ಸಾರಾಂಶ
ಬ್ಯಾಡಗಿ: ಇಂದಿನ ತಂತ್ರಜ್ಞಾನ ಆಧರಿತ ಜಗತ್ತಿನಲ್ಲಿ ಹವ್ಯಾಸಿ ರಂಗಭೂಮಿ ಮಾಯವಾಗಿದ್ದು, ವೃತ್ತಿಪರ ಕೆಲ ನಾಟಕ ಕಂಪನಿಗಳು ಮಾತ್ರ ಉಳಿದಿವೆ ಎಂದು ವರ್ತಕ ಸುರೇಶ ಮೇಲಗಿರಿ ಖೇದ ವ್ಯಕ್ತಪಡಿಸಿದರು.
ಪಟ್ಟಣದ ಗ್ರಾಮದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ನೀ ಹೂ ಅಂದ್ರ ಗಿಚ್ಚ ಅಕ್ಕೇನಿ ಇಲ್ಲಂದ್ರ ಹುಚ್ಚ ಅಕ್ಕೇನಿ ಎಂಬ ಹಾಸ್ಯಭರಿತ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ನಾಟಕವು ದೈನಂದಿನ ಜೀವನದಲ್ಲಿ ಎದುರಿಸುವ ಅಸಂಖ್ಯಾತ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ನಾಟಕಗಳು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ. ಆದಾಗ್ಯೂ ಇತ್ತೀಚಿನ ದೂರದರ್ಶನದಲ್ಲಿ ಬರುವ ಆಕರ್ಷಕ ಸರಣಿ ಧಾರಾವಾಹಿಗಳು ಮತ್ತು ರೋಮಾಂಚನಕಾರಿ ಚಲನಚಿತ್ರಗಳಿಂದ ನಾಟಕಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂಬ ಭಯ ಕಾಡುತ್ತಿದೆ ಎಂದರು.
ನಾಗರಾಜ ಸದಾರಾಧ್ಯಮಠ ಮಾತನಾಡಿ, ಭಾವನಾತ್ಮಕವಾಗಿ ಸವಾಲುಗಳನ್ನು ಎದುರಿಸುವ ಮತ್ತು ಅಡೆತಡೆಗಳನ್ನು ನಿವಾರಿಸುವ ಪಾತ್ರಗಳನ್ನು ನಾವು ನೋಡಿದಾಗ, ನಮ್ಮ ಸ್ವಂತ ಭಾವನೆಗಳು ಮತ್ತು ಅನುಭವಗಳನ್ನು ಪ್ರತ್ಯಕ್ಷವಾಗಿ ಪ್ರಕ್ರಿಯೆಗೊಳಿಸಲು ಅನುವು ಮಾಡಿಕೊಡುತ್ತದೆ ಎಂದರು.ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ಜನರಲ್ಲಿ ಸಹಾನುಭೂತಿ ಮತ್ತು ತಿಳಿವಳಿಕೆಯನ್ನು ಬೆಳೆಸುವ ವಿಶಿಷ್ಟ ಮಾರ್ಗವಾಗಿ ನಾಟಕಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಕಾಲದಲ್ಲಿ ಕುಟುಂಬ ಸಮೇತ ನೋಡುತ್ತಿದ್ದ ಶಿಶುನಾಳ ಷರೀಫ, ಯಡೆಯೂರು ಸಿದ್ದಲಿಂಗೇಶ್ವರ ಮಹಾತ್ಮೆ ಇನ್ನಿತರ ಕಲಾತ್ಮಕ ನಾಟಕಗಳು ಕಣ್ಮರೆಯಾಗಿವೆ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ವರ್ತಕ ಆರ್.ಎಂ. ಸದಾರಾಧ್ಯಮಠ, ಪುರಸಭೆ ಸದಸ್ಯರಾದ ಚಂದ್ರಣ್ಣ ಶೆಟ್ಟರ, ಕಲಾವತಿ ಬಡಿಗೇರ, ಸರೋಜಾ ಉಳ್ಳಾಗಡ್ಡಿ, ಗಾಯತ್ರಿ ರಾಯ್ಕರ, ಶಿವರಾಜ ಅಂಗಡಿ, ಶಂಭೂ ಮಠದ ಸೇರಿದಂತೆ ಇತರರಿದ್ದರು. ಎ.ಟಿ. ಪೀಠದ ಕಾರ್ಯಕ್ರಮ ನಿರ್ವಹಿಸಿದರು.ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಆನ್‌ಲೈನ್ ಅರ್ಜಿ ಆಹ್ವಾನಹಾವೇರಿ: ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿ ಆದೇಶ, ವೇತನ ಪತ್ರ, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳಲ್ಲಿ ಯಾವುದಾದರೂ ದಾಖಲೆಗಳನ್ನು ಸೇವಾನುಭವಕ್ಕಾಗಿ ಒದಗಿಸಬೇಕು. ಆಸಕ್ತ ಹಾಗೂ ಅರ್ಹ ಪತ್ರಕರ್ತರು ತಮ್ಮ ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು. ಅಪ್‌ಲೋಡ್ ಮಾಡಿದ ದಾಖಲೆಗಳು ಹಾಗೂ ಆನ್‌ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ತಮ್ಮ ಜಿಲ್ಲೆಯ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಗೆ ಸ್ವಯಂ ದೃಢೀಕರಿಸಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.