ಸಾರಾಂಶ
ರಾಷ್ಟ್ರೀಯತೆ, ಭಾವೈಕ್ಯತೆ, ರಾಷ್ಟ್ರಗೀತೆ, ಧ್ವಜಗಳ ಮಹತ್ವಗಳ ಕುರಿತು ವಿದ್ಯಾರ್ಥಿಗಳೂ ಸೇರಿದಂತೆ ಜನರಲ್ಲಿ ಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿಶೇಷವಾಗಿ ಭಾರತೀಯ ಸೇವಾದಳದ ಪದಾಧಿಕಾರಿಗಳು ಈ ಬಗ್ಗೆ ಕಾರ್ಯಕಾರಗಳನ್ನು ನಡೆಸುವ ಮೂಲಕ ರಾಷ್ಟ್ರೀಯತೆ ಜಾಗೃತಗೊಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಹೊನ್ನಾಳಿಯಲ್ಲಿ ನುಡಿದಿದ್ದಾರೆ.
- ರಾಷ್ಟ್ರಗೀತೆ, ರಾಷ್ಟ್ರಧ್ವಜ, ಡ್ರಮ್ ಸೆಟ್ ನಿರ್ವಹಣೆಗಳ ಕುರಿತ ಕಾರ್ಯಾಗಾರ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ ಹೊನ‍್ನಾಳಿ
ರಾಷ್ಟ್ರೀಯತೆ, ಭಾವೈಕ್ಯತೆ, ರಾಷ್ಟ್ರಗೀತೆ, ಧ್ವಜಗಳ ಮಹತ್ವಗಳ ಕುರಿತು ವಿದ್ಯಾರ್ಥಿಗಳೂ ಸೇರಿದಂತೆ ಜನರಲ್ಲಿ ಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿಶೇಷವಾಗಿ ಭಾರತೀಯ ಸೇವಾದಳದ ಪದಾಧಿಕಾರಿಗಳು ಈ ಬಗ್ಗೆ ಕಾರ್ಯಕಾರಗಳನ್ನು ನಡೆಸುವ ಮೂಲಕ ರಾಷ್ಟ್ರೀಯತೆ ಜಾಗೃತಗೊಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಜಿಲ್ಲಾ ಮತ್ತು ತಾಲೂಕು ಸೇವಾದಳ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಚೇರಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಗೀತೆ, ರಾಷ್ಟ್ರಧ್ವಜ, ಡ್ರಮ್ ಸೆಟ್ ನಿರ್ವಹಣೆಗಳ ಕುರಿತ ಒಂದು ದಿನದ ಕಾರ್ಯಾಗಾರ ದೀಪಬೆಳಗಿಸಿ ಉದ್ಘಾಟಿಸಿ ಹಾಗೂ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಟಿ.ವಿ. ಮೊಬೈಲ್ ಹಾಗೂ ಶಾಲೆಗಳಲ್ಲಿ ಓದಿನ ಒತ್ತಡಗಳಿಂದಾಗಿ ವಿದ್ಯಾರ್ಥಿಗಳಿಗೆ, ಯುವಜನಾಂಗದಲ್ಲಿ ರಾಷ್ಟ್ರೀಯತೆ, ರಾಷ್ಟ್ರಗೀತೆ ನಿರ್ಗಳವಾಗಿ ಹಾಡುವುದು ರಾಷ್ಟ್ರಧ್ವಜದ ಬಗ್ಗೆ ಹೆಚ್ಚಿನ ಮಾಹಿತಿ ಕೊರತೆಯಾಗುತ್ತಿದೆ. ಇನ್ನು ಹಲವು ಶಿಕ್ಷಕರಲ್ಲೂ ರಾಷ್ಟ್ರಧ್ವಜದ ನಿರ್ವಹಣೆ ಬಗ್ಗೆ ನಿಖರ ಮಾಹಿತಿ ಕೊರತೆಯಿಂದ ಲೋಪದೋಷಗಳಾಗುವ ಸಂಭವ ಇರುತ್ತದೆ. ಇವೆಲ್ಲದರ ಬಗ್ಗೆ ಭಾರತೀಯ ಸೇವಾದಳ ವಿಶೇಷ ಕಾಳಜಿವಹಿಸಿ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರಿಗೆ ಕಾರ್ಯಾಗಾರದ ಮೂಲಕ ಮಾಹಿತಿ ನೀಡುತ್ತಿರುವುದು ಸಮಯೋಚಿತವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ ಮಾತನಾಡಿ, ಭಾರತ ಸೇವಾದಳದ ಮೂಲಕ ಶಿಕ್ಷಕರಿಗೆ ಅದರಲ್ಲೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ರಾಷ್ಟ್ರಗೀತೆ ಯಾವ ರೀತಿ ಹಾಡಬೇಕು, ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರಧ್ವಜದ ಕ್ರಮಬದ್ಧ ನಿರ್ವಹಣೆ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯಕ್ರಮವು ಸೂಕ್ತ ನಿರ್ಧಾರವಾಗಿದೆ ಎಂದು ಹೇಳಿದರು.
ಭಾರತ್ ಸೇವಾದಳ ಜಿಲ್ಲಾ ಸಂಚಾಲಕ ಹಾಗೂ ಶಿಕ್ಷಕ ಜಯಣ್ಣ, ಬಿಆರ್‌ಸಿ ತಿಪ್ಪೇಶಪ್ಪ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಜಗದೀಶ್, ಮಾತನಾಡಿದರು. ಜಿಲ್ಲಾ ಸಂಘಟಕ ಫಕ್ಕೀರ್ ಗೌಡ, ಜಿಲ್ಲಾ ಕೋಶಾಧ್ಯಕ್ಷ ಕೆ.ರುದ್ರಯ್ಯ, ಸಂಪನ್ಮೂಲ ವ್ಯಕ್ತಿಗಳಾಗಿ ಭೀಮಣ್ಣ, ಹನುಮಂತಪ್ಪ,ಮಂಜುನಾಥ್, ಲಕ್ಷ್ಮಣ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗುಂಡುಗಲಿ, ಕಾರ್ಯದರ್ಶಿ ಹಾಲೇಶ್, ದಿನಕರ್, ಇ.ಸಿ.ಒ. ಅಪ್ಸರ್ ಅಹಮ್ಮದ್ ಮುಂತಾದವರು ಇದ್ದರು.- - - -17ಎಚ್.ಎಲ್.ಐ1.ಜೆಪಿಜಿ:
ಹೊನ್ನಾಳಿ ಪಟ್ಟಣ ಗುರುಭವನದಲ್ಲಿ ಶುಕ್ರವಾರ ನಡೆದ ಕಾರ್ಯಾಗಾರವನ್ನು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.