ತಾಲೂಕಿನಲ್ಲಿ ಬಾಲಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ಬಾಲಕ-ಬಾಲಕಿಯರು ಮನೆ ಬಿಟ್ಟು ಓಡಿಹೋಗುವ ಪ್ರಕರಣಗಳು ಆತಂಕಕಾರಿ ಬೆಳವಣಿಗೆಯಾಗಿದ್ದು, ಶಾಲೆಗಳಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಮುಚ್ಚಿಡದೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಬೇಕು.
ಕುಷ್ಟಗಿ: ಮಕ್ಕಳಿಗೆ ಕಾನೂನು ಅರಿವು, ನೈತಿಕ ಮೌಲ್ಯಗಳು, ವೈಯಕ್ತಿಕ ಸುರಕ್ಷತೆ ಹಾಗೂ ಲೈಂಗಿಕ ಶಿಕ್ಷಣದ ಕುರಿತು ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಗಂಗಾವತಿ ಡಿವೈಎಸ್ಪಿ ಜಯಪ್ಪ ನ್ಯಾಮೆಗೌಡರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂ ಹಾಲ್ನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಸುರಕ್ಷತಾ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಒಂದು ದಿನದ ಕಾನೂನು ಕಾರ್ಯಾಗಾರದಲ್ಲಿ ಜಾಗರೂಕತೆ, ಸುರಕ್ಷತೆ ಮತ್ತು ಸಂರಕ್ಷಣೆ ಪ್ರತಿ ಮಗುವಿನ ಹಕ್ಕು ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಬಾಲಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ಬಾಲಕ-ಬಾಲಕಿಯರು ಮನೆ ಬಿಟ್ಟು ಓಡಿಹೋಗುವ ಪ್ರಕರಣಗಳು ಆತಂಕಕಾರಿ ಬೆಳವಣಿಗೆಯಾಗಿದ್ದು, ಶಾಲೆಗಳಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಮುಚ್ಚಿಡದೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಬೇಕು ಎಂದು ಹೇಳಿದರು.ಇಂದಿನ ಯುವಕರು ಕಾನೂನಿನ ಅರಿವಿನ ಕೊರತೆಯಿಂದ ಅನೇಕ ತಪ್ಪು ಹಾಗೂ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಯುವಜನರಲ್ಲಿ ಕ್ರೌರ್ಯ ಮತ್ತು ದುಷ್ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ನಡೆಸುವ ಹಾಗೂ ಅವರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ವಹಿಸಬೇಕು ಎಂದರು.
ಕೊಪ್ಪಳ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ಎಸ್. ದರಗದ ಅವರು ಬಾಲ್ಯವಿವಾಹ ತಡೆ ಕಾಯ್ದೆಯ ಇತಿಹಾಸ ಹಾಗೂ ಕಾನೂನಿನ ವಿವಿಧ ತಿದ್ದುಪಡಿಗಳ ಕುರಿತು ವಿವರಿಸಿದರು. ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಕೆ.ಎಸ್. ರೆಡ್ಡಿ ಮಾತನಾಡಿ, ಶಿಕ್ಷಕರು ಮಕ್ಕಳ ಮಾನಸಿಕ ಆರೋಗ್ಯ ಹಾಗೂ ಸರ್ವಾಂಗೀಣ ಬೆಳವಣಿಗೆಯ ಕಡೆಗೂ ಗಮನಹರಿಸಬೇಕು ಎಂದರು.ಸಿಪಿಐ ವಿಶ್ವನಾಥ್ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೊಲೀಸ್ ಅಧಿಕಾರಿಗಳಷ್ಟೇ ಅಲ್ಲದೆ, ಪ್ರತಿಯೊಬ್ಬ ನಾಗರಿಕರೂ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದರು.
ಬಿಇಒ ಉಮಾದೇವಿ ಬಸಾಪುರ ಮಾತನಾಡಿ, ಮಕ್ಕಳಲ್ಲಿ ಕಾನೂನಿನ ಅರಿವು ಹಾಗೂ ಸುರಕ್ಷತೆಯ ಜಾಗೃತಿ ಮೂಡಿಸುವ ಮೂಲಕ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದರು.ಕುಷ್ಟಗಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ್, ಪಿಎಸ್ಐ ಹನುಮಂತಪ್ಪ ತಳವಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಿದ್ಯಾವತಿ ಎಸ್. ಗೋಟೂರ, ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮಾಲಾ ಪಿ., ಎಚ್.ಆರ್. ನಾಯಕ, ಪರಸಪ್ಪ ಗುಜಮಾಗಡಿ, ಎಂ. ಶಫಿ ಹೇರೂರು, ಶಶಿಧರ ಶೆಟ್ಟರ್, ಮರಿಯಪ್ಪ ಲಿಂಗದಳ್ಳಿ, ಶಾರದಾ ಎಸ್. ಯಾಳಗಿ, ಜೀವನಸಾಬ್ ಬಿನ್ನಾಳ, ನಟರಾಜ್ ಸೋನಾರ್ ಉಪಸ್ಥಿತರಿದ್ದರು.