ಮಹಿಳಾ ಸಬಲೀಕರಣಕ್ಕೆ ತಂತ್ರಜ್ಞಾನ ಪ್ರಭಾವ ಅವಶ್ಯ: ಪ್ರೊ.ಶಾಂತಾದೇವಿ

| Published : Mar 07 2025, 12:48 AM IST

ಮಹಿಳಾ ಸಬಲೀಕರಣಕ್ಕೆ ತಂತ್ರಜ್ಞಾನ ಪ್ರಭಾವ ಅವಶ್ಯ: ಪ್ರೊ.ಶಾಂತಾದೇವಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಹಕ್ಕುಗಳಿಗೆ ಇನ್ನೂ ಮಹಿಳೆಯರೇ ಹೋರಾಡಬೇಕಾಗಿದೆ. ಎಷ್ಟೇ ಶಿಕ್ಷಣ ಪಡೆದರೂ ಮಹಿಳೆಯರ ಮೇಲೆ ದೌರ್ಜನ್ಯ ಕಡಿಮೆಯಾಗಿಲ್ಲ.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಿಳಾ ಸಬಲೀಕರಣಕ್ಕೆ ಕೇವಲ ಪ್ರಮಾಣ ಪತ್ರವಷ್ಟೇ ಸಾಕಾಗದು. ವೈಜ್ಞಾನಿಕ ಮತ್ತು ತಂತ್ರಜ್ಞಾನ ಪ್ರಭಾವವೂ ಅವಶ್ಯಕ ಎಂದು ಮಹಿಳಾ ವಿಶ್ವ ವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಹೇಳಿದರು.

ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಹಾಗೂ ಕ್ರೀಡಾ ನಿರ್ದೇಶನಾಲಯ ಆಶ್ರಯದಲ್ಲಿ ಮಹಿಳಾ ಸಾಂಸ್ಕೃತಿಕ ಹಬ್ಬದ-೨೦೨೫ ಪ್ರಯುಕ್ತ ನಡೆದ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.

ಈ ಮ್ಯಾರಥಾನ್ ನಾಲ್ಕು ದಿಕ್ಕಿನಿಂದ ಆಯೋಜಿಸುವ ಉದ್ದೇಶವೆಂದರೆ ನಮ್ಮ ಮಹಿಳಾ ವಿಶ್ವವಿದ್ಯಾಲಯದ ಅಸ್ತಿತ್ವವನ್ನು ತಲುಪಿಸುವುದಾಗಿದೆ. ಮಹಿಳೆಯರ ಹಕ್ಕುಗಳಿಗೆ ಇನ್ನೂ ಮಹಿಳೆಯರೇ ಹೋರಾಡಬೇಕಾಗಿದೆ. ಎಷ್ಟೇ ಶಿಕ್ಷಣ ಪಡೆದರೂ ಮಹಿಳೆಯರ ಮೇಲೆ ದೌರ್ಜನ್ಯ ಕಡಿಮೆಯಾಗಿಲ್ಲ. ಮಹಿಳೆಯರು ವಿಶ್ವದ ಮುಂಚೂಣಿಯಲ್ಲಿ ತಲುಪಲು ಅವರಿಗೆ ಸಮಾನ ಅವಕಾಶ ನೀಡಬೇಕಾಗಿದೆ ಎಂದರು.

ಮಹಿಳಾ ವಿವಿ ಸಿಂಡಿಕೇಟ್ ಸದಸ್ಯೆ ಮಲ್ಲಮ್ಮಾ ಯಾಳವಾರ ಮಾತನಾಡಿ, ವಿಜಯಪುರದ ಎಲ್ಲಾ ನಾಗರಿಕರಿಗೆ ಮಹಿಳೆಯರ ಹಕ್ಕುಗಳು ಮತ್ತು ಅವರ ಮಹತ್ವದ ಬಗ್ಗೆ ಜಾಗೃತಿ ಉಂಟುಮಾಡಬೇಕು. ಮಹಿಳೆಯರಿಗೆ ಸಮಾನತೆ ನೋಟವುಳ್ಳ ಶಿಕ್ಷಣ ನೀಡುವುದು ಅವಶ್ಯಕ. ಮಹಿಳೆಯರು ತಮ್ಮ ಸ್ವಂತ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ, ಸಮಾಜ ಮತ್ತು ದೇಶದ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಬೇಕು. ಈ ಕಾರಣಕ್ಕಾಗಿ, ಎಲ್ಲರೂ ಒಗ್ಗೂಡಿ ಮಹಿಳೆಯರನ್ನು ಸಬಲಗೊಳಿಸಲು ಕಾರ್ಯನಿರ್ವಹಿಸಬೇಕು ಎಂದರು.

ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಅವರ ಹಕ್ಕುಗಳನ್ನು ದೊರಕಿಸುವುದು ಅತ್ಯಂತ ಮುಖ್ಯವಾಗಿದೆ. ಮಹಿಳೆಯರು ಶಕ್ತಿಯಾಗಲು, ಸ್ವಯಂ ನಿರ್ಧಾರ ತೆಗೆದುಕೊಳ್ಳಲು ಮತ್ತು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಸಹಾಯ ಮಾಡಬೇಕು. ನಮ್ಮ ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಸವಾಲಾಗಿದ್ದರೂ, ಅವರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಭಿವೃದ್ಧಿ ಅತ್ಯವಶ್ಯಕವಾಗಿದೆ. ಇದನ್ನು ಸಾಧಿಸಲು ಸಮರ್ಥನೀಯ ನೀತಿಗಳು, ಮಕ್ಕಳ ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಯ ಅಗತ್ಯವಿದೆ ಎಂದರು.

ನಗರದ ಬಿಎಲ್‌ಡಿಇ ತಾಂತ್ರಿಕ ಮಹಾವಿದ್ಯಾಲಯ, ಗೋಳಗುಮ್ಮಟ, ಜಿಲ್ಲಾ ನ್ಯಾಯಾಲಯ ಹಾಗೂ ಸೈನಿಕ ಶಾಲೆ ಹೀಗೆ 4 ಕಡೆಗಳಿಂದ ಮ್ಯಾರಥಾನ್ ಹೊರಟು ಗಾಂಧೀ ವೃತ್ತದ ಬಳಿ ಸಮಾರೋಪಗೊಂಡಿತು. ಮಹಿಳಾ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯೆ, ಸಂಚಾಲಕಿ ಪ್ರೊ.ಲಕ್ಷ್ಮೀದೇವಿ ವೈ, ಸಂಯೋಜಕರಾದ ಪ್ರೊ.ಸಕ್ಪಾಲ್ ಹೂವಣ್ಣ, ಪ್ರೊ.ಜಿ.ಜಿ.ರಜಪೂತ, ಪ್ರೊ.ಶ್ರೀನಿವಾಸ, ಡಾ.ಜ್ಯೋತಿ ಅವಟಿ, ಪ್ರೊ.ಪಿ.ಜಿ.ತಡಸದ, ಪ್ರೊ.ಜ್ಯೋತಿ ಉಪ್ಯಾದೆ, ಡಾ.ಕಸ್ತೂರಿ ರಜಪೂತ, ಪ್ರೊ.ರಾಜಕುಮಾರ ಮಾಲಿಪಾಟೀಲ್, ಡಾ.ಕಿರಣ ಜಿ.ಎನ್, ಪ್ರೊ.ನಾಮದೇವ. ಎಂ.ಗೌಡ, ಪ್ರೊ.ಹನುಮಂತಯ್ಯ ಪೂಜಾರಿ ಹಾಗೂ ಪ್ರೊ.ವಿಜಯಾ ಕೋರಿಶೇಟ್ಟಿ, ಪ್ರೊ.ಯು.ಕೆ.ಕುಲಕರ್ಣಿ, ಡಾ.ಚಂದ್ರಶೇಖರ ಮಠಪತಿ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಇದ್ದರು.

ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ವಿಷ್ಣು ಶಿಂದೆ ಸ್ವಾಗತಿಸಿ ನಿರೂಪಿಸಿದರು. ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಹಾಗೂ ಕ್ರೀಡಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಹನುಮಂತಯ್ಯ ಪೂಜಾರ ವಂದಿಸಿದರು.