ಸಾರಾಂಶ
ಕೊಟ್ಟೂರು: ಕೆಳ ಹಂತದಿಂದ ಉನ್ನತ ಹಂತದವರೆಗೂ ವಿದ್ಯೆ, ಸಂಸ್ಕಾರ ಕಲಿಸುವ ಶಿಕ್ಷಕ ವೃತ್ತಿಗೆ ಸಮನಾಗಿ ಬೆಲೆ ಕಟ್ಟಲಾಗದು. ಎಲ್ಲರಿಂದಲೂ ಗೌರವ ಪಡೆಯುವ ಏಕೈಕ ವೃತ್ತಿಯೆಂದರೆ ಅದು ಶಿಕ್ಷಕರದ್ದು ಎಂದು ಹ.ಬೊ.ಹಳ್ಳಿ ಶಾಸಕ ಕೆ.ನೇಮರಾಜ ನಾಯ್ಕ ಹೇಳಿದರು.
ಪಟ್ಟಣದ ಶ್ರೀ ಮರುಳಸಿದ್ದೇಶ್ವರ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಶನಿವಾರ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣರ 130ನೇ ಜಯಂತಿ ಅಂಗವಾಗಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಪುರಾತನ ಕಾಲದಿಂದಲೂ ವಿದ್ಯೆ ನೀಡುವ ಗುರುವಿಗೆ ಮಹತ್ತರ ಸ್ಥಾನ ನೀಡಲಾಗಿದೆ. ವಿಶ್ವದಲ್ಲಿಯೇ ಪವಿತ್ರವಾದ ಶಿಕ್ಷಕ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಎಂದಿಗೂ ಮಾನ್ಯತೆ ಇದೆ. ತಮಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಅಂತಹ ಶಿಕ್ಷಕರಿಗೆ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳು ಸವಾಲಾಗಿ ಪರಿಣಮಿಸಿವೆ. ಒಪಿಎಸ್ ಸೇರಿ ಹಲವು ಬೇಡಿಕೆಗಳ ಕುರಿತು ಶಿಕ್ಷಕರ ಸಂಘದವರು ಸಲ್ಲಿಸಿರುವ ಮತ್ತು ನಿವೃತ್ತ ಶಿಕ್ಷಕರಿಗೆ 7ನೇ ವೇತನ ಆಯೋಗದ ಶಿಫಾರಸಿನಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವಂತೆ ಚಳಗಾಲದ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವೆ. ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆರಂಭಕ್ಕೆ ಶ್ರಮಿಸುವೆ. ಗುರು ಭವನ ನಿರ್ಮಾಣಕ್ಕೆ ತಹಸೀಲ್ದಾರರಿಗೆ ಜಾಗ ಗುರುತಿಸಲು ಸೂಚಿಸಿದ್ದು, ₹50 ಲಕ್ಷ ಅನುದಾನ ನೀಡುವುದಾಗಿ ಹೇಳಿದರು.
ತಾಲೂಕು ಕೇಂದ್ರ ಕೊಟ್ಟೂರಿನಲ್ಲಿ ತಾಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಕೆಕೆಆರ್‌ಡಿಬಿಯಿಂದ ₹8 ಕೋಟಿ, ಕಂದಾಯ ಇಲಾಖೆಯ ₹7 ಕೋಟಿ ವೆಚ್ಚದಲ್ಲಿ ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಕೊಟ್ಟೂರಿಗೆ ನಿರಂತರ ಕುಡಿಯುವ ನೀರಿನ ಯೋಜನೆಗೆ ಅಮೃತ ಯೋಜನೆಯಡಿ ಮಂಜೂರಾಗಿರುವ ₹83 ಕೋಟಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುವುದು. ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡಲು ಸರಕಾರದಲ್ಲಿ ಹಣವೇ ಇಲ್ಲವಾಗಿದೆ. ಆದರೂ ಕೇಂದ್ರ ಸರಕಾರದ ಯೋಜನೆಗಳು, ಕೆಕೆಆರ್‌ಡಿಬಿ, ಡಿಎಂಎಫ್ ಇತರೆ ಯೋಜನೆಗಳಿಂದ ಅನುದಾನ ತಂದು ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದರು.ಶಿಕ್ಷಕರ ದಿನಾಚರಣೆ ಸಮಿತಿ ಅಧ್ಯಕ್ಷ ತಾಪಂ ಇಒ ಡಾ. ಪಿ. ಆನಂದ್‌ಕುಮಾರ ಮಾತನಾಡಿ, ಬರುವ ವರ್ಷದಿಂದ ಶಿಕ್ಷಕರ ದಿನಾಚರಣೆಯನ್ನು ಸೆ.5ರಂದೇ ಆಚರಿಸಲು ಶಾಸಕರು ಸಹಕರಿಸಬೇಕು ಎಂದರು.
ಬಿಇಒ ಪದ್ಮನಾಭ ಕರ್ಣಂ ಪ್ರಾಸ್ತಾವಿಕ ಮಾತನಾಡಿದರು. ನಿಂಬಳಗೇರಿ ಸರಕಾರಿ ಪ್ರೌಢ ಶಾಲೆ ಕನ್ನಡ ಶಿಕ್ಷಕ ಕೋಡಿಹಳ್ಳಿ ವೀರಭದ್ರಪ್ಪ ವಿಶೇಷ ಉಪನ್ಯಾಸ ನೀಡಿದರು.ತಾಲೂಕಿನಲ್ಲಿ ನಿವೃತ್ತರಾದ ಪ್ರೌಢ, ಪ್ರಾಥಮಿಕ ಶಾಲೆ ಶಿಕ್ಷಕರನ್ನು, ಅತ್ಯುತ್ತಮ ಶಿಕ್ಷಕರನ್ನು ಮತ್ತು ಸೇವಾವಧಿಯಲ್ಲಿ ನಿಧನರಾದ ಮೃತ ಶಿಕ್ಷಕರ ಕುಟುಂಬದವರನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್ ಜಿ.ಕೆ. ಅಮರೇಶ, ಪಪಂ ಅಧ್ಯಕ್ಷೆ ಬಿ. ರೇಖಾರಮೇಶ, ಉಪಾಧ್ಯಕ್ಷ ಜಿ.ಸಿದ್ದಯ್ಯ, ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಬೇವೂರು ಸಿದ್ದೇಶ, ತಾಲೂಕು ಬಿಸಿಯೂಟ ಅಧಿಕಾರಿ ಆಂಜನೇಯ, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗೇಶ ಇತರರು ಇದ್ದರು. ಶಿಕ್ಷಕರಾದ ಮುಕ್ತೇಶ, ಬಸಮ್ಮ ನಿರ್ವಹಿಸಿದರು.