ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಾಭಿಮಾನ ಮೂಡಿಸಲು ಮುಂದಾಗಿ

| Published : Jan 26 2025, 01:32 AM IST

ಸಾರಾಂಶ

ತಿಪಟೂರು ತಾಲೂಕಿನ ಕರಡಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ಮಕ್ಕಳ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್ ದೇವರಾಜು ಮಾತನಾಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮಕ್ಕಳು ನಾಲ್ಕುಗೋಡೆಗಳ ಮಧ್ಯದ ಶಿಕ್ಷಣದ ಜೊತೆಗೆ ಅವರಲ್ಲಿ ನಾಯಕತ್ವ ಗುಣ, ಸ್ಪರ್ಧಾ ಮನೋಭಾವ ಮತ್ತು ಸಮಾಜದ ಆಗುಹೋಗುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳ ಗ್ರಾಮ ಸಭೆಯನ್ನು ನಡೆಸಲಾಗುತ್ತಿದೆ ಎಂದು ಕರಡಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್ ದೇವರಾಜು ತಿಳಿಸಿದರು. ತಾಲೂಕಿನ ಕರಡಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳ ಗ್ರಾಮಸಭೆ ಕೇವಲ ಪ್ರತಿಭಾನ್ವಿತ ಮಕ್ಕಳಿಗೆ ಸೀಮಿತವಾಗದೆ ಎಲ್ಲಾ ಮಕ್ಕಳು ಭಾಗವಹಿಸುವಂತಾಗಬೇಕು. ಶಿಕ್ಷಕರು ಶಾಲೆಗಳಲ್ಲಿ ಮಕ್ಕಳಿಗೆ ನಮ್ಮ ದೇಶದ ಇತಿಹಾಸವನ್ನು ತಿಳಿಸುವ ಮೂಲಕ ರಾಷ್ಟ್ರಭಕ್ತಿ ಹಾಗೂ ರಾಷ್ಟ್ರಾಭಿಮಾನವನ್ನು ಮೂಡಿಸಬೇಕು. ಪೋಷಕರಿಗೆ, ಗುರು-ಹಿರಿಯರಿಗೆ ಗೌರವ ಕೊಡುವುದನ್ನ ಕಲಿಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು.

ಮಕ್ಕಳ ಗ್ರಾಮ ಸಭೆಯು ಸರ್ಕಾರ ವಿವಿಧ ಇಲಾಖೆ ಅಧಿಕಾರಿಗಳನ್ನೊಳಗೊಂಡ ಒಂದು ವೇದಿಕೆಯಾಗಿದ್ದು ಇಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಸರ್ಕಾರ ಮಕ್ಕಳಿಗಾಗಿ ತಂದಿರುವ ಯೋಜನೆ, ಕಾಯ್ದೆ, ಹಕ್ಕುಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಇದರಿಂದ ಮಕ್ಕಳಲ್ಲಿ ಸಮಾಜವನ್ನು ತಿದ್ದುವ ಶಕ್ತಿ ಬೆಳೆಯಲಿದೆ ಎಂದರು. ಕರಡಿ ಶಾಲೆಯ ವಿದ್ಯಾರ್ಥಿನಿ ಹರಿಣಿ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ, ರಾಮೇನಹಳ್ಳಿ ಶಾಲೆಯ ವಿದ್ಯಾರ್ಥಿ ಮೋಹಿತ್ ಸಾಮಾಜಿಕ ಜಾಲತಾಣಗಳ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಹಾಗೂ ಅಣ್ಣಮಲ್ಲೇನಹಳ್ಳಿ ಶಾಲೆಯ ವಿದ್ಯಾರ್ಥಿ ಪ್ರೇಕ್ಷ ಬಾಲ್ಯ ವಿವಾಹವನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಅತ್ಯುತ್ತಮವಾಗಿ ಮಾತನಾಡಿದರು. ಈ ವಿದ್ಯಾರ್ಥಿಗಳಿಗೆ ಕೆ.ಆರ್ ದೇವರಾಜು ರವರು ವೈಯಕ್ತಿಕವಾಗಿ ನಗದು ಬಹುಮಾನ ವಿತರಣೆ ಮಾಡಿ ಪ್ರೋತ್ಸಾಹಿಸಿದರು. ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷ ಜಯರಾಮ್, ಉಪಾಧ್ಯಕ್ಷೆ ದೇವಿರಮ್ಮ, ಪಿಡಿಒ ಕವಿತಾ, ಸದಸ್ಯರಾದ ರವೀಶ್, ಕುಮಾರಯ್ಯ, ಮುನಿರಾಜ್, ಲಕ್ಕಮ್ಮ ಇದ್ದರು.