ಸಾರಾಂಶ
ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲರೂ ಸಹ ಗೆಲ್ಲಲು ಅಥವಾ ಸೋಲಲು ಸಾಧ್ಯವಿಲ್ಲ. ಯಾರಾದರೂ ಒಬ್ಬರು ಗೆಲುವನ್ನು ಪಡೆದುಕೊಂಡರೆ, ಇನ್ನೊಬ್ಬರು ಸೋಲಬೇಕಾಗುತ್ತದೆ. ಸೋಲು, ಗೆಲುವು ಕ್ರೀಡೆಯಲ್ಲಿ ಸರ್ವೆ ಸಾಮಾನ್ಯವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗಿದೆ.
ಗೌರಿಬಿದನೂರು: ಖಾಸಗಿ ಶಾಲೆಯ ಶಿಕ್ಷಕರು ಕನಿಷ್ಠ ಒಂದು ದಿನದಲ್ಲಿ 2 ಗಂಟೆಗಳ ಕಾಲವಾದರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯ ಪಡೆದುಕೊಳ್ಳಬೇಕೆಂದು ಲೀಡರ್ಸ್ ಶಾಲೆಯ ಮುಖ್ಯಸ್ಥ ಶಿವರಾಮರೆಡ್ಡಿ ತಿಳಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕು ಖಾಸಗಿ ಶಾಲೆಯ ಆಡಳಿತ ಮಂಡಳಿಗಳ ಒಕ್ಕೂಟದಿಂದ ನಗರದ ಹೊರವಲಯದಲ್ಲಿರುವ ಲೀಡರ್ಸ್ ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ಖಾಸಗಿ ಶಾಲೆಯ ಶಿಕ್ಷಕರ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲರೂ ಸಹ ಗೆಲ್ಲಲು ಅಥವಾ ಸೋಲಲು ಸಾಧ್ಯವಿಲ್ಲ. ಯಾರಾದರೂ ಒಬ್ಬರು ಗೆಲುವನ್ನು ಪಡೆದುಕೊಂಡರೆ, ಇನ್ನೊಬ್ಬರು ಸೋಲಬೇಕಾಗುತ್ತದೆ. ಸೋಲು, ಗೆಲುವು ಕ್ರೀಡೆಯಲ್ಲಿ ಸರ್ವೆ ಸಾಮಾನ್ಯವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗಿದೆ. ಕ್ರೀಡಾ ಮನೋಭಾವದಿಂದ ಎಲ್ಲರೂ ಭಾಗವಹಿಸಿ ತೀರ್ಪುಗಾರರು ನೀಡುವ ತೀರ್ಪಿಗೆ ಬದ್ಧರಾಗಿ ಎಂದು ತಿಳಿಸಿದರು.
ಖಾಸಗಿ ಶಾಲೆ ಒಕ್ಕೂಟದ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಕ್ರೀಡಾಪಟುಗಳಲ್ಲಿ ಕ್ರೀಡಾ ಮನೋಭಾವನೆ ಮುಖ್ಯ, ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ತಾವು ಎದುರಾಳಿ ತಂಡದ ವಿರುದ್ಧ ಆಡುವಾಗ ಆತ್ಮವಿಶ್ವಾಸ ಕಳೆದುಕೊಳ್ಳದೇ ತಂಡದ ಎಲ್ಲ ಸದಸ್ಯರು ಸಂಘಟನಾತ್ಮಕವಾಗಿ ಆಡುವ ಮೂಲಕ ಗೆಲುವಿನ ನಗೆ ಬೀರಬೇಕು ಎಂದರು.ಉಪಾಧ್ಯಕ್ಷ ಪಠಾಣ್ ಸೈಫುಲ್ಲಾ ಮಾತನಾಡಿ, ಆತ್ಮವಿಶ್ವಾಸದಿಂದ ಕ್ರೀಡೆಯಲ್ಲಿ ಪಾಲ್ಗೊಂಡು ಕ್ರೀಡೆಯಲ್ಲಿ ಜಯ ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.
ಖಾಸಗಿ ಶಾಲೆಯ ಒಕ್ಕೂಟದ ನಿರ್ದೇಶಕ ಚಂದ್ರಮೌಳಿ, ಎಲ್.ಪಾಂಡುರಂಗ, ಶ್ರೀನಾಥ್, ಲೀಡರ್ಸ್ ಶಾಲೆಯ ಕಾರ್ಯದರ್ಶಿ ನರಸಿಂಹಮೂರ್ತಿ, ನಾಗಭೂಷಣ್, ಖಜಾಂಚಿ ಮತ್ತು ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರು ಭಾಗವಹಿಸಿದ್ದರು.