ಕನ್ನಡಪ್ರಭವಾರ್ತೆ, ಹಾಸನ

ತಂತ್ರಜ್ಞಾನವು ಜಾಗತಿಕ ಮಟ್ಟದಲ್ಲಿ ನಿರ್ಮಾಣ ಯೋಜನೆಗಳ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತಿದೆ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಆರ್.ಟಿ. ದೇವೇಗೌಡ ತಿಳಿಸಿದ್ದಾರೆ.

ನಗರದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಸ್ಕಿಲ್ ಆ್ಯಂಡ್ ಕನ್ಸಲ್ಟೆನ್ಸಿ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ಬಿಲ್ಡಿಂಗ್ ಇನ್ಫರ್ಮೇಶನ್ ಮಾಡಲಿಂಗ್ (ಬಿ.ಎಂ.ಐ.) ಕುರಿತ ಮೂರು ದಿನಗಳ ಸಾಫ್ಟ್‌ವೇರ್ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ನಿರ್ಮಾಣ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆ ಅನಿವಾರ್ಯವಾಗಿದ್ದು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ತಂತ್ರಜ್ಞಾನವನ್ನು ಮೂಲಸೌಕರ್ಯ ಯೋಜನೆಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಇದೇ ರೀತಿಯಲ್ಲಿ ಭಾರತದಲ್ಲಿಯೂ ಇದರ ಅಳವಡಿಕೆ ವೇಗ ಪಡೆಯುತ್ತಿದೆ ಎಂದು ಅವರು ಹೇಳಿದರು. ಇಂತಹ ತರಬೇತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿ ಆಗಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಜೆ. ಅಮರೇಂದ್ರ, ಬಿ.ಎಂ.ಐ. ತಂತ್ರಜ್ಞಾನವು ನಿರ್ಮಾಣ ಕ್ಷೇತ್ರದಲ್ಲಿ ಯೋಜನೆ, ವಿನ್ಯಾಸ ಹಾಗೂ ಕಾರ್ಯಗತಗೊಳಿಸುವಿಕೆಯನ್ನು ಸುಧಾರಿಸುತ್ತಿದೆ ಎಂದು ಹೇಳಿದರು.


ಹೈದರಾಬಾದ್‌ನ ತಜ್ಞ ಉದಯ ಶಂಕರ್ ರಾಮಸ್ವಾಮಿ ಅವರು ತರಬೇತಿ ಕಾರ್ಯಕ್ರಮದ ರೂಪರೇಖೆಯನ್ನು ಪರಿಚಯಿಸಿ, ನ್ಯಾವಿಸ್‌ವರ್ಕ್ಸ್ ಸಾಫ್ಟ್‌ವೇರ್ ಬಳಕೆ ಮೂಲಕ ಪ್ರಾಜೆಕ್ಟ್ ಇಂಟಿಗ್ರೇಶನ್, ಕ್ಲ್ಯಾಶ್ ಡಿಟೆಕ್ಷನ್ ಹಾಗೂ ಸಿಮ್ಯುಲೇಶನ್ ವಿಧಾನಗಳನ್ನು ವಿವರಿಸಿದರು.

ಸ್ಕಿಲ್ ಆ್ಯಂಡ್‌ ಕನ್ಸಲ್ಟೆನ್ಸಿ ಸೆಂಟರ್ ಮುಖ್ಯಸ್ಥರಾದ ಡಾ. ಎ.ಜೆ. ಕೃಷ್ಣಯ್ಯ ಮಾತನಾಡಿ, ಇಂತಹ ಕಾರ್ಯಕ್ರಮಗಳು ಶೈಕ್ಷಣಿಕ ಹಾಗೂ ಉದ್ಯಮದ ಅವಶ್ಯಕತೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಖಜಾಂಚಿ ಎಚ್.ಡಿ. ಪಾರ್ಶನಾಥ್, ಪ್ರೊ. ಡಾ. ಎಚ್.ಎಸ್. ನರಸಿಂಹನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಸುಮನಾ ಜೈ ಪ್ರಕಾಶ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಕೆ.ಸಿ. ಮನು, ಸಿ. ಮಧುಶ್ರೀ, ಬಿ.ಎಸ್. ಶಮನಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.