ನಮ್ಮ ದೇಶವು ಅನಾದಿ ಕಾಲದಿಂದಲೂ ವೈವಿಧ್ಯಮಯ ಭಾಷೆ, ಸಂಸ್ಕೃತಿ, ಜ್ಞಾನ ಪರಂಪರೆ ಹಾಗೂ ಚಿಂತನಾ ಧಾರೆ ಒಳಗೊಂಡ ಬಹುಮುಖ ಸಮಾಜವಾಗಿ ಬೆಳೆದು ಬಂದಿದೆ

ಬಳ್ಳಾರಿ: ನಮ್ಮ ದೇಶವು ಅನಾದಿ ಕಾಲದಿಂದಲೂ ದ್ವಿಭಾಷಾ ಸಂಸ್ಕೃತಿಯೊಂದಿಗೆ ಸಾಗುತ್ತಿದೆ. ಇದಕ್ಕೆ ಪೂರಕವಾಗಿ ಇಂದಿನ ಶಿಕ್ಷಕರು ಸಹ ಏಕ ವಿಷಯ ತಜ್ಞರಾಗದೆ ಬಹುಶಿಸ್ತೀಯ ಅಧ್ಯಯನದೆಡೆಗೆ ಚಿಂತನಶೀಲರಾಗಿ ಸಾಗಬೇಕು ಎಂದು ಹಿರಿಯ ಲೇಖಕ ಡಾ. ಅಮರೇಶ ನುಗಡೋಣಿ ತಿಳಿಸಿದರು.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮ ದೇಶವು ಅನಾದಿ ಕಾಲದಿಂದಲೂ ವೈವಿಧ್ಯಮಯ ಭಾಷೆ, ಸಂಸ್ಕೃತಿ, ಜ್ಞಾನ ಪರಂಪರೆ ಹಾಗೂ ಚಿಂತನಾ ಧಾರೆ ಒಳಗೊಂಡ ಬಹುಮುಖ ಸಮಾಜವಾಗಿ ಬೆಳೆದು ಬಂದಿದೆ. ಭಾರತದ ಭಾಷಾ ಸಂಸ್ಕೃತಿ ಗಮನಿಸಿದಾಗ ದ್ವಿಭಾಷಾ ಹಾಗೂ ಬಹುಭಾಷಾ ಬಳಕೆ ನಮ್ಮ ಸಾಮಾಜಿಕ ಬದುಕಿನ ಅವಿಭಾಜ್ಯ ಅಂಗವಾಗಿರುವುದು ಸ್ಪಷ್ಟವಾಗುತ್ತದೆ. ಒಂದು ಭಾಷೆಯ ಜ್ಞಾನ ಮತ್ತೊಂದು ಭಾಷೆಯ ಸಾಹಿತ್ಯ, ಸಂಸ್ಕೃತಿ ಹಾಗೂ ಜ್ಞಾನ ಪರಂಪರೆ ಅರಿಯಲು ಸೇತುವೆಯಾಗಿ ಕಾರ್ಯನಿರ್ವಹಿಸಿದೆ. ಈ ಬಹುಭಾಷಾ ಮತ್ತು ಬಹುಶಿಸ್ತೀಯ ಪರಂಪರೆಯೇ ಭಾರತೀಯ ಜ್ಞಾನ ವ್ಯವಸ್ಥೆಯ ವೈಶಿಷ್ಟ್ಯವಾಗಿದೆ ಎಂದರು.

ಇಂದಿನ ವೇಗವಾಗಿ ಬದಲಾಗುತ್ತಿರುವ ಶೈಕ್ಷಣಿಕ ಹಾಗೂ ತಾಂತ್ರಿಕ ಪರಿಸರದಲ್ಲಿ ಶಿಕ್ಷಕರ ಪಾತ್ರವೂ ಬದಲಾಗಬೇಕಿದೆ. ಶಿಕ್ಷಕರು ಕೇವಲ ತಾವು ಬೋಧಿಸುವ ಏಕ ವಿಷಯಕ್ಕೆ ಸೀಮಿತರಾಗದೆ, ಇತರ ವಿಷಯಗಳ ಜ್ಞಾನ ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ವಿಜ್ಞಾನ ಕಲಿಸುವ ಶಿಕ್ಷಕರು ಪರಿಸರ, ಸಮಾಜ ಹಾಗೂ ತಂತ್ರಜ್ಞಾನದೊಂದಿಗೆ ಅದರ ಸಂಬಂಧ ತಿಳಿದುಕೊಳ್ಳಬೇಕು. ಭಾಷಾ ಶಿಕ್ಷಕರು ಸಾಹಿತ್ಯದ ಜತೆಗೆ ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ಬೆಳವಣಿಗೆಗಳ ಬಗ್ಗೆಯೂ ಅರಿವು ಹೊಂದಿರಬೇಕು.

ಬಹುಶಿಸ್ತೀಯ ಅಧ್ಯಯನ ಶಿಕ್ಷಕರ ಜ್ಞಾನ ವ್ಯಾಪ್ತಿ ವಿಸ್ತರಿಸುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳಲ್ಲಿ ಸಮಗ್ರ ಚಿಂತನಾ ಸಾಮರ್ಥ್ಯ ಬೆಳೆಸಲು ಸಹಕಾರಿಯಾಗುತ್ತದೆ. ವಿವಿಧ ವಿಷಯಗಳ ನಡುವಿನ ಸಂಬಂಧ ಗುರುತಿಸಿ ಅದನ್ನು ಸರಳವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಸಾಮರ್ಥ್ಯ ಶಿಕ್ಷಕರಲ್ಲಿ ಮೂಡುತ್ತದೆ. ಇದರಿಂದ ಪಠ್ಯಪುಸ್ತಕದ ಜ್ಞಾನ ಮೀರಿ ಜೀವನಾನುಭವದೊಂದಿಗೆ ಶಿಕ್ಷಣ ಬೆಸೆಯಲು ಸಾಧ್ಯವಾಗುತ್ತದೆ ಎಂದು ಡಾ. ನುಗಡೋಣಿ ತಿಳಿಸಿದರು.

ಶಿಕ್ಷಣದ ಖಾಸಗೀಕರಣದಿಂದ ದೇಶದ ಶಿಕ್ಷಣ ವ್ಯವಸ್ಥೆಗೆ ತೊಂದರೆಯಾಗಿದೆ. ಸರ್ಕಾರಗಳು ಬದಲಾದಂತೆ ಶಿಕ್ಷಣ ವ್ಯವಸ್ಥೆಗಳು ಬದಲಾಗುತ್ತವೆ. ಶಿಕ್ಷಣ ನೀತಿಗಳ ಪರಿಪಾಲನೆಯಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ವಿದ್ಯಾಸಂಸ್ಥೆಗಳಲ್ಲಿ ಅತೀವ ವ್ಯತ್ಯಾಸಗಳಿದ್ದು ದೇಶದ ಮತ್ತು ರಾಜ್ಯದ ಪ್ರಭುತ್ವಗಳು ಶಿಕ್ಷಣದ ಖಾಸಗೀಕರಣದಿಂದ ಇಬ್ಬಗೆಯ ಹಾದಿ ಹಿಡಿದಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ.ಸಾಲಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿನ ಅನೇಕ ಲೋಪದೋಷಗಳಿಗೆ ವಿದ್ಯಾರ್ಥಿ, ಶಿಕ್ಷಕ ಅಥವಾ ವ್ಯವಸ್ಥೆ ಯಾರು ಕಾರಣೀಭೂತರು ಎಂಬುದರ ಅಧ್ಯಯನ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ವಿವಿಯ ಕುಲಪತಿ ಪ್ರೊ. ಎಂ.ಮುನಿರಾಜು ಮಾತನಾಡಿದರು. ಕಾರ್ಯಕ್ರಮ ಪೂರ್ವದಲ್ಲಿ ಡಾ ಸರ್ವಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಇತ್ತೀಚೆಗೆ ವಿವಿಯಲ್ಲಿ ಜರುಗಿದ್ದ ವಿವಿಧ ಸ್ಫರ್ಧೆಗಳ ವಿಜೇತ ಶಿಕ್ಷಕರಿಗೆ ಮೆಡಲ್, ಟ್ರೋಫಿ ವಿತರಿಸಲಾಯಿತು. ವಿವಿಯ ಕುಲಸಚಿವ ಪ್ರೊ.ವಿ. ಲೋಕೇಶ್, ಕಾರ್ಯಕ್ರಮದ ಸಂಯೋಜಕ ಡಾ.ಸಾಹೇಬ್ ಅಲಿ ನಿರಗುಡಿ ಉಪಸ್ಥಿತರಿದ್ದರು. ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರುಗಳು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.