ಸಾರಾಂಶ
ಬೆಂಗಳೂರು : ಎಸ್ಸೆಸ್ಸೆಲ್ಸಿ ‘ಪರೀಕ್ಷೆ 2’ಕ್ಕೆ ನೋಂದಾಯಿಸಿರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರೌಢ ಶಾಲಾ ಶಿಕ್ಷರು ಬೇಸಿಗೆ ರಜೆಯಲ್ಲಿ ವಿಶೇಷ ತರಗತಿ ನಡೆಸುವಂತೆ ಮಾಡಿರುವ ನಿರ್ದೇಶನ, ಆದೇಶಗಳನ್ನು ವಾಪಸ್ ಪಡೆಯುವಂತೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ ಮತ್ತು ಕಾರ್ಯದರ್ಶಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಅರುಣ್ ಶಹಾಪೂರ ಅವರು ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಶಿಕ್ಷಕರು ರಜಾ ಸಹಿತ ನೌಕರರ ವರ್ಗಕ್ಕೆ ಸೇರಿದ್ದು ರಜಾ ಅವಧಿಯಲ್ಲಿ ವೈದ್ಯಕೀಯ ಚಿಕಿತ್ಸೆಗಳು, ಕುಟುಂಬ ಪ್ರವಾಸ ಮತ್ತು ಕುಟುಂಬದ ಪೂರ್ವ ನಿಯೋಜಿತ ಕಾರ್ಯಗಳಲ್ಲಿ ತೊಡಗಿದ್ದಾರೆ. ಹೀಗಾಗಿ ಅವರನ್ನು ದಿಢೀರನೆ ವಿಶೇಷ ತರಗತಿ ನಡೆಸಲು ಕೂಡಲೇ ಶಾಲೆಗಳಿಗೆ ಹಾಜರಾಗುವಂತೆ ಶಿಕ್ಷಣ ಇಲಾಖೆ ಮಾಡಿರುವ ಆದೇಶದಿಂದ ಆಘಾತವುಂಟಾಗಿದೆ. ಪರೀಕ್ಷೆ, ಮೌಲ್ಯಮಾಪನ, ಚುನಾವಣಾ ಕಾರ್ಯ ಮುಗಿಸಿ ಈಗಷ್ಟೇ ರಜೆಗೆ ತೆರಳಿರುವ ಶಿಕ್ಷಕರು ಖಿನ್ನತೆಗೆ ಒಳಗಾಗಿದ್ದಾರೆ. ಹಾಗಾಗಿ ಕೂಡಲೇ ಆದೇಶ ವಾಪಸ್ ಪಡೆಯಬೇಕೆಂದು ಮನವಿ ಮಾಡಿದರು.