ಸಾರಾಂಶ
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇರುವ ಬೇರೆ ಬೇರೆ ವೃತ್ತಿಗಳಿಗಿಂತ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು ಎಂದು ದಂಡಿಗನಹಳ್ಳಿ ಹೋಬಳಿ ಕುಂಬೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಬಾಬು ಎಸ್ ಅಭಿಪ್ರಾಯಪಟ್ಟರು. ಶಿಕ್ಷಕರು ತಮ್ಮ ಅಪಾರವಾದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದು ಅವರಿಗೆ ತಮ್ಮ ಜೀವನ ರೂಪಿಸಿಕೊಳ್ಳುವ ಮಾರ್ಗವನ್ನು ತೋರಿಸಿ ಉತ್ತಮ ಮಾರ್ಗದರ್ಶನ ಮಾಡಿ ತನ್ಮೂಲಕ ಮಾರ್ಗದರ್ಶಿ ಗಳಾಗಿದ್ದಾರೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇರುವ ಬೇರೆ ಬೇರೆ ವೃತ್ತಿಗಳಿಗಿಂತ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು ಎಂದು ದಂಡಿಗನಹಳ್ಳಿ ಹೋಬಳಿ ಕುಂಬೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಬಾಬು ಎಸ್ ಅಭಿಪ್ರಾಯಪಟ್ಟರು. ಅವರು ಕುಂಬೇನಹಳ್ಳಿ ಶಾಲೆಯಿಂದ ಮೈಸೂರು ಜಿಲ್ಲೆಗೆ ವರ್ಗಾವಣೆಗೊಂಡ ವಿಜ್ಞಾನ ಶಿಕ್ಷಕರಾದ ರವೀಂದ್ರ ಜಿ. ಎಸ್ ಇವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತ, ಭವ್ಯ ಭಾರತದ ಪ್ರಜೆಗಳನ್ನು ಸೃಷ್ಟಿ ಮಾಡುವವರು ಶಿಕ್ಷಕರಾಗಿದ್ದು, ಅವರಿಗೆ ದೇಶದಲ್ಲಿ ಅತ್ಯುನ್ನತ ಮತ್ತು ಶ್ರೇಷ್ಠವಾದ ಸ್ಥಾನವನ್ನು ನೀಡಲಾಗಿದ್ದು ಶಿಕ್ಷಕರು ತಮ್ಮ ಅಪಾರವಾದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದು ಅವರಿಗೆ ತಮ್ಮ ಜೀವನ ರೂಪಿಸಿಕೊಳ್ಳುವ ಮಾರ್ಗವನ್ನು ತೋರಿಸಿ ಉತ್ತಮ ಮಾರ್ಗದರ್ಶನ ಮಾಡಿ ತನ್ಮೂಲಕ ಮಾರ್ಗದರ್ಶಿ ಗಳಾಗಿದ್ದಾರೆ ಎಂದು ತಿಳಿಸಿದರು. ಶಾಲಾ ಶಿಕ್ಷಕ ಮತ್ತು ಸಾಹಿತಿ ಶಿವನಗೌಡ ಪಾಟೀಲ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮತ್ತು ಗುರು ಶಿಷ್ಯ ಪರಂಪರೆಗೆ ಒಂದು ವಿಶಿಷ್ಟ ಸ್ಥಾನಮಾನವಿದ್ದು ಇತ್ತೀಚಿನ ದಿನಗಳಲ್ಲಿ ಗುರುವನ್ನು ಗೌರವಿಸುವ ಪ್ರವೃತ್ತಿ ಕಡಿಮೆಯಾಗುತ್ತಿದ್ದು, ಇದಕ್ಕೆ ಮೌಲ್ಯ ಶಿಕ್ಷಣದ ಕೊರತೆಯೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ೨೦೨೪-೨೫ ನೇ ಸಾಲಿನಲ್ಲಿ ನಾವು ಮನುಜರು ಎಂಬ ಹೊಸ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿ ತನ್ಮೂಲಕ ವಿದ್ಯಾರ್ಥಿಗಳಿಗೆ ಮಾನವೀಯ ಮತ್ತು ನೈತಿಕ ಶಿಕ್ಷಣದ ಅರಿವು ಮೂಡಿಸುತ್ತಿರುವುದು ಶ್ಲಾಘನೀಯವಾದುದು ಎಂದು ತಿಳಿಸಿ, ವರ್ಗಾವಣೆಯಾದ ರವೀಂದ್ರ ಶಿಕ್ಷಕರು ಈ ಶಾಲೆಯಲ್ಲಿ ೧೦ ವರ್ಷಗಳ ಸೇವೆ ಸಲ್ಲಿಸಿ ಪ್ರತಿವರ್ಷ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತಮ ಬೋಧನೆ ಮಾಡಿ ನೂರಕ್ಕೆ ನೂರು ಫಲಿತಾಂಶ ನೀಡಿ ಶಾಲಾ ಫಲಿತಾಂಶ ಸುಧಾರಣೆಗೆ ಕಾರಣರಾಗಿದ್ದು, ಅವರು ವರ್ಗಾವಣೆಗೊಂಡ ಶಾಲೆಯಲ್ಲೂ ಕೂಡ ಉತ್ತಮ ಬೋಧನೆ ಮಾಡಿ ಆದರ್ಶ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಸನ್ಮಾರ್ಗವನ್ನು ತೋರಿಸಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಚಂದ್ರಶೇಖರಯ್ಯ ಮಠಪತಿ, ದಿವ್ಯ ಎಂ. ಜಿ, ಕವಿತ. ಕೆ. ಸಿ, ಬಿಂದು ಡಿ. ಎ ಮತ್ತು ನಂಜಪ್ಪ ಹಾಗೂ ಗ್ರಾಮಪಂಚಾಯಿತಿ ಸದಸ್ಯರಾದ ಕೆ. ಆರ್. ಸುರೇಶ್ ಮುಂತಾದವರು ಹಾಜರಿದ್ದರು.