ಪ್ರಸ್ತುತ ಇಂಟರ್‌ನೆಟ್‌, ಮೊಬೈಲ್ ಅಪ್ಲಿಕೇಶನ್, ಡಿಜಿಟಲ್ ತಂತ್ರಜ್ಞಾನ, ಜಿಪಿಎಸ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಪ್ರವಾಸೋದ್ಯಮ ಕ್ಷೇತ್ರವನ್ನು ಸುಲಭವಾಗಿ ಅಭಿವೃದ್ಧಿಪಡಿಸಲು ಸಾಧ್ಯ.

ಧಾರವಾಡ:

ಪ್ರಸ್ತುತ ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪುಣೆಯ ಟೆಲ್‌ಮಿ ಡಿಜಿಇನ್ಫೋಟೆಕ್ ಸಂಸ್ಥೆಯ ಸಿಇಒ ವಿ. ಶ್ರೀನಿವಾಸರಾವ್ ಹೇಳಿದರು.

ಕರ್ನಾಟಕ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಪ್ರವಾಸೋದ್ಯಮವನ್ನು ಪುನರ್ ವಿನ್ಯಾಸಗೊಳಿಸುವಲ್ಲಿ ಎಐ ಮತ್ತು ಡಿಜಿಟಲ್ ತಂತ್ರಜ್ಞಾನದ ಪ್ರಭಾವ ವಿಷಯದ ಕುರಿತು ಮಾತನಾಡಿದರು.

ಪ್ರಸ್ತುತ ಇಂಟರ್‌ನೆಟ್‌, ಮೊಬೈಲ್ ಅಪ್ಲಿಕೇಶನ್, ಡಿಜಿಟಲ್ ತಂತ್ರಜ್ಞಾನ, ಜಿಪಿಎಸ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಪ್ರವಾಸೋದ್ಯಮ ಕ್ಷೇತ್ರವನ್ನು ಸುಲಭವಾಗಿ ಅಭಿವೃದ್ಧಿಪಡಿಸಲು ಸಾಧ್ಯ. ಪ್ರವಾಸೋದ್ಯಮವು ದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತವು ನೈಸರ್ಗಿಕ ಸೌಂದರ್ಯ, ಐತಿಹಾಸಿಕ ಸ್ಮಾರಕಗಳು, ಧಾರ್ಮಿಕ ಕೇಂದ್ರ, ವನ್ಯಜೀವಿ ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವುದರಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶಗಳನ್ನು ಹೊಂದಿದೆ. ಆದರೆ, ಈ ಕ್ಷೇತ್ರವು ಹಲವು ಸವಾಲುಗಳನ್ನು ಕೂಡ ಎದುರಿಸುತ್ತಿದೆ ಎಂದರು.

ತಂತ್ರಜ್ಞಾನವು ಪ್ರವಾಸೋದ್ಯಮವನ್ನು ಹೆಚ್ಚು ಸುಲಭ, ವೇಗವಾದ, ಸುರಕ್ಷಿತ ಮತ್ತು ಪರಿಣಾಮಕಾರಿ ಮಾಡಿದೆ. ಭವಿಷ್ಯದಲ್ಲಿ ಎಐ, ವರ್ಚುವಲ್ ರಿಯಾಲಿಟಿ ಮತ್ತು ಸ್ಮಾರ್ಟ್ ಪ್ರವಾಸೋದ್ಯಮದ ಬೆಳವಣಿಗೆಯಿಂದ ಪ್ರವಾಸಿಗರ ಅನುಭವ ಇನ್ನಷ್ಟು ಉತ್ತಮವಾಗುವ ಸಾಧ್ಯತೆಯಿದೆ ಎಂದರು.

ಕವಿವಿ ಸಿಂಡಿಕೇಟ್ ಸದಸ್ಯರು, ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಆದ್ದರಿಂದ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಪರಿಸ್ಥಿತಿಯ ಬಗ್ಗೆ ಅರಿವು ಹೊಂದಿರಬೇಕು ಎಂದು ಹೇಳಿದರು.

ಪ್ರವಾಸೋದ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಕಿವುಡನವರ ಮಾತನಾಡಿ, ವಿಭಾಗದಿಂದ ವಿದ್ಯಾರ್ಥಿಗಳಿಗೆ ಉದ್ಯಮ ಆಧಾರಿತ ತರಬೇತಿ, ಇಂಟರ್‌ನಶಿಪ್‌, ಕಾರ್ಯಾಗಾರ, ಉದ್ಯಮ ಪರಿಣಿತರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗುತ್ತದೆ ಎಂದರು.

ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಐ.ಸಿ. ಮುಳಗುಂದ ಮಾತನಾಡಿ, ಪ್ರವಾಸೋದ್ಯಮವು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಮೌಲ್ಯಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರವಾಸೋದ್ಯಮದ ಮೂಲಕ ವಿವಿಧ ದೇಶಗಳ ಜನರು ಪರಸ್ಪರ ಸಂಸ್ಕೃತಿ, ಪರಂಪರೆ ಮತ್ತು ಜೀವನಶೈಲಿಯನ್ನು ತಿಳಿದುಕೊಳ್ಳುತ್ತಾರೆ. ಇದರಿಂದ ಸಾಂಸ್ಕೃತಿಕ ವಿನಿಮಯ ಮತ್ತು ರಾಷ್ಟ್ರೀಯ ಏಕತೆ ಹೆಚ್ಚುತ್ತದೆ. ವಿಶ್ವಾದ್ಯಂತ 1,200ಕ್ಕೂ ಹೆಚ್ಚು ಯುನೆಸ್ಕೋ ಮಾನ್ಯತೆ ಪಡೆದ ವಿಶ್ವ ಪರಂಪರೆಯ ತಾಣಗಳು ಇವೆ. ಭಾರತದಲ್ಲಿ 44 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಇವೆ ಎಂದರು.

ಈ ವೇಳೆ ವಿಭಾಗದಲ್ಲಿ ನಿರ್ಮಿಸಲಾದ ಹವಾನಿಯಂತ್ರಿತ ಡಿಜಿಟಲ್ ವರ್ಚುವಲ್ ಗ್ರಂಥಾಲಯ ಉದ್ಘಾಟಿಸಲಾಯಿತು. ಮಾಜಿ ಕುಲಸಚಿವ ಪ್ರೊ. ಎಸ್. ರಾಜಶೇಖರ, ಡಾ. ಸುಷ್ಮಾ ಮಳಗಿ, ಡಾ. ರಾಣಿ ರವಿಶಂಕರ, ಡಾ. ಕೇದಾರ ಅಂಗಡಿ, ಡಾ. ಸಂದೀಪ ಇದ್ದರು. ಕರ್ನಾಟಕ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳು ಹಾಜರಿದ್ದರು.