ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಿ: ಶಾಸಕ ಎಚ್.ಆರ್. ಗವಿಯಪ್ಪ

| Published : Sep 20 2025, 01:01 AM IST

ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಿ: ಶಾಸಕ ಎಚ್.ಆರ್. ಗವಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಗಳ ಅಭಿವೃದ್ಧಿ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಸರ್ಕಾರದಿಂದ ನೀಡಬಹುದೇ ವಿನಃ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರೇ ನೀಡಬೇಕು.

ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ । ಪಠ್ಯದ ಜೊತೆಗೆ ಕ್ರೀಡೆಗೆ ಪ್ರೋತ್ಸಾಹ ಕೊಡಿಕನ್ನಡಪ್ರಭ ವಾರ್ತೆ ಹೊಸಪೇಟೆ

ಶಾಲೆಗಳ ಅಭಿವೃದ್ಧಿ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಸರ್ಕಾರದಿಂದ ನೀಡಬಹುದೇ ವಿನಃ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರೇ ನೀಡಬೇಕು. ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ಎಂದು ಸ್ಥಳೀಯ ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.

ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 137ನೇ ಜನ್ಮ ದಿನಾಚರಣೆ ನಿಮಿತ್ತ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.

ಹೊಸಪೇಟೆ ವ್ಯಾಪ್ತಿಯಲ್ಲಿ ಎರಡು ವರ್ಷ ಅವಧಿಯಲ್ಲಿ 90 ತರಗತಿ ಕೊಠಡಿ ನಿರ್ಮಾಣ ಹಾಗೂ 350 ಶಿಥಿಲಾವಸ್ಥೆಯಲ್ಲಿದ್ದ ತರಗತಿ ಕೊಠಡಿಗಳ ದುರಸ್ತಿ ಕಾರ್ಯ ಮಾಡಲಾಗಿದೆ. ಶೈಕ್ಷಣಿಕ ಪ್ರಗತಿಗೆ ಮೊದಲ ಆದ್ಯತೆ ನೀಡಲಾಗಿದೆ. ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ₹ಐದು ಕೋಟಿ ವೆಚ್ಚದಲ್ಲಿ ಕ್ರೀಡಾ ಶಾಲೆ, ಕ್ರೀಡಾಪಟುಗಳಿಗೆ ತರಬೇತಿ ಮತ್ತು ವಸತಿ, ಶೌಚಗೃಹ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತದೆ. ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ₹5 ಕೋಟಿ ಅನುದಾನ ನೀಡಲಾಗಿದೆ. ಕ್ಷೇತ್ರದ ಎಲ್ಲಾ ಶಾಲೆಗಳ ಕ್ರೀಡಾ ಮೈದಾನವನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗುವುದು. ಈಚೇಗೆ ಮಕ್ಕಳಿಗೆ ಮೊಬೈಲ್ ಗೀಳು ಹೆಚ್ಚಾಗಿರುವ ಹಿನ್ನೆಲೆ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಮೈದಾನಕ್ಕೆ ಕರೆತಂದು ಕ್ರೀಡೆಗಳ ಆಸಕ್ತಿ ಬೆಳೆಸಬೇಕು. ಕ್ಷೇತ್ರದಲ್ಲಿ ಒಟ್ಟು 117 ಸರ್ಕಾರಿ ಶಾಲೆಗಳಿವೆ. ಅವುಗಳಲ್ಲಿ ಕನಿಷ್ಠ ಐದು ಪ್ರೌಢಶಾಲೆಗಳನ್ನು ಆಯ್ಕೆ ಮಾಡಿಕೊಂಡು ಮಾದರಿಯುತ ತಂತ್ರಜ್ಞಾನ ಸಹಿತ ಅಭಿವೃದ್ಧಿ ಸ್ಮಾರ್ಟ್ ಶಾಲೆಗಳನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ. ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆ ನೀಡಬೇಕು. ಮಕ್ಕಳು ಮುಂದಿನ ದೇಶದ ಪ್ರಜೆಗಳು ಅವರ ಭವಿಷ್ಯ ಎಲ್ಲಾ ಶಿಕ್ಷಕರ ಕೈಯಲ್ಲಿದೆ ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಆಶಾದಾಯಕವಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 18ನೇ ಸ್ಥಾನದಲ್ಲಿದ್ದು, ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿದೆ. ಮುಂದಿನ ಫಲಿತಾಂಶದಲ್ಲಿ ಇದಕ್ಕಿಂತ ಹೆಚ್ಚಿನ ಪ್ರಗತಿ ನಿರೀಕ್ಷಿಸಲಾಗಿದೆ. ಬದಲಾವಣೆ ಶಿಕ್ಷಣ, ಭವಿಷ್ಯದ ನಿರ್ಮಾಣ ಎಂಬ ಧ್ಯೇಯ ವಾಕ್ಯದಲ್ಲಿ ಶಾಲಾ ಶಿಕ್ಷಣ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಎಲ್ಲಾ ಶಿಕ್ಷಕ ವೃಂದ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿ ಮುನ್ನುಡಿ ಬರೆಯಬೇಕು ಆಶಿಸುವೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾತನಾಡಿ, ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಮಕ್ಕಳಿಗೆ ನೈತಿಕತೆ ಶಿಕ್ಷಣ ನೀಡುವ ಜೊತೆಗೆ ಸಮಾಜಕ್ಕೆ ಮಾದರಿಯುತ ವ್ಯಕ್ತಿತ್ವಗಳನ್ನು ರೂಪಿಸುವುದು ಶಿಕ್ಷಕರ ಹೊಣೆಯಾಗಿದೆ. ವಿಶ್ವದಲ್ಲೇ ಪವಿತ್ರವಾದ ವೃತ್ತಿಯೊಂದಿದ್ದರೇ ಶಿಕ್ಷಕ ವೃತ್ತಿಯಾಗಿದೆ ಎಂದರು.

ವಿಶ್ರಾಂತ ಪ್ರಾಧ್ಯಾಪಕ ಡಾ. ಶಿವಾನಂದ ಉಪನ್ಯಾಸದಲ್ಲಿ ಮಾತನಾಡಿ, ವಾಸ್ತವದಲ್ಲಿ ಶಿಕ್ಷಕರಿಗೆ ಅನೇಕ ತೊಂದರೆಗಳಿವೆ. ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಶಿಕ್ಷಕರನ್ನು ಗೌರವಯುತವಾಗಿ ದುಡಿಸಿಕೊಳ್ಳಲು ಚಿಂತನೆ ಅಗತ್ಯವಿದೆ. ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದರು.

ಬಳಿಕ ರಾಜ್ಯ ಮಟ್ಟದ ಉತ್ತಮ ಶಿಕ್ಷಕರು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರು ಸೇರಿದಂತೆ ನಿವೃತ್ತ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಹುಡಾ ಅಧ್ಯಕ್ಷ ಎಚ್.ಎನ್.ಎಫ್. ನಿಯಾಜಿ, ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಕೆ.ಶಿವಮೂರ್ತಿ, ಶಾಲಾ ಶಿಕ್ಷಣ ಇಲಾಖೆ ಡಯಟ್ ಉಪನಿರ್ದೇಶಕ ಜೆ.ಎಂ. ತಿಪ್ಪೇಸ್ವಾಮಿ, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಬಿಇಒ ಶೇಖರಪ್ಪ ಹೊರಪೇಟೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.