ಸಾರಾಂಶ
ಮಹಮ್ಮದ ರಫೀಕ್ ಬೀಳಗಿ
ಹುಬ್ಬಳ್ಳಿ:ರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ತಾಂತ್ರಿಕ ಸಮಸ್ಯೆ ಇನ್ನೂ ಸವಾಲಾಗಿಯೇ ಪರಿಣಮಿಸಿದೆ.
ಕಳೆದ ಎರಡು ದಿನಗಳಿಂದ ಆ್ಯಪ್ ತೆರೆಯದಿರುವುದು, ಸರ್ವರ್ ಸಮಸ್ಯೆ ಮತ್ತು ನೆಟ್‌ವರ್ಕ್ ಸಮಸ್ಯೆ ಗಣತಿದಾರರನ್ನು ಮತ್ತೆ ಬಾಧಿಸಿದ್ದು, ಸಿಬ್ಬಂದಿ ಹೈರಾಣಾಗಿದ್ದಾರೆ. ಇದರಿಂದಾಗಿ 3 ದಿನಗಳಲ್ಲಿ ನಗರದಲ್ಲಿ 831 ಮನೆಗಳ ಸರ್ವೇ ಕಾರ್ಯ ಪೂರ್ಣವಾಗಿದೆ.ಸಮೀಕ್ಷೆ ಆರಂಭವಾದ ಸೋಮವಾರ ಕೆಲ ತಾಂತ್ರಿಕ ಅಡೆತಡೆಗಳು ಎದುರಾಗಿದ್ದವು. ಅಂದು ಅಧಿಕಾರಿಗಳು ಹರಸಾಹಸ ಪಟ್ಟು ಕೆಲವೆಡೆ ಸಮೀಕ್ಷೆಗೆ ಚಾಲನೆ ನೀಡುವ ಕಾರ್ಯ ಮಾಡಿದ್ದರು. ಕೆಲವೆಡೆ ಅಂದು ಕಿಟ್‌ಗಳನ್ನು ಸಹ ಗಣತಿದಾರರಿಗೆ ಪೂರೈಸಿರಲಿಲ್ಲ. ಮಂಗಳವಾರ ಎಲ್ಲರಿಗೂ ಕಿಟ್ ವಿತರಿಸಿ ಸರ್ವೇ ಆರಂಭಿಸಲಾಯಿತು. ಆದರೆ, ಆ್ಯಪ್ ಮಾತ್ರ ಕೆಲಸ ಮಾಡಲೇ ಇಲ್ಲ. ಸಂಜೆವರೆಗೆ ಬೆರೆಳೆಣಿಕೆಯಷ್ಟು ಮಾತ್ರ ಸಮೀಕ್ಷೆ ಮಾಡಲಾಗಿತ್ತು.
ಇನ್ನು ಬುಧವಾರವಾದರೂ ತೊಂದರೆ ಸರಿಯಾಗಿ ಸಲೀಸಾಗಿ ಸಮೀಕ್ಷೆ ಮಾಡಬೇಕು ಎಂದುಕೊಂಡವರಿಗೆ ಮತ್ತದೇ ಸಮಸ್ಯೆ ಕಾಡಿತು. ಹಿರಿಯ ಅಧಿಕಾರಿಗಳು, ಪರಿಣಿತರು ಸಮಸ್ಯೆ ಸರಿಪಡಿಸಲು ಎಷ್ಟೇ ಪ್ರಯತ್ನಪಟ್ಟರೂ ನಿರೀಕ್ಷಿತ ಪ್ರಮಾಣದ ಯಶಸ್ಸು ಸಿಗಲಿಲ್ಲ. ನಗರದಲ್ಲಿ ಒಟ್ಟು 1864 ಸಿಬ್ಬಂದಿ ನಿಯೋಜಿಸಿ ಒಬ್ಬ ಗಣತಿದಾರನಿಗೆ 150 ಮನೆಗಳ ನಿಗದಿ ಮಾಡಲಾಗಿದೆ. ವಿವಿಧ ಬ್ಲಾಕ್‌ಗಳಾಗಿ ವಿಂಗಡಿಸಿ ಸಮೀಕ್ಷೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಮೂರು ದಿನದಲ್ಲಿ 831 ಮನೆಗಳ ಕಾರ್ಯವೀಗ ಪೂರ್ಣಗೊಂಡಿದೆ.ಒಟಿಪಿ ನೀಡಲು ಹಿಂದೇಟು:
ಮನೆ ಬಾಗಿಲಿಗೆ ಬಂದ ಗಣತಿದಾರರಿಗೆ ಹೆಸರು, ಪಡಿತರ ಚೀಟಿ, ಆಧಾರ್, ವೋಟರ್ ಐಡಿ ಸೇರಿ ಎಲ್ಲ ದಾಖಲೆಗಳನ್ನು ನೋಡಿ ದಾಖಲಿಸಲು ಸರಿ ಸುಮಾರು ಒಂದು ಗಂಟೆಯ ಕಾಲಾವಧಿ ತೆಗೆದುಕೊಳ್ಳುತ್ತದೆ. ಈ ವೇಳೆ ಕೆಲವೊಮ್ಮೆ ನೆಟವರ್ಕ್ ಮತ್ತು ಸರ್ವರ್ ಸಮಸ್ಯೆಯಿಂದ ಈ ಕೆಲಸ ಮತ್ತಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಇದೆಲ್ಲ ಮಾಹಿತಿ ನೀಡಿ ಕೊನೆ ಹಂತಕ್ಕೆ ಬಂದು ಒಟಿಪಿ ಕೇಳಿದರೆ ಜನ ಹಿಂದೇಟು ಹಾಕುತ್ತಿದ್ದಾರೆ. ವಂಚನೆಯಿಂದ ಜನ ಆತಂಕಿತರಾಗುತ್ತಿದ್ದು, ಒಟಿಪಿ ಹೇಳಲು ಹಿಂದೆ-ಮುಂದೆ ನೋಡುವಂತಾಗಿದೆ.ಇನ್ನು ಮನೆಯಲ್ಲಿ ಜನಸಂಖ್ಯೆ ಹೆಚ್ಚಿದ್ದರೆ ಮತ್ತು ಕೆಲ ಸದಸ್ಯರು ಬೇರೆ ಊರುಗಳಲ್ಲಿ ನೆಲೆಸಿದ್ದು, ಅವರ ಮಾಹಿತಿ ಎಲ್ಲಿ ನೋಂದಾಯಿಸಬೇಕು ಎನ್ನುವ ಗೊಂದಲವೂ ಕೆಲವೆಡೆ ಕಂಡುಬಂದಿದೆ. ಇದೇ ವೇಳೆ ಕುಟುಂಬಸ್ಥರಿಗೆ ಆದಾಯ, ಖರ್ಚು ಮತ್ತು ಸರ್ಕಾರಿ ಯೋಜನೆಗಳ ಲಾಭ ಪಡೆದಿರುವ ಬಗೆಗೆ ಕೇಳಿದಾಗ ಜನ ಮಾಹಿತಿ ನೀಡಲು ಭಯಬೀಳುತ್ತಿದ್ದಾರೆ.
ಬಾಡಿಗೆ ಮನೆ ಗೊಂದಲ:ನಗರ ಪ್ರದೇಶದಲ್ಲಿ ಹೆಚ್ಚಾಗಿ ಜನ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾರೆ. ಮನೆ ವಾರಸುದಾರರು ಇನ್ನೆಲ್ಲೋ ವಾಸಿಸುತ್ತಿದ್ದು, ಅಂತಹ ಮನೆಗಳನ್ನು ಹುಡುಕಿ ಮಾಹಿತಿ ನೋಂದಾಯಿಸುವುದು ಗಣತಿದಾರರಿಗೆ ತೊಂದರೆ ಎದುರಾಗಿದೆ.ಮ್ಯಾನುವಲ್ ಆಗಿದ್ದರೆ ಬಹುಬೇಗ ಗಣತಿ ಕಾರ್ಯ ಮುಗಿಸಬಹುದಿತ್ತು. ಆದರೆ ಆ್ಯಪ್ ಮೂಲಕ ಮಾಡುತ್ತಿರುವುದರಿಂದ ಪ್ರತಿ ಪ್ರಶ್ನೆಗೆ ಉತ್ತರಿಸಿದ ಮೇಲೆಯೇ ಮತ್ತೊಂದು ಪ್ರಶ್ನೆ ತೆರೆದುಕೊಳ್ಳುತ್ತದೆ. ಹೀಗಾಗಿ, ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಈ ವೇಳೆ ಆಧಾರ್ ಒಟಿಪಿ ಸರಿ ಸಮಯಕ್ಕೆ ಬರದೇ ಇದ್ದರೆ ಮುಂದಿನ ಹಂತದ ವರೆಗೆ ಕಾಯಲೇಬೇಕಾದ ಸ್ಥಿತಿ ಇದೆ. ಹೀಗಾಗಿ, ಶೀಘ್ರ ಈ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಸರ್ವೇಗೆ ಕಾರ್ಯ ಸರಳೀಕರಿಸಬೇಕು ಎನ್ನುವುದು ಬಹುತೇಕ ಗಣತಿದಾರರ ಆಗ್ರಹವಾಗಿದೆ.
ಬುಧವಾರವೂ ಆ್ಯಪ್ ತೆರೆದುಕೊಳ್ಳದ ಮತ್ತು ನೆಟ್‌ವರ್ಕ್ ಮತ್ತು ಸರ್ವರ್ ಸಮಸ್ಯೆಯಿಂದ ಗಣತಿ ಕಾರ್ಯ ವಿಳಂಬವಾಗುತ್ತಿದೆ. ಒಬ್ಬೊಬ್ಬರಿಗೆ 150ರಂತೆ ಮನೆಗಳ ಹಂಚಿಕೆ ಮಾಡಲಾಗಿದ್ದು, ಈ ವರೆಗೆ ವರೆಗೆ 831 ಮನೆಗಳ ಗಣತಿ ಮಾಡಲಾಗಿದೆ. ತಾಂತ್ರಿಕ ಸಮಸ್ಯೆ ಸರಿಪಡಿಸಲಾಗುತ್ತಿದೆ.ಎಚ್.ಎಂ. ಪಡ್ನೇಶಿ ಹುಬ್ಬಳ್ಳಿ ಶಹರ ಬಿಇಒ