ಸಾರಾಂಶ
ರೋಣ: ಶಿಕ್ಷಕರು ವಿಷಯದಾಳಕ್ಕಿಳಿದು, ಭಾವನೆಯೊಂದಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಿದಲ್ಲಿ ಮಾತ್ರ ಮನಕ್ಕೆ ತಲುಪುವದು. ಈ ದಿಶೆಯಲ್ಲಿ ಶಿಕ್ಷಕರಲ್ಲಿ ಅಪಾರ ಜ್ಞಾನ ಅತೀ ಮುಖ್ಯವಾಗಿದೆ ಎಂದು ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಹೇಳಿದರು.
ಅವರು ಗುರುವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಗುರುಶ್ರೀ ಮನೋಚಾರ್ಯ ಪ್ರತಿಷ್ಠಾನ ಬದಾಮಿ ವತಿಯಿಂದ ಗುರುಸ್ಮರಣೆ -2025 ಅಂಗವಾಗಿ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ವಿಶೇಷ ತರಬೇತಿ, ಉಪನ್ಯಾಸ, ಸ್ಪರ್ಧಾತ್ಮಕ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಪರಿಣಾಮಕಾರಿ ಬೋಧನೆಯು ವಿದ್ಯಾರ್ಥಿಗಳ ಸ್ಮೃತಿ ಪಟಲದಲ್ಲಿ ಸದಾ ಉಳಿಯುತ್ತದೆ. ಭವಿಷ್ಯದ ಜೀವನ ಸುಂದರಗೊಳ್ಳಲು ಶಿಕ್ಷಣ ಬುನಾದಿಯಾಗಿದೆ. ವಿದ್ಯಾರ್ಥಿಗಳ ಮನಸ್ಸಿನಾಳಕ್ಕೆ ಇಳಿಯುವಲ್ಲಿ ಶಿಕ್ಷಕರು ಬೋಧಿಸಬೇಕು. ಬೋಧನೆ ವಿದ್ಯಾರ್ಥಿಗಳ ಮನದಾಳಕ್ಕೆ ಇಳಿಯುತ್ತದೆಯೋ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಗುರುಕುಲ ಶಿಕ್ಷಣ ಪದ್ಧತಿಯಿಂದಿಡಿದು ಆಧುನಿಕ ಶಿಕ್ಷಣ ಪದ್ಧತಿಯಲ್ಲಿನ ಕಲಿಕಾ ಅಂಶಗಳ ಜ್ಞಾನ ಹೊಂದಬೇಕು. ಶಿಕ್ಷಕ ಸಮಾಜಕ್ಕೆ ಮಾದರಿ, ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದು, ಸಮಾಜ ಸನ್ಮಾರ್ಗದತ್ತ ಸಾಗಲು ಶಿಕ್ಷಕರ ಪಾತ್ರ ಅತೀ ಪ್ರಮುಖವಾಗಿದೆ. ನಿರಂತರ ಓದಿನಿಂದ ಜ್ಞಾನಬಲ ಹೆಚ್ಚಳವಾಗುತ್ತದೆ. ಜೊತೆಗೆ ಶಬ್ದ ಭಂಡಾರ ವೃದ್ಧಿಯಾಗುತ್ತದೆ. ವ್ಯಕ್ತಿ ಪುಸ್ತಕ ಪ್ರೇಮಿಯಾಗಬೇಕು ಅಂದಾಗ ಜಾಗತಿಕ ಸನ್ನಿವೇಶ, ವಿದ್ಯಮಾನಗಳ ಜ್ಞಾನ ಸಂಪಾದಿಸಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಬದಾಮಿ ಎಸ್.ಜಿ.ಎಂ.ಕೆಪಿಯಿ ಕಾಲೇಜ್ ನಿವೃತ್ತ ಪ್ರಾಚಾರ್ಯ ಆರ್.ಬಿ. ಸಂಕದಾಳ ಮಾತನಾಡಿ, ಗುರುಶ್ರೀ ಮನೋಚಾರ್ಯ ಪ್ರತಿಷ್ಠಾನ ವತಿಯಿಂದ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಗೈದ ಸಾಧಕರನ್ನು, ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸಿ, ಗೌರವಿಸುತ್ತಾ ಬಂದಿದೆ. ಜೊತೆಗೆ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರಿಕ್ಷೆಗಳನ್ನು ಭಯಮುಕ್ತರಾಗಿ ಬರೆಯುವ ದಿಶೆಯಲ್ಲಿ ತರಬೇತಿ ನೀಡುವದು, ಪ್ರಬಂಧ ಸ್ಪರ್ಧೆ, ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ನಾನಾ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವ ಗುರುಶ್ರೀ ಮನೋಚಾರ್ಯ ಪ್ರತಿಷ್ಠಾನ ಕಾರ್ಯ ಶ್ಲಾಘನೀಯವಾಗಿದೆ ಎಂದರು.ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ.ವೈ.ಎನ್. ಪಾಪಣ್ಣನವರ ಉದ್ಘಾಟಿಸಿದರು.
ಪ್ರಥಮ ಚಿಕಿತ್ಸೆ ಕುರಿತು ಡಾ. ಹರ್ಷಾ ಕ್ಯಾಲಕೊಂಡ, ಕ್ರೀಡಾ ಯೋಗ ಕುರಿತು ಡಾ. ಪ್ರವೀಣ ಅಂಗಡಿ ತರಬೇತಿ ನೀಡಿದರು. ಪರಿಣಾಮಕಾರಿ ಬೋಧನೆ ಕುರಿತು ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ, ಯುವ ಸ್ವಾಸ್ಥ್ಯ ಕುರಿತು ಡಾ. ಪ್ರವೀಣ ಅಂಗಡಿ ಉಪನ್ಯಾಸ ನೀಡಿದರು.ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ಪರ್ಧಾತ್ಮಕ ಕಲಿಕಾ ಪರೀಕ್ಷೆ, ಚಿತ್ರಕಲಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಜಾನಪದ ಗಾಯನ ಪ್ರಶ್ನೆ ಹಾಗೂ ಆಶು ಭಾಷಣ ಸ್ಪರ್ಧೆ ಜರುಗಿದ್ದು, ವಿಜೇತರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸುರೇಶ ಕುಲಕರ್ಣಿ ಹಾಗೂ ಬಾಗಲಕೋಟಿ, ಮಂಡ್ಯ ಜಿಲ್ಲೆಯ ಆಯ್ದ ಶಿಕ್ಷಕರಿಗೆ ಗುರುಶ್ರೀ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದಾಜಿಬಾ ಜಗದಾಳೆ, ನಿವೃತ್ತ ಉಪನ್ಯಾಸಕ ಎ. ರಾಮಚಂದ್ರಪ್ಪ, ವೀರಣ್ಣ ಮನೋಚಾರ್ಯ, ಸಂದೇಶ ಮನೋಚಾರ್ಯ, ಎಚ್.ಆರ್. ದೊಡ್ಡಮನಿ, ಎಸ್.ಆರ್. ಐಹೊಳ್ಳಿ, ಎಸ್.ಎಸ್. ಗೋದಿ, ಜಿ.ಎನ್ .ನಾಯಕ, ಜಿ.ಎ. ವೀರಾಪೂರ, ಮೀನಾಕ್ಷಿ ಗುಂಡಗೋಪುರಮಠ, ಮೌನೇಶ ಬಡಿಗೇರ ಸೇರಿದಂತೆ ಮುಂತಾದವರು ಉಪಸ್ಥಿತಿರಿದ್ದರು. ಆಕಾಶ ಮನೋಚಾರ್ಯ ಸ್ವಾಗತಿಸಿದರು .ಸುನೀಲ ಖಾಸನಿಸ್ ನಿರೂಪಿಸಿದರು.