ಆಯುರ್ವೇದವು ಭಾರತದ ಪರಂಪರೆಯ ಒಂದು ವಿಶಿಷ್ಟ ವೈದ್ಯ ಪದ್ಧತಿಯಾಗಿದ್ದು ಈ ಪದ್ಧತಿಗೆ ತಾಂತ್ರಿಕ ನೆಲೆಗಟ್ಟನ್ನು ನೀಡಿದಲ್ಲಿ ಇದು ಅಭಿವೃದ್ಧಿಗೆ ಪೂರಕ. ಟೆಕ್ನೋ ಆಯುರ್ವೇದ ಎಂಬುದು ಒಂದು ಅದ್ಭುತ ಪರಿಕಲ್ಪನೆ ಆಯುರ್ವೇದದ ಅಭಿವೃದ್ಧಿಗೆ ಇದು ಮುಂದಿನ ದಿನಗಳಲ್ಲಿ ಸಹಾಯಕವಾಗಲಿ.
ಕನ್ನಡಪ್ರಭ ವಾರ್ತೆ ಮೈಸೂರು
ಆಯುರ್ವೇದವು ಭಾರತದ ಪರಂಪರೆಯ ಒಂದು ವಿಶಿಷ್ಟ ವೈದ್ಯ ಪದ್ಧತಿಯಾಗಿದ್ದು ಈ ಪದ್ಧತಿಗೆ ತಾಂತ್ರಿಕ ನೆಲೆಗಟ್ಟನ್ನು ನೀಡಿದಲ್ಲಿ ಇದು ಅಭಿವೃದ್ಧಿಗೆ ಪೂರಕ ಎಂದು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ ಅಭಿಪ್ರಾಯಪಟ್ಟರು.11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮತ್ತು ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಿದ್ದ ಟೆಕ್ನೋ ಆಯುರ್ವೇದ ಎಂಬ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ವಿವಿಸಿಇ ಕಾರ್ಯದರ್ಶಿ ಪಿ. ವಿಶ್ವನಾಥ್ ಮಾತನಾಡಿ, ಟೆಕ್ನೋ ಆಯುರ್ವೇದ ಎಂಬುದು ಒಂದು ಅದ್ಭುತ ಪರಿಕಲ್ಪನೆ ಆಯುರ್ವೇದದ ಅಭಿವೃದ್ಧಿಗೆ ಇದು ಮುಂದಿನ ದಿನಗಳಲ್ಲಿ ಸಹಾಯಕವಾಗಲಿ ಎಂದರು.ಅತಿಥಿಯಾಗಿದ್ದ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಪುರ ನಾರಾಯಣ್ ಮಾತನಾಡಿ, ಆಯುರ್ವೇದವನ್ನು ವಿಶ್ವದ ಭೂಪಟದಲ್ಲಿ ಗುರುತಿಸಲು ಸಹಕಾರಿಯಾಗಬಲ್ಲದು ಮತ್ತು ಇಂತಹ ಕಾರ್ಯಕ್ರಮಗಳು ಆಗಾಗ ನಡೆಯುವುದು ಸೂಕ್ತ ಎಂದರು.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮಿನಾರಾಯಣ ಶೆಣೈ ಮೊದಲಾದವರು ಇದ್ದರು.ಆನ್ಲೈನ್ ಮುಖಾಂತರ ಕೇಂದ್ರ ಸರ್ಕಾರದ ಸಲಹೆಗಾರರಾದ ಡಾ. ಕೌಸ್ತುಭ ಉಪಾಧ್ಯಾಯ, ಆಯುಷ್ ಇಲಾಖೆ ಆಯುಕ್ತ ಡಾ. ಸುನಿಲ್ ಪನ್ವಾರ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿದ್ಯಶಂಕರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ನಗರದ 12 ತಾಂತ್ರಿಕ ಕಾಲೇಜುಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಯುರ್ವೇದ ತಜ್ಞ ವೈದ್ಯರು ಆಯುರ್ವೇದಕ್ಕೆ ಬೇಕಾದ ತಾಂತ್ರಿಕ ಸಹಕಾರಗಳ ಬಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಮ್ಮ ಅನುಭವವನ್ನು ಭಾಷಣದ ಮೂಲಕ ಹಂಚಿಕೊಂಡರು.