ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮುಕ್ತ ದಿನಾಚರಣೆ ನಿಮಿತ್ತ ಜಿಲ್ಲೆಯಾದ್ಯಂತ ವಿವಿಧ ಶಾಲಾ, ಕಾಲೇಜಿನ 4 ಲಕ್ಷ ಮಕ್ಕಳಿಗೆ ಗುರುವಾರ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮುಕ್ತ ದಿನಾಚರಣೆ ನಿಮಿತ್ತ ಜಿಲ್ಲೆಯಾದ್ಯಂತ ವಿವಿಧ ಶಾಲಾ, ಕಾಲೇಜಿನ 4 ಲಕ್ಷ ಮಕ್ಕಳಿಗೆ ಗುರುವಾರ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಜಿಲ್ಲಾಡಳಿತ, ಜಿಪಂ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ನವನಗರದ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಎಂ, ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಶಾಲಾ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಪ್ರತಿಜ್ಞಾವಿಧಿಯಲ್ಲಿ ಮಾದಕ ದ್ರವ್ಯ ವ್ಯಸನ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ಗಾಂಜಾ, ಅಫೀಮುನಂತಹ ಮಾದಕ ದ್ರವ್ಯಗಳನ್ನು ಸೇವಿಸುವುದಿಲ್ಲ. ಇತರರು ಸೇವಿಸದಂತೆ ಶ್ರಮಿಸುತ್ತೇವೆ ಎಂದು, ಅಕ್ರಮ ಮಾದಕ ದ್ರವ್ಯಗಳ ಬಗ್ಗೆ ಮಾಹಿತಿ ಬಂದಲ್ಲಿ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡುವ ಮೂಲಕ ಮಾದಕ ದ್ರವ್ಯ ವ್ಯಸನ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಪಣತೊಡುತ್ತೇವೆ ಎಂದು ಪ್ರತಿಜ್ಞೆ ಗೈಯಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಂಗಪ್ಪ ಎಂ. ಅವರು, ಅಪ್ರಾಪ್ತ ವಯಸ್ಸಿನಲ್ಲಿ ಮಾದಕ ವ್ಯಸನಿಗೆ ತುತ್ತಾದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಿ ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಮಕ್ಕಳ ಬೆಳೆವಣಿಗೆಯಲ್ಲಿ ಕುಂಠಿತಗೊಳ್ಳುವುದಲ್ಲದೇ ಕುಟುಂಬದ ಸ್ವಾಸ್ಥ್ಯ ಹಾಳಾಗುತ್ತದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಗತಿಹೊಂದಲು ಸಾಧ್ಯವಾಗುವುದಿಲ್ಲ. ಇಂದು ಪ್ರಮಾಣ ವಚನ ಸ್ವೀಕರಿಸಿದ ಮಕ್ಕಳು ತಮ್ಮ ಕುಟುಂಬದ ಸದಸ್ಯರಲ್ಲಿ ವ್ಯಸನಿಗಳಿದ್ದರೆ, ಅವರನ್ನು ಸರಿದಾರಿಗೆ ತರುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾ,ಡಿ ಮುಂದಿನ ಪ್ರಜೆಗಳಾಗುವ ಯುವ ಪೀಳಿಗೆ ತಮ್ಮ ಶರೀರ ಯಾವ ರೀತಿಯ ಇರಬೇಕು ಎಂಬುವುದನ್ನು ತೀರ್ಮಾಣ ಮಾಡಬೇಕಿದೆ. ಪೌಷ್ಟಿಕ ಆಹಾರ ಸೇವನೆ ಮಾಡುವುದರ ಜೊತೆಗೆ ಮಾದಕ ದ್ರವ್ಯಗಳಿಂದ ದೂರ ಇದ್ದು, ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ನಿರತರಾಗಬೇಕು. ಜಿಲ್ಲೆಯಲ್ಲಿ ಅಕ್ರಮ ಮಾದಕ ವಸ್ತು ಮಾರಾಟಗಾರರನ್ನು ಗುರುತಿಸಿ ಶಿಕ್ಷಿಸುವಲ್ಲಿ ಜಿಲ್ಲಾ ಪೊಲೀಸ್ ಮಹತ್ವದ ಕಾರ್ಯ ಮಾಡುತ್ತಿದ್ದು, ಶಾಲಾ, ಕಾಲೇಜು ಆವರಣ ಸುತ್ತಮುತ್ತ ಮಾದಕ ವಸ್ತು ಮಾರಾಟ ಕಂಡುಬಂದಲ್ಲಿ 112ಗೆ ಕರೆ ಮಾಡಿದರೆ ವಾತಾವರಣ ಸರಿಪಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ನಡೆದ ಕಾರ್ಯಕ್ರಮದಲ್ಲಿ 1600 ಪೊಲೀಸ್ ಸಿಬ್ಬಂದಿ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ವರಿ, ಮಹಮ್ಮದ ರಹೀಂ, ಆನಂದ ಗಬ್ಬೂರ ಸೇರಿದಂತೆ ಸಹ ಶಿಕ್ಷಕರು, ನಿಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.