊಡೆತಟ್ಟುವುದು, ಉದ್ಧಟತನ ಸರಿಯಲ್ಲ
ಪ್ರಾಥಮಿ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ತರಗತಿ ಬಹಿಷ್ಕರಿಸಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂಬ ಸಂಘದ ಅಧ್ಯಕ್ಷ ಕೆ.ನಾಗೇಶ್ ಮಾತಿಗೆ, ಸಚಿವ ಚಲುವರಾಯಸ್ವಾಮಿ ಸಚಿವರೆದುರು ತೊಡೆತಟ್ಟುವುದು, ಉದ್ಧಟತನದ ವರ್ತನೆ ಸರಿಯಲ್ಲ ಎಂದು ಸೂಚ್ಯವಾಗಿ ಹೇಳಿದರು.ನಿಮ್ಮ ಸಮಸ್ಯೆಗಳನ್ನು ಸಮಾಧಾನದಿಂದ ಬಗೆಹರಿಸಿಕೊಳ್ಳಬೇಕು. ವೀರಾವೇಶದಿಂದ ಮಾತನಾಡುವುದು, ಧಮಕಿ ಹಾಕುವುದು ಶಿಕ್ಷಕರಾದವರು ಮಾಡುವ ಕೆಲಸವಲ್ಲ. ಎಂದಿಗೂ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಹೋರಾಟಕ್ಕೆ ನಾನಾ ರೀತಿಯ ಮಾರ್ಗಗಳಿವೆ. ಒಳ್ಳೆಯ ದಾರಿಯಲ್ಲಿ ಹೋರಾಟ ನಡೆಸಬೇಕು. ಅದರಿಂದ ಯಾರಿಗೂ ತೊಂದರೆಯಾಗಬಾರದು ಎಂದರು.
ರಾಜಕಾರಣಿಗಳಾದ ನಾವೂ ಸಾರ್ವಜನಿಕ ಜೀವನದಲ್ಲಿದ್ದೇವೆ. ಸಾರ್ವಜನಿಕರು ನಮ್ಮ ಬಳಿಗೆ ಬೇಡಿಕೆಗಳನ್ನು ತರುತ್ತಾರೆ. ಅವುಗಳು ನ್ಯಾಯಯುತವಾಗಿದ್ದರೆ ಈಡೇರಿಸುತ್ತೇವೆ. ಅವರು ತರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗದಿದ್ದಾಗ ಸಮಾಧಾನ ಮಾಡಿ ಕಳುಹಿಸುತ್ತೇವೆ. ಆದರೆ, ತಾಳ್ಮೆ ಕಳೆದುಕೊಳ್ಳುವುದಿಲ್ಲ ಎಂದರು.