ಇಂಧನ ಸೋರಿಕೆ ತಡೆಯುವಲ್ಲಿ ತಾಂತ್ರಿಕ ಪರಿಣತಿ ಮುಖ್ಯವಾಗಿದೆ. ಈ ಹಿಂದೆ ಸಕಲೇಶಪುರದ ಬಾಳುಪೇಟೆ ಫೀಡರ್ ನಲ್ಲಿ ಎನರ್ಜಿ ಆಡಿಟಿಂಗ್ ನಡೆಸಿದ ಸಂದರ್ಭ ಶೇ.40 ರಿಂದ 43 ಇಂಧನ ಸೋರಿಕೆ ಕಂಡು ಬಂದಿತ್ತು. ಆ ನಂತರದಲ್ಲಿ ಸಮರ್ಪಕ ತಾಂತ್ರಿಕ ನಿರ್ವಹಣೆ ಮಾಡಿದ್ದರ ಪರಿಣಾಮವಾಗಿ ಇಂಧನ ಸೋರಿಕೆಯ ಶೇ.12ಕ್ಕೆ ಇಳಿಕೆ ಮಾಡುವಲ್ಲಿ ಯಶಸ್ವಿಯಾದೆವು.
ಕನ್ನಡಪ್ರಭ ವಾರ್ತೆ ಮೈಸೂರು
ಇಂಧನ ಸೋರಿಕೆ, ವಿದ್ಯುತ್ ಅಡಚಣೆ ಹಾಗೂ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಾಂತ್ರಿಕ ನಿರ್ವಹಣೆ ಅವಶ್ಯಕವಾಗಿದ್ದು, ಅಧಿಕಾರಿಗಳು ಸಮರ್ಪಕವಾಗಿ ತಾಂತ್ರಿಕ ನಿರ್ವಹಣೆಗೆ ಮುಂದಾಗಬೇಕು ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ತಿಳಿಸಿದರು.ಮೈಸೂರು ತಾಲೂಕು ಕಡಕೊಳದಲ್ಲಿರುವ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಎಂಜಿನಿಯರುಗಳ ಸಂಘ (ಕೆಇಬಿಇಎ) ದ ಸಭಾಂಗಣದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧಿಕಾರಿಗಳಿಗೆ ಕೆಇಬಿಇಎ ಮೈಸೂರು ವಲಯ ಕೇಂದ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಇಂಧನ (ವಿದ್ಯುತ್) ಲೆಕ್ಕ ಪರಿಶೀಲನೆ ಮತ್ತು ಐಪಿ ಫೀಡರ್ ನಲ್ಲಿ ನಷ್ಟಗಳ ಕಡಿತ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಇಂಧನ ಸೋರಿಕೆ ತಡೆಯುವಲ್ಲಿ ತಾಂತ್ರಿಕ ಪರಿಣತಿ ಮುಖ್ಯವಾಗಿದೆ. ಈ ಹಿಂದೆ ಸಕಲೇಶಪುರದ ಬಾಳುಪೇಟೆ ಫೀಡರ್ ನಲ್ಲಿ ಎನರ್ಜಿ ಆಡಿಟಿಂಗ್ ನಡೆಸಿದ ಸಂದರ್ಭ ಶೇ.40 ರಿಂದ 43 ಇಂಧನ ಸೋರಿಕೆ ಕಂಡು ಬಂದಿತ್ತು. ಆ ನಂತರದಲ್ಲಿ ಸಮರ್ಪಕ ತಾಂತ್ರಿಕ ನಿರ್ವಹಣೆ ಮಾಡಿದ್ದರ ಪರಿಣಾಮವಾಗಿ ಇಂಧನ ಸೋರಿಕೆಯ ಶೇ.12ಕ್ಕೆ ಇಳಿಕೆ ಮಾಡುವಲ್ಲಿ ಯಶಸ್ವಿಯಾದೆವು. ಇದರಿಂದ ನಿಗಮಕ್ಕೆ ಆದಾಯ ಹೆಚ್ಚಿತು, ವಿದ್ಯುತ್ ಅಡಚಣೆ ಕಡಿಮೆಯಾಗಿ, ಫೀಡರ್ ಗಳು, ಟ್ಯಾನ್ಸ್ ಫಾರ್ಮರ್ ಗಳು ಮತ್ತು ಮೀಟರ್ ಗಳ ನಿರ್ವಹಣೆ ಸುಲಭಗೊಂಡಿತು ಎಂದರು.ಪ್ರಸ್ತುತ ಇಂಧನ ಇಲಾಖೆ ಹೊಸತನಕ್ಕೆ ಆದ್ಯತೆ ನೀಡಿ, 5000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲು ಕಾರ್ಯಯೋಜನೆ ರೂಪಿಸಿದ್ದು, ಮುಂದಿನ ಒಂದು ವರ್ಷದಲ್ಲಿ ಇದನ್ನು ಸಾಧಿಸುವ ಗುರಿ ಹೊಂದಲಾಗಿದೆ. ಇದರ ನಡುವೆ ಸೆಸ್ಕ್ ವ್ಯಾಪ್ತಿಯಲ್ಲಿ 90 ಸ್ಟೇಷನ್ ಗಳನ್ನು ಪ್ರಸಕ್ತ ವರ್ಷದಲ್ಲಿ ಹಾಕಲು ಮುಂದಾಗಿದೆ. ಪ್ರಮುಖವಾಗಿ ನಿಗಮ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆಯನ್ನು ಬಲಪಡಿಸಿ, ಪ್ರಸಕ್ತ ವರ್ಷದ ಮಾರ್ಚ್ ವೇಳೆಗೆ ಹೊಸದಾಗಿ 100 ಫೀಡರ್ ಗಳನ್ನು ಹೊಸದಾಗಿ ಗ್ರಿಡ್ ಗಳಿಗೆ ಸೇರ್ಪಡೆ ಮಾಡಬೇಕಿದೆ ಎಂದರು.
ಈ ಹಿನ್ನೆಲೆಯಲ್ಲಿ ತರಬೇತಿಯಲ್ಲಿ ನೀಡುವ ಸಲಹೆಗಳನ್ನು ಪಡೆದು, ಅವುಗಳನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರುವುದರೊಂದಿಗೆ ಯಾವ ಫೀಡರ್ ಗಳಲ್ಲಿ ಇಂಧನ ಸೋರಿಕೆ ಇದೆ ಅಂತಹ ಫೀಡರ್ ಗಳಲ್ಲಿ ತಾಂತ್ರಿಕ ಪರಿಣತಿ ಅಳವಡಿಸಿ, ಇಂಧನ ಸೋರಿಕೆ ಪ್ರಮಾಣ ತಗ್ಗಿಸಬೇಕಾಗಿದೆ. ಇದರೊಂದಿಗೆ ನಮ್ಮಲ್ಲಿರುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು, ನಿರ್ದಿಷ್ಟ ಗುರಿ ಸಾಧಿಸಲು ಕಾರ್ಯಯೋಜನೆ ರೂಪಿಸಬೇಕಿದೆ ಎಂದರು.ನಂತರ ನಡೆದ ತಾಂತ್ರಿಕ ಕಾರ್ಯಾಗಾರದಲ್ಲಿ ನಿವೃತ್ತ ತಾಂತ್ರಿಕ ನಿರ್ದೇಶಕರಾದ ಎಸ್. ಮಹೇಶ್ ಅವರು, ಇಂಧನ ಲೆಕ್ಕಪರಿಶೀಲನೆಯ ತಂತ್ರಗಳು, ಇಂಧನ ಸೋರಿಕೆ ಹಾಗೂ ಆರ್ಥಿಕ ನಷ್ಟವನ್ನು ಕಡಿತಗೊಳಿಸುವ ಪ್ರಾಯೋಗಿಕ ಅಂಶಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಸಮರ್ಪಕ ಮಾಹಿತಿ ನೀಡಿದರು.
ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್, ಅಧೀಕ್ಷಕ ಎಂಜಿನಿಯರ್ ಸುನೀಲ್, ಮುಖ್ಯ ಎಂಜಿನಿಯರ್ ಗಳಾದ ಮೃತ್ಯುಂಜಯ, ಸೋಮಶೇಖರ್, ಮುಖ್ಯ ಪ್ರಧಾನ ವ್ಯವಸ್ಥಾಪಕಿ ಶರಣಮ್ಮ ಎಸ್. ಜಂಗಿನ, ಕೆಇಬಿಇಎ ಉಪಾಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ರಾಜ್ಯ ಕಾರ್ಯದರ್ಶಿ ಆರ್. ಸುಧೀರ್ ಮೊದಲಾದವರು ಇದ್ದರು.