ಸಾರಾಂಶ
ಮಕ್ಕಳ ಸಂಖ್ಯೆ ಮಿತಿ ನಿಯಮದಿಂದ ಶಾಲೆಗಳು ಮುಚ್ಚುತ್ತಿವೆ. ಹಾಗಾಗಿ ಸರ್ಕಾರ ನಿಯಮ ರದ್ದುಪಡಿಸಬೇಕು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಪ್ರತಿ ತರಗತಿಯಲ್ಲಿ ಕನಿಷ್ಠ 25 ಮಕ್ಕಳ ಮಿತಿಯನ್ನು ಸಡಿಲಗೊಳಿಸಬೇಕು ಹಾಗು ಶಿಕ್ಷಕರಿಗೆ ಓ.ಪಿ.ಎಸ್. ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕೊಡಗು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರು, ಅನುದಾನಿತ ನೌಕರರ ಸಂಘ ವತಿಯಿಂದ ಶಾಸಕ ಡಾ. ಮಂತರಗೌಡ ಅವರಿಗೆ ಭಾನುವಾರ ಶಾಸಕರ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.ಜಿಲ್ಲೆಯಲ್ಲಿನ ಪ್ರೌಢಶಾಲೆಗಳಲ್ಲಿ 8,9, 10 ನೇ ತರಗತಿಗಳಲ್ಲಿ 25 ಮಕ್ಕಳ ಸಂಖ್ಯೆಗಿಂತ ಕಡಿಮೆಯಿರುವ ಶಾಲೆಗಳನ್ನು ಮುಚ್ಚುತ್ತಿರುವುದರಿಂದ ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಎಲ್ಲಾ ಕಡೆ ಅಗತ್ಯಕ್ಕಿಂತ ಹೆಚ್ಚು ಪ್ರೌಢಶಾಲೆಗಳ ಆರಂಭ ಹಾಗು ಅದರಲ್ಲೂ ಇಂಗ್ಲೀಷ್ ಮಾಧ್ಯಮ. ಪ್ರೌಢಶಾಲೆಗಳನ್ನು ಹೆಚ್ಚು ತೆರೆದಿರುವ ಕಾರಣ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. 25 ಮಕ್ಕಳ ಸಂಖ್ಯೆಯ ಮಿತಿಯನ್ನು ಕಡಿತಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಕ್ಕಳ ಸಂಖ್ಯೆಯ ಮಿತಿ ನಿಯಮದಿಂದ ಸಾಕಷ್ಟು ಶಾಲೆಗಳು ಮುಚ್ಚುತ್ತಿವೆ, ಹಾಗಾಗಿ ಸರ್ಕಾರ ಈ, ನಿಯಮವನ್ನು ರದ್ದು ಪಡಿಸಬೇಕು, ಹೆಚ್ಚುವರಿಯಾದ ಅನುದಾನಿತ ಶಿಕ್ಷಕರನ್ನು ಶಾಶ್ವತವಾಗಿ ಸರ್ಕಾರಿ ಶಾಲೆಗಳಿಗೆ ನಿಯೋಜಿಸಬೇಕು, ಅನುದಾನಿತ ಶಾಲೆಗಳ ಶಿಕ್ಷಕರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿಲಾಗಿದೆ.ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೆ ತರಬೇಕು, ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಪರೀಕ್ಷೆಯನ್ನು ಕೈಬಿಡಬೇಕು. ಬಿ.ಎಲ್.ಒ. ಮತ್ತು ಶೈಕ್ಷಣೇಕೇತರ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶಿಕ್ಷಣ ಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಶಾಸಕರು, ಅಧಿಕಾರಿಗಳ ಸಭೆಯನ್ನು ಕರೆದು ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು. ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷ ಎಚ್. ಜಿ. ಕುಮಾರ್, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಂ.ಎಸ್, ಮಹೇಂದ್ರ, ಸೋಮವಾರಪೇಟೆ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷ ರತ್ನ ಕುಮಾರ್, ಸಂಘದ ಪದಾಧಿಕಾರಿಗಳಾದ ಎ. ಸಿ. ಮಂಜುನಾಥ್, ರವಿಕೃಷ್ಣ, ಕೃಷ್ಣ ಚೈತನ್ಯ, ನಾಗರಾಜ್, ಮೆಹಬೂಬ ಸಾಬ್, ಗಿಡ್ಡಯ್ಯ, ಶರತ್ ಇದ್ದರು.