ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವೃತ್ತಿಯಿಂದ ನಿವೃತ್ತಿಯಾಗುತ್ತಿರುವ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಪ್ರೊ.ಕೆ. ಯಶೋದಾ ನಂಜಪ್ಪ ಅವರಿಗೆ ಯುವರಾಜ ಕಾಲೇಜು ಅಧ್ಯಾಪಕರ ಬಳಗ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ಬೀಳ್ಕೋಡುಗೆ ಸಮಾರಂಭ ನಡೆಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಕೆ. ಯಶೋದಾ ನಂಜಪ್ಪ ಅವರು, ಕೊಡಗಿನ ಯೋಧ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾನು ತೀವ್ರ ಆಸಕ್ತಿಯಿಂದ ಆಯ್ಕೆ ಮಾಡಿಕೊಂಡಿದ್ದು ಅಧ್ಯಾಪಕ ವೃತ್ತಿ. ಇದು ನನ್ನ ಜೀವನದಲ್ಲಿ ಸಾರ್ಥಕತೆಯನ್ನು ತಂದಿದೆ. ಕುಟುಂಬ ಹಾಗೂ ವಿದ್ಯಾರ್ಥಿಗಳೊಂದಿಗೆ ಒತ್ತಡ ರಹಿತವಾಗಿ ಅಮೂಲ್ಯವಾದ ಕ್ಷಣಗಳನ್ನು ಕಳೆಯಲು ಸಾಧ್ಯವಾಗಿದೆ. ನಿರಂತರವಾದ ಓದು ಮತ್ತು ಬೋಧನೆ ಬದುಕಿನಲ್ಲಿ ಸಂತೋಷ ಮತ್ತು ಸಂತೃಪ್ತಿಯನ್ನು ಹೆಚ್ಚಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ ಮಾತನಾಡಿ, ತಮ್ಮ ವೃತ್ತಿ ಬದುಕಿನುದ್ದಕ್ಕೂಅತ್ಯಂತ ಪ್ರಾಮಾಣಿಕತೆ, ನಿಷ್ಠೆ ಹಾಗೂ ವಿದ್ಯಾರ್ಥಿ ಸ್ನೇಹಿಯಾಗಿ, ಉತ್ತಮ ಬೋಧಕರಾಗಿ, ಶಿಸ್ತು, ಸಂಯಮದಿಂದ ಕರ್ತವ್ಯ ನಿರ್ವಹಿಸಿರುವ ಪ್ರೊ.ಕೆ. ಯಶೋಧ ನಂಜಪ್ಪ ಅವರು ಯುವ ಅಧ್ಯಾಪಕರಿಗೆ ಒಂದು ಮಾದರಿಯಾಗಿದ್ದಾರೆ. ಇಂಗ್ಲಿಷ್ ವಿಭಾಗದಲ್ಲಿ ಮೂರುವರೆ ದಶಕಗಳ ಕಾಲ ಅಧ್ಯಾಪಕರಾಗಿ, ಸಹಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಪರೀಕ್ಷಾ ಮಂಡಳಿ ಮತ್ತು ಅಧ್ಯಯನ ಮಂಡಳಿ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಬಹಳ ಮುಖ್ಯವಾಗಿ ವಿದ್ಯಾರ್ಥಿಗಳ ಮೆಚ್ಚಿನ ಗುರುವಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.ಕಾಲೇಜಿನ ಆಡಳಿತಾಧಿಕಾರಿ ಡಾ.ಕೆ. ಅಜಯಕುಮಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ನಾಗೇಶ್ ಬಾಬು, ಐಕ್ಯೂಎಸಿ ಸಂಯೋಜಕಡಾ.ಪಿ.ಕೆ. ಮಹೇಶ್ವರ್, ಪ್ರಾಧ್ಯಾಪಕರಾದ ಡಾ.ಬಿ.ಎಂ. ವೆಂಕಟೇಶ್, ಡಾ. ವಿದ್ಯಾ, ಡಾ. ರೂಬಿ ಸೆಲಿಸ್ಟೆನಾ, ಡಾ. ಸಿ.ಡಿ.ಪರಶುರಾಮ, ಡಾ. ವಿಜಯಕುಮಾರ್ ಎಂ. ಬೊರಟ್ಟಿ, ಡಾ. ಶೇಖರ್ ನಾಯಕ್, ಡಾ.ಜೆ. ರಾಜೇಶ್, ಡಾ. ಚಂದ್ರಯ್ಯ, ಡಾ. ಕೃಷ್ಣ, ಡಾ. ಶಿವಶಂಕರ್, ಡಾ.ಎಂ.ಎನ್ . ಕುಮಾರ್, ಡಾ. ಜಯಂತ್, ಪ್ರೊ. ಜಿ. ಕೃಷ್ಣಮೂರ್ತಿ, ಅಧ್ಯಾಪಕರ ಬಳಗದ ಕಾರ್ಯದರ್ಶಿ ಡಾ.ಎಸ್. ಸುರೇಶ್ ಇದ್ದರು.