ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಕೋರ್ಸ್‌ಗೆ ಹಸಿರು ನಿಶಾನೆ: ಡಾ.ಹಂಚೆ

| Published : Jun 01 2024, 12:45 AM IST

ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಕೋರ್ಸ್‌ಗೆ ಹಸಿರು ನಿಶಾನೆ: ಡಾ.ಹಂಚೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜು ಆವರಣದಲ್ಲಿ ಈಗಾಗಲೇ 200 ವಿದ್ಯಾರ್ಥಿಗಳ ಸಾಮರ್ಥ್ಯದ ವಿದ್ಯಾರ್ಥಿ ವಸತಿ ನಿಲಯ ಆರಂಭಗೊಂಡಿದೆ. ಬರುವ ದಿನಗಳಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣ

ಕನ್ನಡಪ್ರಭ ವಾರ್ತೆ ಬೀದರ್

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಹಾಗೂ ಸಿವಿಲ್ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಆರಂಭ ಮಾಡಲು ನವದೆಹಲಿ ಎಐಸಿಟಿಇ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಹಸಿರು ನಿಶಾನೆ ತೋರಿವೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ದೇವೇಂದ್ರ ಹಂಚೆ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು ಈಗಾಗಲೇ ಕಾಲೇಜಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಕೋರ್ಸ್‌ಗಳು ನಡೆಯುತ್ತಿವೆ. ಎರಡು ಹೊಸ ಕೋರ್ಸ್‌ ಗಳೊಂದಿಗೆ ಈಗ ಕಾಲೇಜು ಒಟ್ಟು 4 ಕೋರ್ಸ್‌ ಹೊಂದಿದೆ ಎಂದು ಹೇಳಿದ್ದಾರೆ.

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೇವಲ 40 ಸಾವಿರ ಶುಲ್ಕ ಇದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನದಿಂದ ಕಾಲೇಜು ಶುಲ್ಕ ಭರಿಸಲು ಅವಕಾಶ ಇದೆ. ಶಿಷ್ಯವೇತನ ಸೌಲಭ್ಯ ಸಹ ಇದೆ ಎಂದು ತಿಳಿಸಿದ್ದಾರೆ.

4 ಕೋರ್ಸ್‌ಗಳಲ್ಲಿ ಸಿವಿಲ್ ಎಂಜಿನಿಯರ್ 30 ಸ್ಥಾನ ಹಾಗೂ ಉಳಿದ ಮೂರು ಕೋರ್ಸ್‌ಗಳಲ್ಲಿ ತಲಾ 60 ಸ್ಥಾನಗಳು ಇವೆ. ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆ ಪ್ರಮಾಣ ಪತ್ರ ಹೊಂದಿದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಪ್ರವೇಶದಲ್ಲಿ ಶೇ.80ರಷ್ಟು ಮೀಸಲಾತಿ ಇದೆ ಎಂದು ಹೇಳಿದ್ದಾರೆ.

ಸಿಇಟಿ ಫಲಿತಾಂಶ ಪ್ರಕಟವಾದ ನಂತರ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಸ್ಥಳೀಯ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಕಾಲೇಜು ಆವರಣದಲ್ಲಿ ಈಗಾಗಲೇ 200 ವಿದ್ಯಾರ್ಥಿಗಳ ಸಾಮರ್ಥ್ಯದ ವಿದ್ಯಾರ್ಥಿ ವಸತಿ ನಿಲಯ ಆರಂಭಗೊಂಡಿದೆ. ಬರುವ ದಿನಗಳಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣದ ಯೋಜನೆ ಇದೆ ಎಂದು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಿಂದ ಕಾಲೇಜಿನಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲು ಅನುಕೂಲವಾಗಿದೆ. ಮಂಡಳಿಯ ₹6.5ಕೋಟಿ ಅನುದಾನದಲ್ಲಿ ಮುಖ್ಯ ರಸ್ತೆಯಿಂದ ಕಾಲೇಜು ವರೆಗೆ ಸಿಸಿ ರಸ್ತೆ, ಕ್ಯಾಂಟೀನ್, ಗ್ರಂಥಾಲಯ ಕಟ್ಟಡ, ಪೀಠೋಪಕರಣ ಅಳವಡಿಕೆ ಮೊದಲಾದ ಕಾಮಗಾರಿ ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರವಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ನೂತನ ಕೋರ್ಸ್‌ಗಳ ಲಾಭ ಪಡೆಯಬೇಕು.

ರೇವಣಸಿದ್ಧ ಜಾಡರ್. ಎಪಿವಿಪಿ ಹಿರಿಯ ಮುಖಂಡ