ಸಾಂಪ್ರದಾಯಿಕ ಉದ್ಯೋಗದ ಮಾದರಿ ವೇಗವಾಗಿ ಕಣ್ಮರೆಯಾಗಿ ಕೃತಕ ಬುದ್ಧಿಮತ್ತೆ ಹಾಗೂ ತಂತ್ರಜ್ಞಾನ ಆಧಾರಿತ ಉದ್ಯೋಗದ ಮಾದರಿಗಳು ವೇಗವಾಗಿ ಸೃಷ್ಟಿಯಾಗುತ್ತಿವೆ
ಕೊಪ್ಪಳ: ಕೃತಕ ಬುದ್ಧಿಮತ್ತೆ ಕಾಲಘಟ್ಟದಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆ ಮತ್ತು ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಹೊಸ ಉದ್ಯೋಗ ಅವಕಾಶ ಸೃಷ್ಟಿಸಬಲ್ಲದು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು.
ಸಿವಿಸಿ ಫೌಂಡೇಶನ್ ಕೊಪ್ಪಳ, ಎಸ್ ಎಸ್ ಐ ಟೆಕ್ನಾಲಜೀಸ್, ಕೊಪ್ಪಳ ಹಾಗೂ ಶ್ರೀವಿಜಯ ಚಂದ್ರಶೇಖರ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕುಷ್ಟಗಿ ಜಂಟಿಯಾಗಿ ಆಯೋಜಿಸಿರುವ ಎರಡು ತಿಂಗಳ ಉಚಿತ ಎಐ, ಡಿಜಿಟಲ್ ಲಿಟರಸಿ ಹಾಗೂ ಸ್ಪೋಕನ್ ಇಂಗ್ಲಿಷ್ ತರಬೇತಿ ಶಿಬಿರವನ್ನು ನಗರದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.ಕೃತಕ ಬುದ್ಧಿಮತ್ತೆಯಿಂದ ಎಲ್ಲ ರಂಗಗಳಲ್ಲೂ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಸಾಂಪ್ರದಾಯಿಕ ಉದ್ಯೋಗದ ಮಾದರಿ ವೇಗವಾಗಿ ಕಣ್ಮರೆಯಾಗಿ ಕೃತಕ ಬುದ್ಧಿಮತ್ತೆ ಹಾಗೂ ತಂತ್ರಜ್ಞಾನ ಆಧಾರಿತ ಉದ್ಯೋಗದ ಮಾದರಿಗಳು ವೇಗವಾಗಿ ಸೃಷ್ಟಿಯಾಗುತ್ತಿವೆ.ಶೈಕ್ಷಣಿಕ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆ ಇಲ್ಲದೆ ಹೋದರೆ ಉದ್ಯೋಗಾವಕಾಶ ಸಿಗದೇ ಹೋಗಬಹುದು. ಕೊಪ್ಪಳದಂತಹ ಜಿಲ್ಲೆಗಳು ತಂತ್ರಜ್ಞಾನ ಆಧಾರಿತ ಮತ್ತು ಕೃತಕ ಬುದ್ಧಿಮತ್ತೆ ಕಲಿಕೆಯಲ್ಲಿ ಹಿಂದುಳಿದಿವೆ. ಇದರ ಪರಿಣಾಮ ಉದ್ಯೋಗಾಕಾಂಕ್ಷಿ ಯುವಕರ ಮೇಲಾಗಿದೆ. ಅವರಿಗೆ ಉದ್ಯೋಗದ ಸಾಧ್ಯತೆ ಕಡಿಮೆಯಾಗುತ್ತಿವೆ. ಇದನ್ನು ಮನಗಂಡು ಎರಡು ತಿಂಗಳ ಉಚಿತ ಎಐ ಮತ್ತು ಡಿಜಿಟಲ್ ಲಿಟರಿಸಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್ ಎಸ್ ಐ ಟೆಕ್ನಾಲಜೀಸ್ ಮುಖ್ಯಸ್ಥ ಮಂಜುನಾಥ್ ಉಲ್ಲತ್ತಿ ಮಾತನಾಡಿ, ಕೊಪ್ಪಳ ಜಿಲ್ಲೆಯ 200 ಜನ ಯುವಕ ಯುವತಿಯರು ಉಚಿತ ಶಿಬಿರಕ್ಕೆ ಹೆಸರು ನೋಂದಾಯಿಸಿದ್ದಾರೆ. ಎಐ, ಕಂಪ್ಯೂಟರ್ ಹಾಗೂ ಇಂಗ್ಲಿಷ್ ಭಾಷೆ ಕುರಿತು ತಜ್ಞರು ತರಬೇತಿ ನೀಡಲಿದ್ದಾರೆ. ತರಬೇತಿ ನಂತರ ಉದ್ಯೋಗ ಮೇಳ ಆಯೋಜಿಸಲಾಗುವುದು. ಶಿಬಿರಾರ್ಥಿಗಳು ಸ್ವಉದ್ಯೋಗ ಮಾಡಲು ನೆರವು ನೀಡಲಾಗುವುದು. ಯುವಕರ ಭವಿಷ್ಯಕ್ಕೆ ನೆರವಾಗುವ ಕಾರ್ಯಕ್ರಮ ಉಚಿತವಾಗಿ ಆಯೋಜಿಸಿದ ಸಿವಿಸಿ ಫೌಂಡೇಶನ್ ಕೆಲಸ ಇತರರಿಗೆ ಮಾದರಿ ಎಂದು ಹೇಳಿದರು.ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಮೂರ್ತ್ಯೆಪ್ಪ ಹಿಟ್ನಾಳ ಮಾತನಾಡಿ, ತರಬೇತಿ ಶಿಬಿರಗಳು ದುಬಾರಿಯಾಗಿರುವ ಕಾಲದಲ್ಲಿ ಅದನ್ನು ಉಚಿತವಾಗಿ ಆಯೋಜಿಸಲಾಗಿದೆ. ಶಿಬಿರದ ಚಟುವಟಿಕೆ ಶಿಬಿರಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಫೌಂಡೇಶನ್ ಶೀರ್ಷಿಕೆ ಸಂಚಾಲಕ ಮೌನೇಶ್ ಕಿನ್ನಾಳ ಮಾತನಾಡಿ, ವಿವಿಧ ಉದ್ಯೋಗಿ, ಬಡವರ, ದೀನ-ದಲಿತರ ಸಬಲೀಕರಣದ ಕಾರ್ಯಕ್ರಮಗಳ ಸಂಘಟನೆ, ಪರಿಸರ ಕಾಳಜಿಯ ಅಭಿಯಾನ, ಉದಯೋನ್ಮುಖರಿಗೆ ವೇದಿಕೆ ಒದಗಿಸುವುದು ಹಾಗೂ ಧನಿ ಇಲ್ಲದವರಿಗೆ ಧನಿಯಾಗುವ ಕೆಲಸಗಳನ್ನೊಳಗೊಂಡ ಹತ್ತು-ಹಲವು ಕಾರ್ಯಕ್ರಮ ಹಮ್ಮಿಕೊಳ್ಳವ ಮೂಲಕ ಫೌಂಡೇಶನ್ ಸಮಾಜಸೇವೆ ಮಾಡುತ್ತಿದೆ ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ 200 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.