ಕೂಡು ಕುಟುಂಬದಲ್ಲಿ ಬೆಳೆದ ನಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಬೆಳಗ್ಗೆ ಶಾಲೆಗೆ ಹೊರಟರೆ ಹಿಂತಿರುಗಿ ರಾತ್ರಿ ಊಟ ಮಾಡಿದಾಗ ಪೋಷಕರಿಗೆ ಗೊತ್ತಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ, ಮಕ್ಕಳ ಸವಾಂಗೀಣ ಪ್ರಗತಿಯನ್ನು ಪ್ರಧಾನ ವಾಗಿಸಿಕೊಂಡ ಪೋಷಕರ ಜವಾಬ್ದಾರಿ, ಶ್ರಮ, ಅತ್ಯಂತ ಕಾಳಜಿಯಿಂದ ಸಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಂತ್ರಜ್ಞಾನ ಆಧಾರಿತ ಸಾಮಾಜಿಕ ಮಾಧ್ಯಮಗಳೇ ಇಂದು ಪೂರಕ ಮತ್ತು ಮಾರಕವಾಗಿವೆ. ಶಿಕ್ಷಣದಿಂದ ಕೇವಲ ಅಂಕ ವೀರರಾಗದೆ ಶ್ರೇಷ್ಠ ಸಂಸ್ಕೃತಿ ಸಂಸ್ಕಾರಗಳನ್ನು ಪ್ರೇರೇಪಿಸಿ ಮುನ್ನಡೆಸಿದರೆ ಇಡೀ ಪ್ರಪಂಚಕ್ಕೆ ವಿಶಿಷ್ಟ ಮಾನವೀಯ ಕಾಣಿಕೆ ನೀಡಬಹುದು ಎಂದು ಸಿನಿಮಾ ಮತ್ತು ಕಿರುತೆರೆ ನಟ ಹನುಮಂತಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆ 10ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಭೂತಕಾಲವನ್ನು ನೆನೆದು ಇಂದು ಜೀವಿಸಿದರೆ ನಾಳೆಯ ಅರಿವು ಮೂಡುತ್ತದೆ. ಇದಕ್ಕೆ ಸಂಸ್ಕಾರವಂತ ಶಿಕ್ಷಣದ ಜೊತೆಗೆ ಗುರುವಿನ ಮಾರ್ಗದರ್ಶನ ಅಗತ್ಯ ಎಂದರು.

ಕೂಡು ಕುಟುಂಬದಲ್ಲಿ ಬೆಳೆದ ನಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಬೆಳಗ್ಗೆ ಶಾಲೆಗೆ ಹೊರಟರೆ ಹಿಂತಿರುಗಿ ರಾತ್ರಿ ಊಟ ಮಾಡಿದಾಗ ಪೋಷಕರಿಗೆ ಗೊತ್ತಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ, ಮಕ್ಕಳ ಸವಾಂಗೀಣ ಪ್ರಗತಿಯನ್ನು ಪ್ರಧಾನ ವಾಗಿಸಿಕೊಂಡ ಪೋಷಕರ ಜವಾಬ್ದಾರಿ, ಶ್ರಮ, ಅತ್ಯಂತ ಕಾಳಜಿಯಿಂದ ಸಾಗುತ್ತಿದೆ. ತುಂಬು ಕುಟುಂಬದಲ್ಲಿ ನಾವು ಹಿರಿಯರನ್ನು ನೋಡಿ ಕಲಿತಿದ್ದೇವೆ. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಪೂಜ್ಯ ಗುರುವರೇಣ್ಯರ ಆಶೀರ್ವಾದದ ಹಾರೈಕೆಯಲ್ಲಿ ಬೆಳೆಯುತ್ತಿರುವ ನೀವು ಪುಣ್ಯವಂತರು, ನಿಮ್ಮೆಲ್ಲರ ಬದುಕು ಹಸನಾಗಲಿ ಎಂದರು.

ಸಾನಿಧ್ಯ ವಹಿಸಿದ್ದ ನಾಗಮಂಗಲ ಶಾಖಾ ಮಠದ ಶ್ರೀಸತ್ಕೀರ್ತಿನಾಥ ಸ್ವಾಮೀಜಿ ಮಾತನಾಡಿ, ವಿದ್ವಾನ್ ಸರ್ವತ್ರ ಪೂಜ್ಯತೆ ಎಂಬ ಮಾತೊಂದಿದೆ. ಆದರೆ, ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ಪಡೆದ ವ್ಯಕ್ತಿ ಸರ್ವಕಾಲಕ್ಕೂ ಸರ್ವ ಸ್ಥಳಕ್ಕೂ ಸಲ್ಲುವ ವ್ಯಕ್ತಿಯಾಗಿ ಗೌರವಿಸಲ್ಪಡುತ್ತಾನೆ ಎಂದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್.ಎನ್.ಶ್ರೀಧರ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಸುರಕ್ಷಿತ ಸಾಂಸಾರಿಕ ಜೀವನಕ್ಕಾಗಿ ಶ್ರಮಿಸುತ್ತಿರುವುದು ಸಾಮಾನ್ಯವಾಗಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಸರ್ಕಾರಿ ನೌಕರರು ಹಾಗೂ ಖಾಸಗಿಯವರ ಕಷ್ಟ, ನಷ್ಟಗಳನ್ನು ನೆನೆಸಿಕೊಂಡರೆ ಜೀವನಾನುಭವದ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಆದರೆ, ಈಗಿನ ಮಕ್ಕಳನ್ನು ಸರಿದಾರಿಗೆ ತರುವಲ್ಲಿ ಪೋಷಕರು ಫೈನ್ ಟ್ಯೂನ್ ಮಾಡಬೇಕಿದೆ ಎಂದರು.

ಮಕ್ಕಳು ತಪ್ಪು ಮಾಡಿದರೆ ತಂದೆ ತಾಯಂದಿರು ಹಾಗೂ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕಿದೆ. ಪ್ರೀತಿಯಿಂದ ಬೈಯ್ದರೆ ಮಾರ್ಗದರ್ಶನವೆಂದು ಅರಿತು ನಡೆಯುವ ಕಾಲವೊಂದಿತ್ತು, ಆದರೆ ಬದಲಾದ ಕಾಲಘಟ್ಟದಲ್ಲಿ ಪೋಷಕರ ಜವಾಬ್ದಾರಿ ಹೆಚ್ಚಾಗಿದೆ ಎಂದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಹಾಗೂ ಡೀನ್ ಡಾ.ಎ.ಟಿ.ಶಿವರಾಮು ಮಾತನಾಡಿ, ಪ್ರತಿಯೊಬ್ಬರು ದೊಡ್ಡ ಕನಸನ್ನು ಹೊಂದಿರಬೇಕು. ವೈದ್ಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಮವಸ್ತ್ರವನ್ನು ನೋಡಿದರೆ ನಾವು ಹೀಗೆಯೇ ಆಗಬೇಕೆಂಬ ಕನಸು ನನಸಾಗಿಸುವಲ್ಲಿ ಬೇರಿನ ಮೂಲಕ್ಕೆ ನೀರೆರೆಯಬೇಕು. ರೂಟ್ ಅಂಡ್ ಫ್ರೂಟ್ ನಿಯಮವನ್ನು ಪಾಲಿಸಬೇಕಿದೆ ಎಂದರು.

ಶ್ರೀಗಳ ಸನ್ಮಾರ್ಗದಲ್ಲಿ ಉತ್ತಮ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಕಲಿಯುವ ಅವಕಾಶ ನಮಗೆಲ್ಲ ದೊರೆತಿರುವುದೇ ಪುಣ್ಯ. ಇದುವರೆಗೂ ಸಾಫ್ಟವೇರ್ ಉದ್ಯಮಿಗಳಿಗೆ ಒತ್ತಡವಿತ್ತು. ಈಗ ಈ ಒತ್ತಡ ಶಿಕ್ಷಕ ವೃತ್ತಿಗೆ ವರ್ಗಾವಣೆಯಾಗಿದೆ ಎಂದರು.

ಆದಿಚುಂಚನಗಿರಿ ಆಸ್ಪತ್ರೆಯ ಪ್ರಾಂಶುಪಾಲ ಡಾ.ಎಂ.ಜಿ. ಶಿವರಾಮ್ ಮತ್ತು ಮಾಡೆಲ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ವಿ.ಪುಟ್ಟಸ್ವಾಮಿ ಮಾತನಾಡಿದರು. ಆದಿಚುಂಚನಗಿರಿ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಡೀನ್ ಡಾ.ಬಿ.ರಮೇಶ್, ಪರೀಕ್ಷಾಂಗ ರಿಜಿಸ್ಟ್ರಾರ್ ಡಾ.ನಾಗರಾಜ್, ಸಂಶೋಧನಾ ವಿಭಾಗದ ಡೀನ್ ಡಾ.ಪ್ರಶಾಂತ್ ಕಾಳಪ್ಪ, ಹಣಕಾಸು ಅಧಿಕಾರಿ ಬಿ.ಕೆ.ಉಮೇಶ್, ಪ್ರಾಂಶುಪಾಲರಾದ ಡಾ.ಎಚ್.ಎನ್.ಶ್ವೇತಾ, ಡಾ.ಎಚ್.ಕೆ.ಕೋಮಲ ಪ್ರೊ.ವಿಕ್ಟೋರಿಯಾ ಸವಂದ್, ಟಿ.ಎನ್.ಶಿಲ್ಪ, ಡಾ.ಕೆ.ಎಸ್.ರವಿ ಸೇರಿದಂತೆ ಹಲವರು ಇದ್ದರು.