ಮಾಗಡಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್ ಹಾಗೂ ರಾಜ್ಯದ ಮೈತ್ರಿಕೂಟದ ನಾಲ್ಕೂ ಸ್ಥಾನಗಳ ಗೆಲುವು ಮುಂದಿನ ಪಂಚಾಯತಿ ಹಾಗೂ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದ್ದು, ಶಿಕ್ಷಕರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಎ.ಎಚ್.ಬಸವರಾಜು ವಾಗ್ದಾಳಿ ನಡೆಸಿದರು

ಮಾಗಡಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್ ಹಾಗೂ ರಾಜ್ಯದ ಮೈತ್ರಿಕೂಟದ ನಾಲ್ಕೂ ಸ್ಥಾನಗಳ ಗೆಲುವು ಮುಂದಿನ ಪಂಚಾಯತಿ ಹಾಗೂ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದ್ದು, ಶಿಕ್ಷಕರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಎ.ಎಚ್.ಬಸವರಾಜು ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ತೀರ್ಪು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ. ರಂಗನಾಥ್ ಗೆಲುವು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಹಿಂದಿನ ಎರಡು ಚುನಾವಣೆಗಳಲ್ಲಿ ಸೋಲು ಕಂಡಿದ್ದ ರಂಗನಾಥ್ ಧೃತಿಗೆಡದೆ ಹೋರಾಟ ಮುಂದುವರಿಸಿದ್ದರು. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ, ಮನೆ-ಮನೆ ಸಂಪರ್ಕ ಅಭಿಯಾನ ನಡೆಸಿ ಸಂಘಟಿತರಾಗಿ ಶ್ರಮಿಸಿದ್ದರಿಂದ ನಿರೀಕ್ಷೆಗೂ ಮೀರಿದ ಗೆಲುವು ಸಾಧ್ಯವಾಗಿದೆ ಎಂದು ತಿಳಿಸಿದರು.

ಚುನಾವಣೆಗೂ ಮುನ್ನ ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ ಮುಂತಾದ ಕ್ಷೇತ್ರಗಳ ಶಿಕ್ಷಕರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದ ಸಂದರ್ಭದಲ್ಲಿಯೇ ಬದಲಾವಣೆಯ ಮುನ್ಸೂಚನೆ ಸಿಕ್ಕಿತ್ತು. ಪ್ರಜ್ಞಾವಂತ ಶಿಕ್ಷಕರಿಗೆ ಅಭಿನಂದನೆಗಳು. ಶಾಲೆಯಲ್ಲಿ ಅಂತಿಮ ಪರೀಕ್ಷೆಗೆ ಮುನ್ನ ಪ್ರಿಲಿಮಿನರಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡುವಂತೆ, ಸಮಾಜಕ್ಕೆ ಮಾರ್ಗದರ್ಶನ ನೀಡುವ ಶಿಕ್ಷಕರು, ಈ ಫಲಿತಾಂಶದ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಫೇಲ್ ಮಾಡಿ, ಟಿ.ಸಿ ಕೊಟ್ಟು ಕಳುಹಿಸಿದ್ದಾರೆ ಎಂದು ಲೇವಡಿ ಮಾಡಿದರು.

2028ರ ವಿಧಾನಸಭಾ ಚುನಾವಣೆ ದಿಕ್ಸೂಚಿ:

ಪರಿಷತ್ತಿನ ನಾಲ್ಕು ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ದೊರೆತ ಭಾರಿ ಹಿನ್ನಡೆ. ಈ ಗೆಲುವು ಮುಂದಿನ 2028ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಿಂದ ಬೇರು ಸಮೇತ ಕಿತ್ತೊಗೆದು ಎನ್‌ಡಿಎ ಅಧಿಕಾರಕ್ಕೆ ಬರಲು ಬಲವಾದ ಅಡಿಪಾಯ ಹಾಕಿದೆ. ಮುಂಬರುವ ಪಂಚಾಯಿತಿ ಚುನಾವಣೆಗಳಲ್ಲೂ ಇದೇ ಮಾದರಿಯ ವಿಜಯೋತ್ಸವ ಮುಂದುವರಿಸಲಿವೆ ಎಂದರು.

ಮುಖ್ಯಮಂತ್ರಿ ಹೇಳಿಕೆಗೆ ತಿರುಗೇಟು: ಅಭಿವೃದ್ಧಿ ಸಾಧ್ಯವಿಲ್ಲದಿದ್ದರೆ ರಾಜೀನಾಮೆ ಕೊಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಸರ್ಕಾರದ ಬಳಿ ದುಡ್ಡಿಲ್ಲ, ನಾವೇನು ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲುತ್ತಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಹಣವಿಲ್ಲದಿದ್ದರೆ ಅಧಿಕಾರ ಏಕೆ ಬೇಕು? ಕೂಡಲೇ ರಾಜೀನಾಮೆ ನೀಡಿ, ದೊಡ್ಡಾಲಹಳ್ಳಿಗೆ ಹೋಗಿ ರೈತರ ಜಮೀನಿನಲ್ಲಿ ಕೆಲಸ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಕೆಂಗಲ್ ಹನುಮಂತಯ್ಯನವರಂತಹ ಮಹನೀಯರು ಕಟ್ಟಿದ ವಿಧಾನಸೌಧದ ಗೌರವವನ್ನು ಕಾಪಾಡಬೇಕು. ಸ್ಟಿಂಗ್ ಆಪರೇಷನ್ ಮೂಲಕ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಪಮಾನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ನೆಲ ಕಚ್ಚುವ ಹಂತಕ್ಕೆ ತಲುಪಿದೆ. ಅಧಿಕಾರಿಗಳು ಹಾಗೂ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ದಬ್ಬಾಳಿಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೆ ಕಾರ್ಯಕರ್ತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಬಸವರಾಜು ಖಂಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಂಡಿ ನಟರಾಜ್, ರವಿ, ಯತೀಶ್, ಕಿರಣ್ ಕುಮಾರ್ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿಯಲ್ಲಿ ಬಿಜೆಪಿ ಹಿರಿಯ ಮುಖಂಡ ಎ.ಎಚ್.ಬಸವರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.