ಬೋಂತಿ ತಾಂಡಾದಲ್ಲಿ ವಿಜಯದಶಮಿ ಸಂಭ್ರಮ

| Published : Oct 13 2024, 01:06 AM IST

ಸಾರಾಂಶ

ಔರಾದ್ (ಬಿ) ಶಾಸಕ ಪ್ರಭು ಬಿ.ಚವ್ಹಾಣ ಅವರು ಸ್ವಗ್ರಾಮ ಬೋಂತಿ ತಾಂಡಾದಲ್ಲಿ ವಿಜಯದಶಮಿ ಹಬ್ಬವನ್ನು ಗ್ರಾಮಸ್ಥರೊಂದಿಗೆ ಆಚರಿಸಿದರು.

ಕನ್ನಡಪ್ರಭ ವಾರ್ತೆ ಔರಾದ್

ಔರಾದ್(ಬಿ)ಶಾಸಕ ಪ್ರಭು ಬಿ.ಚವ್ಹಾಣ ಅವರು ಸ್ವಗ್ರಾಮ ಬೋಂತಿ ತಾಂಡಾದಲ್ಲಿ ವಿಜಯದಶಮಿ ಹಬ್ಬವನ್ನು ಗ್ರಾಮಸ್ತರೊಂದಿಗೆ ಸಂಭ್ರಮದಿಂದ ಆಚರಿಸಿದರು.

ಬೆಳಗ್ಗೆ ಗ್ರಾಮದಲ್ಲಿರುವ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಸ್ಥಾನ, ಸಂತ ಸೇವಾಲಾಲ್ ಮಹಾರಾಜ್ ಹಾಗೂ ರಾಮರಾವ್ ಮಹಾರಾಜರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಗ್ರಾಮಸ್ಥರೊಂದಿಗೆ ಬನ್ನಿ ತಂದು ಪೂಜೆ ನೆರವೇರಿಸಿದ ನಂತರ ಹಂಚಲಾಯಿತು.

ಈ ವೇಳೆ ಶಾಸಕರು ಮನೆ-ಮನೆಗೆ ತೆರಳಿ ಬನ್ನಿ ವಿತರಿಸಿ ವಿಜಯದಶಮಿಯ ಶುಭಾಶಯ ಕೋರಿದರು.

ನಂತರ ಮಾತನಾಡಿದ ಅವರು, ದಸರಾ ನಾಡಿನ ಬಹುದೊಡ್ಡ ಹಬ್ಬವಾಗಿದ್ದು, ವಿಜಯದಶಮಿ ದುಷ್ಟತನದ ವಿರುದ್ಧ ದೈವತ್ವದ ವಿಜಯವನ್ನು ಸಾರುತ್ತದೆ. ಭಾರತೀಯ ಪರಂಪರೆಯಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ ಎಂದರು.

ಬೋಂತಿ ತಾಂಡಾದಲ್ಲಿ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತದೆ. ನವರಾತ್ರಿ ದಿನಗಳಂದು ಪ್ರತಿನಿತ್ಯ ದೇವಿಯ ಪೂಜೆ, ಆರಾಧನೆ ನಡೆಯುತ್ತದೆ. ಉತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ಪ್ರತಿ ಮನೆಗಳಲ್ಲಿಯೂ ಸಂಭ್ರಮವಿರುತ್ತದೆ ಎಂದು ಹೇಳಿದರು.

ಒಳ್ಳೆಯತನದ ಸಂಕೇತವಾಗಿ ಆಚರಿಸಲಾಗುವ ಈ ವಿಜಯದಶಮಿ ಎಲ್ಲರಿಗೂ ಒಳಿತನ್ನು ತರಲಿ. ಇಚ್ಛಾಪೂರ್ತಿ ಮಾತಾ ಜಗದಂಬಾ ಕ್ಷೇತ್ರದ ಜನತೆಗೆ ಸುಖ, ಸಮೃದ್ಧಿ, ನೆಮ್ಮದಿ ನೀಡಲಿ, ರೈತರ ಜೀವನ ಸುಖಮಯವಾಗಿಸಲಿ, ಔರಾದ(ಬಿ) ಕ್ಷೇತ್ರವನ್ನು ಸಮೃದ್ದಮಯವಾಗಿಸಲಿ ಎಂದು ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳನ್ನು ಕೋರಿದರು.

ವಿಜಯದಶಮಿಯ ನಿಮಿತ್ತ ಬೋಂತಿ ತಾಂಡಾದಲ್ಲಿ ಜರುಗಿದ ಕಳಸ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಮಹಿಳೆಯರು ತಲೆಯ ಮೇಲೆ ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಮಕ್ಕಳು, ಯುವಜರು, ಹಿರಿಯರು ಹೊಸ ಉಡುಗೆಗಳನ್ನು ಧರಿಸಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.