ಶಿಕ್ಷಕರು ಮಕ್ಕಳಿಗೆ ಸತ್ಯ,ಸಂಸ್ಕಾರ ಕಲಿಸಿ: ಎಸ್.ಬಿ. ಮುನ್ನೊಳ್ಳಿ

| Published : Sep 27 2024, 01:28 AM IST

ಶಿಕ್ಷಕರು ಮಕ್ಕಳಿಗೆ ಸತ್ಯ,ಸಂಸ್ಕಾರ ಕಲಿಸಿ: ಎಸ್.ಬಿ. ಮುನ್ನೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ದೇವರ ಸಮಾನ, ಅವರಿಗೆ ಜ್ಞಾನ ದಾನ ಮಾಡುವ ಶಿಕ್ಷಕರು ಕೂಡ ದೇವರಿಗೆ ಸಮಾನ. ದೇಶದ ಶ್ರೇಷ್ಠ ಹುದ್ದೆಗಳಲ್ಲಿ ಶಿಕ್ಷಕ ಹುದ್ದೆ ಅತ್ಯಂತ ಗೌರವಯುತವಾಗಿದ್ದು, ಆ ಗೌರವವನ್ನು ಕಾಪಾಡಿಕೊoಡು ಮಕ್ಕಳಿಗೆ ಸತ್ಯ ಮತ್ತು ಸಂಸ್ಕಾರ ಕಲಿಸಿಕೊಡಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಬಿ. ಮುನ್ನೊಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಮಕ್ಕಳು ದೇವರ ಸಮಾನ, ಅವರಿಗೆ ಜ್ಞಾನ ದಾನ ಮಾಡುವ ಶಿಕ್ಷಕರು ಕೂಡ ದೇವರಿಗೆ ಸಮಾನ. ದೇಶದ ಶ್ರೇಷ್ಠ ಹುದ್ದೆಗಳಲ್ಲಿ ಶಿಕ್ಷಕ ಹುದ್ದೆ ಅತ್ಯಂತ ಗೌರವಯುತವಾಗಿದ್ದು, ಆ ಗೌರವವನ್ನು ಕಾಪಾಡಿಕೊoಡು ಮಕ್ಕಳಿಗೆ ಸತ್ಯ ಮತ್ತು ಸಂಸ್ಕಾರ ಕಲಿಸಿಕೊಡಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಬಿ. ಮುನ್ನೊಳ್ಳಿ ಹೇಳಿದರು.

ಪಟ್ಟಣದ ಕೆ.ಎ. ಲೋಕಾಪುರ ಮಹಾವಿದ್ಯಾಲಯದಲ್ಲಿ ಅಥಣಿ ರೋಟರಿ ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ತಾಲೂಕಿನ ಅತ್ಯುತ್ತಮ ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರತಿಯೊಬ್ಬರ ಜೀವನದಲ್ಲಿ ಜ್ಞಾನ ಅಮೂಲ್ಯವಾದ ಸಂಪತ್ತು. ಗಳಿಸಿದ ಹಣ, ಅಧಿಕಾರ ಕಳೆದುಕೊಳ್ಳಬಹುದು, ಆದರೆ, ಜ್ಞಾನ ಸಂಪತ್ತನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಅಂತಹ ಜ್ಞಾನ ಸಂಪತ್ತನ್ನು ಹಿಂದಿನ ಕಾಲದಲ್ಲಿ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಗುರುಗಳು ನೀಡುತ್ತಿದ್ದರು. ನಿಸ್ವಾರ್ಥ ಭಾವನೆಯಿಂದ ಮಕ್ಕಳಿಗೆ ಸನ್ಮಾರ್ಗ ತೋರಿಸುವವರು ಗುರುಗಳು. ಶಿಕ್ಷಕರು ಗುರುಗಳಲ್ಲ, ಸಂಬಳದ ಉಪಾಧ್ಯಾಯರು ಎಂಬುದನ್ನು ಪ್ರತಿಯೊಬ್ಬ ಶಿಕ್ಷಕರು ತಿಳಿದುಕೊಂಡಿರಬೇಕು ಎಂದು ಹೇಳಿದರು.

ಶ್ರೇಷ್ಠ ಭಾರತವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ರಾಷ್ಟ್ರೀಯ ನಾಯಕರನ್ನು ರೂಪಿಸುವ ಶಕ್ತಿ ಶಿಕ್ಷಕರಿಗಿದೆ. ಶಿಕ್ಷಕರ ಸೇವೆಯನ್ನು ಸ್ಮರಿಸಿ ಅನೇಕ ಸಂಘ-ಸಂಸ್ಥೆಗಳು ಮತ್ತು ಸರ್ಕಾರ ಪ್ರಶಸ್ತಿ ನೀಡಿ ಗೌರವಿಸುತ್ತವೆ. ರೋಟರಿ ಸಂಸ್ಥೆಯವರು ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ನೇಶನ್ ಬಿಲ್ಡರ್ ಅವಾರ್ಡ್ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಪ್ರಶಸ್ತಿಗಳು ನಮ್ಮ ಗೌರವ ಹೆಚ್ಚಿಸುವುದರ ಜೊತೆಗೆ ಜವಾಬ್ದಾರಿ ಹೆಚ್ಚಿಸುತ್ತವೆ ಎಂದು ಹೇಳಿದರು.

ಅತಿಥಿಗಳಾಗಿ ಆರ್.ಎಸ್.ಎಸ್ ಮುಖಂಡ, ಚಿಂತಕ ಅರವಿಂದರಾವ ದೇಶಪಾಂಡೆ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕಲಿಸುವುದರ ಜೊತೆಗೆ ರಾಷ್ಟ್ರಪ್ರೇಮ ಕಲಿಸಿಕೊಡಬೇಕು. ಭಾರತ ವಿಶ್ವಗುರು ಸ್ಥಾನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ಗುರುವಿನ ಸ್ಥಾನದಲ್ಲಿರುವ ಶಿಕ್ಷಕರು ರಾಷ್ಟ್ರ ಕಟ್ಟುವ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮoಗಸೂಳಿ, ಸನ್ಮಾನಿತರ ಪರವಾಗಿ ಶಿಕ್ಷಕ ಎಸ್‌.ಎಂ. ಜನಗೌಡ, ಪ್ರಾಚಾರ್ಯ ಡಾ. ಬಿ.ಎಸ್. ಕಾಂಬಳೆ, ಆರ್.ಎಂ. ದೇವರೆಡ್ಡಿ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಅರುಣ ಸೌದಾಗರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಥಣಿ ತಾಲೂಕಿನ ವಿವಿಧ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದ ಪ್ರಾಚಾರ್ಯರಿಗೆ 2024ನೇ ಸಾಲಿನ ರೋಟರಿ ನೇಶನ್ ಬಿಲ್ಡರ್ ಅವಾರ್ಡ್ ನೀಡಿ ಗೌರವಿಸಲಾಯಿತು.

ರೋಟರಿ ಇನ್ನರವ್ಹಿಲ್ ಕ್ಲಬ್ ಅಧ್ಯಕ್ಷ ತೃಪ್ತಿ ಕುಲಕರ್ಣಿ, ಕಾರ್ಯದರ್ಶಿ ಲಲಿತಾ ಮೇಕನಮರಡಿ, ಖಜಾಂಚಿ ಸುನಿತಾ ದೇಸಾಯಿ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಸಚಿನ ದೇಸಾಯಿ, ಖಜಾಂಚಿ ಶೇಖರ್ ಕೋಲಾರ, ಬಾಲಚಂದ್ರ ಬುಕಿಟಗಾರ, ಸಂತೋಷ ಬೊಮ್ಮಣ್ಣವರ, ಅನಿಲ ದೇಶಪಾಂಡೆ, ಸುರೇಶ ಬಳ್ಳೊಳ್ಳಿ ಸೇರಿದಂತೆ ಇತರರು ಇದ್ದರು. ಅರುಣ ಸೌದಾಗರ ಸ್ವಾಗತಿಸಿದರು. ಶ್ರೀಕಾಂತ ಅಥಣಿ ನಿರೂಪಿಸಿದರು. ಮೇಘರಾಜ ಪಾರಮಾರ ವಂದಿಸಿದರು.