ತಾಂತ್ರಿಕವಾಗಿ ಸೋತರೂ, ವಿಚಲಿತನಾಗಿಲ್ಲ: ಎಚ್.ಪಿ.ರಾಜೇಶ್

| Published : Feb 13 2024, 12:50 AM IST

ಸಾರಾಂಶ

ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಮನಾಗಿ ಹೋರಾಟ ಮಾಡಿದ್ದೇವೆ. ತಾಂತ್ರಿಕವಾಗಿ ನಾವು ಸೋಲು ಅನುಭವಿಸಿರಬಹುದು,ಆದರೆ ವಿಚಲಿತನಾಗಿಲ್ಲ. ನನ್ನ ಪರ ಸ್ವಾಭಿಮಾನಿಗಳ ದೊಡ್ಡ ಪಡೆಯಿದೆ. ನಾವು ಕಾಂಗ್ರೆಸ್‌ನಲ್ಲೇ ಇದ್ದವರು. ನಾನು ಶಾಸಕನಾಗಿದ್ದಾಗ ಪಪಂ, ತಾಪಂ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಆದರೂ ಪಕ್ಷದ ಮುಖಂಡರು ನನಗೆ ಟಿಕೆಟ್ ತಪ್ಪಿಸಿದರು.

ಕನ್ನಡಪ್ರಭ ವಾರ್ತೆ ಜಗಳೂರು

ನಾನು ಮತ್ತು ಕಾರ್ಯಕರ್ತರು ಸೇರಿ ೧೦ವರ್ಷ ಕಾಲ ಕಾಂಗ್ರೆಸ್ ಪಕ್ಷ ಸಂಘಟಿಸಿ ಕಟ್ಟಿ ಬೆಳೆಸಿದ್ದೇವೆ. ಪ್ರತಿ ಹಳ್ಳಿ ಹಳ್ಳಿಯ ಸುತ್ತಿ ಶಾಸಕನಾಗಿ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಆದರೆ ಶಾಸಕ ಬಿ.ದೇವೇಂದ್ರಪ್ಪ ಅವರು ಎಷ್ಟು ಹಳ್ಳಿ ಸುತ್ತಿ ಪಕ್ಷ ಸಂಘಟಿಸಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಪ್ರಶ್ನಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಸೋಮವಾರ ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ ಶಾಸಕ ದೇವೇಂದ್ರಪ್ಪ ''''''''ತೆಂಗಿನ ಮರ''''''''ದ (ಸ್ವಾಭಿಮಾನಿ ಬಣ) ಕಾರ್ಯಕರ್ತರು ಬರಬೇಡಿ ಎನ್ನುತ್ತಾರಂತೆ. ನಾವು ಪಕ್ಷ ಕಟ್ಟಿ ಸಂಘಟಿಸಿದ ಕಾರಣಕ್ಕೆ ನೀವು ಪಕ್ಷ ಸೇರ್ಪಡೆಯಾಗಿ ಶಾಸಕರಾಗಿದ್ದು ಮರೆಯಬೇಡಿ. ಈಗ ತೆಂಗಿನ ಮರ ಬಾಡಿರಬಹುದು. ಮುಂದೊಂದು ದಿನ ತೆಂಗಿನ ಮರ ಫಲ ಕೊಟ್ಟೇ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಮನಾಗಿ ಹೋರಾಟ ಮಾಡಿದ್ದೇವೆ. ತಾಂತ್ರಿಕವಾಗಿ ನಾವು ಸೋಲು ಅನುಭವಿಸಿರಬಹುದು,ಆದರೆ ವಿಚಲಿತನಾಗಿಲ್ಲ. ನನ್ನ ಪರ ಸ್ವಾಭಿಮಾನಿಗಳ ದೊಡ್ಡ ಪಡೆಯಿದೆ. ನಾವು ಕಾಂಗ್ರೆಸ್‌ನಲ್ಲೇ ಇದ್ದವರು. ನಾನು ಶಾಸಕನಾಗಿದ್ದಾಗ ಪಪಂ, ತಾಪಂ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಆದರೂ ಪಕ್ಷದ ಮುಖಂಡರು ನನಗೆ ಟಿಕೆಟ್ ತಪ್ಪಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ದೇವೇಂದ್ರಪ್ಪ ಕಾಂಗ್ರೆಸ್‌ಗೆ ದುಡಿಯಲಿಲ್ಲ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಿಕೆಟ್ ಕೊಟ್ಟಿದ್ದರೆ ೫೦ ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಿದ್ದೆ. ಚುನಾವಣೆಗೆ ಮೊದಲು ಅನೇಕ ಹಳ್ಳಿಗಳ ಸುತ್ತಿ ಗ್ಯಾರಂಟಿ ಕಾರ್ಡ್‌ ಹಂಚಿದ್ದೇವು. ಗ್ಯಾರಂಟಿ ಕಾರ್ಡ್‌ ಹಂಚದೇ ತೆರದ ವಾಹನದಲ್ಲಿ ಪ್ರಚಾರ ಮಾಡಿದ ಈಗಿನ ಶಾಸಕ ದೇವೇಂದ್ರಪ್ಪ ಪಕ್ಷಕ್ಕಾಗಿ ದುಡಿಯಲಿಲ್ಲ. ಈಗ ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ಆತುರ ಪಡಬೇಡಿ ಎಂದು ನನಗೆ ಸಮಾಧಾನ ಮಾಡುತ್ತಿದ್ದಾರೆ. ಸ್ವಾಭಿಮಾನಿಗಳಿಗೆ ರಾಜಕೀಯ ಅಸ್ತಿತ್ವ ಬೇಕು. ಹೀಗಾಗಿ ಕಾರ್ಯಕರ್ತರು ಬೆಂಬಲಿಗರು ಏನು ನಿರ್ಧಾರ, ತೀರ್ಮಾನ ಮಾಡುತ್ತೀರೋ ಅದಕ್ಕೆ ಬದ್ಧವಾಗಿರುತ್ತೇನೆ.

ಎಚ್.ಪಿ.ರಾಜೇಶ್, ಮಾಜಿ ಶಾಸಕ

"ರಾಜೇಶ್ ಬಿಜೆಪಿಗೆ ಸೇರಬೇಕು " ಕಾರ್ಯಕರ್ತರಿಂದ ಘೋಷಣೆ

ನಿಮ್ಮ ಭಾವನೆಗಳಿಗೆ ಬದ್ಧನಾಗಿರುವೆ: ಎಚ್.ಪಿ.ರಾಜೇಶ್

ಸಮಾಲೋಚನಾ ಸಭೆಗೆ ತಾಲೂಕಿನ ೨೨ ಗ್ರಾಪಂ ಮತ್ತು ಅರಸೀಕೆರೆ ಭಾಗದ ೭ ಗ್ರಾಪಂ ನಿಂದ ಸಾವಿರಕ್ಕೂ ಹೆಚ್ಚು ಸ್ವಾಭಿಮಾನಿ ಕಾರ್ಯಕರ್ತರು ಆಗಮಿಸಿದ್ದರು. ಅದರಲ್ಲಿ ಜಗಳೂರು ಪಟ್ಟಣದ ತಿಪ್ಪೇಸ್ವಾಮಿ, ವಕೀಲ ಕರಿಬಸಪ್ಪ, ಮುಸ್ಟೂರು ತಿಪ್ಪೇಸ್ವಾಮಿ, ಕೆಳಗೋಟೆ ಪ್ರಕಾಶ್ ಸೇರಿ ಶೇ.೮೦ರಷ್ಟು ರಾಜೇಶ್ ಅಭಿಮಾನಿಗಳು ನೀವು ಬಿಜೆಪಿ ಸೇರ್ಪಡೆಯಾಗಬೇಕು. ಮೊದಲು ಬಿಜೆಪಿಯಿಂದಲೇ ರಾಜಕೀಯಕ್ಕೆ ಪ್ರವೇಶ ಪಡೆದಿದ್ದರಿಂದ ಮತ್ತೆ ಅದೇ ಪಕ್ಷಕ್ಕೆ ಸೇರಿ. ಹಾಗಾದರೆ ನಾವು ನಿಮ್ಮ ಬೆಂಬಲಿಸುತ್ತೇವೆ. ನಿಮ್ಮನ್ನು ಹೀನಾಯವಾಗಿ ನಡೆಸಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಹೋದರೆ ನಾವು ಯಾವುದೇ ಕಾರಣಕ್ಕೂ ಬರಲ್ಲ ಎಂದರು. ಸಭೆ ಮುಗಿಯುವ ಮುನ್ನವೇ ''''''''ರಾಜೇಶ್ ಬಿಜೆಪಿಗೆ ಸೇರಬೇಕು... ಬಿಜೆಪಿಗೆ ಸೇರಬೇಕು'''''''' ಎಂದು ಒಕ್ಕೊರಲಿನಿಂದ ಕಾರ್ಯಕರ್ತರು ಅಭಿಮಾನಿಗಳು ಜೈಕಾರ ಕೂಗಿದರು.

ಬೆಂಬಲಿಗರಾದ ಎನ್.ಎಸ್.ರಾಜು, ಎಲ್.ಬಿ.ಬೈರೇಶ್, ಮಾಹಂತೇಶ್ ನಾಯ್ಕ್, ಪುರುಷೋತ್ತಮ, ಮೊಬೈಲ್ ಮಂಜುನಾಥ್, ಗಡಿಗುಡಾಳ್ ಸುರೇಶ್, ತಿಪ್ಪೇಸ್ವಾಮಿಗೌಡ, ಯಶವಂತಗೌಡ ಸೇರಿ ಅನೇಕರು ಮಾತನಾಡಿ, ರಾಜೇಶ್ ರನ್ನು ಯಾವ ಪಕ್ಷ ಗೌರವಿಸುತ್ತದೋ ಮತ್ತು ಮುಂದಿನ ಚುನಾವಣೆಗಳಲ್ಲಿ ಯಾವ ಪಕ್ಷ ಟಿಕೆಟ್ ಖಾತ್ರಿ ಮಾಡುತ್ತದೋ ಅಂತಹ ಪಕ್ಷಕ್ಕೆ ನೀವು ಸೇರ್ಪಡೆಯಾಗಿ. ನೀವು ಯಾವುದೇ ಪಕ್ಷಕ್ಕೆ ಸೇರಿದರೂ ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ನಿಮಗಾಗಿ ದುಡಿಯುತ್ತೇವೆ ಎಂದು ಭರವಸೆ ನೀಡಿದರು.

ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ:

ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಮಾತನಾಡಿದ ಎಚ್.ಪಿ.ರಾಜೇಶ್, ಈ ಸಭೆ ಕೇವಲ ಅಭಿಪ್ರಾಯ ಸಂಗ್ರಹ ಸಭೆಯಾಗಿದ್ದು, ಮುಂದಿನ ದಿನಗಳಲ್ಲಿ ಸಲಹಾ ಮಂಡಳಿ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಇನ್ನೂ ಕಾಲಾವಕಾಶವಿದೆ. ನಿಮ್ಮ ಭಾವನೆಗಳಿಗೆ ಬದ್ಧನಾಗಿರುತ್ತೇನೆ. ಎರಡೂ ಪಕ್ಷಗಳಿಂದ ನನಗೆ ಅನ್ಯಾಯವಾಗಿದೆ. ಯಾವ ಪಕ್ಷ ನಮಗೆ ಗೌರವ ಕೊಡುತ್ತದೋ ಆ ಪಕ್ಷ ಸೇರ್ಪಡೆಗೆ ತೀರ್ಮಾನ ಮಾಡುತ್ತೇನೆ. ಇದು ಸಮಾಲೋಚನಾ ಸಭೆ ಅಷ್ಟೇ. ಮುಂದಿನ ದಿನಗಳಲ್ಲಿ ಬೆಂಬಲಿಗರ ಜೊತೆ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಮಾಡುತ್ತೇನೆ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.