ಸಾರಾಂಶ
ತುಮಕೂರು: ಹದಿಹರೆಯದ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಹಿಂದೆಂದಿಗಿಂತಲೂ ಇಂದು ಯೋಗ್ಯ ಮಾರ್ಗದರ್ಶನದ ಅಗತ್ಯವಿದೆ. ಇದನ್ನು ಪೋಷಕರು, ಶಿಕ್ಷಕರು ಹಾಗೂ ಸಮಾಜದ ಹಿರಿಯರು ಸಮಯೋಚಿತವಾಗಿ, ಬದ್ಧತೆಯಿಂದ ನೀಡಬೇಕು ಎಂದು ಬೆಂಗಳೂರಿನ ಸ್ತ್ರೀ ರೋಗ ತಜ್ಞೆ ಡಾ.ಸೌಪರ್ಣಿಕಾ ಅಭಿಪ್ರಾಯಪಟ್ಟರು.ವಿದ್ಯಾಶಂಕರ್ ಲರ್ನಿಂಗ್ ಸೆಂಟರ್ ಸಂಸ್ಥೆಯು ತುಮಕೂರು ರಾಮಕೃಷ್ಣ - ವಿವೇಕಾನಂದ ಆಶ್ರಮದ ಸಹಯೋಗದೊಂದಿಗೆ ಆಯೋಜಿಸಿದ್ದ ವಿದ್ಯಾರ್ಥಿ ದೇವೋಭವ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಅವರು ಹದಿಹರೆಯದವರ ಸಮಸ್ಯೆಗಳು ಮತ್ತು ಪರಿಹಾರಗಳು ಎಂಬ ವಿಷಯದ ಕುರಿತು ಮಾತನಾಡಿದರು.ಹಾರ್ಮೋನ್ಸ್ ಅಸಮತೋಲನದಿಂದ ಯುವಕ-ಯುವತಿಯರಲ್ಲಿ ದೈಹಿಕ ಬದಲಾವಣೆಗಳ ಜೊತೆಗೆ ಸಣ್ಣಪುಟ್ಟ ವಿಷಯಗಳಿಗೆ ಕೋಪಗೊಳ್ಳುವುದು, ಸೌಂದರ್ಯ ಪ್ರಜ್ಞೆ ಹೆಚ್ಚುವುದು, ಭಿನ್ನ ಲಿಂಗದವರ ಜೊತೆ ಸ್ನೇಹ - ಸಲುಗೆ ಬೆಳೆಸುವ ಇಚ್ಛೆ, ಒಂಟಿತನ, ಖಿನ್ನತೆ, ಏಕಾಗ್ರತೆಯ ಕೊರತೆ ಇವೇ ಮೊದಲಾದ ಮಾನಸಿಕ ಏರುಪೇರುಗಳಾಗುವುದು ಸಹಜ. ಆದರೆ ಇದನ್ನು ಉಪೇಕ್ಷಿಸದೇ ಇವುಗಳ ಯೋಗ್ಯ ನಿರ್ವಹಣೆಯ ಬಗ್ಗೆ ತಿಳುವಳಿಕೆ ನೀಡುವ ಜವಾಬ್ದಾರಿ ಪೋಷಕರು ಹಾಗೂ ಸಮಾಜದ ಹಿರಿಯರದ್ದು ಎಂದರು.ವಿದ್ಯಾರ್ಥಿಯ ಸುತ್ತಮುತ್ತಲಿನ ಪರಿಸರ, ಸ್ನೇಹಿತರೊಡಗಿನ ಒಡನಾಟ, ಸಾಮಾಜಿಕ ಮಾಧ್ಯಮ ಮತ್ತು ಅಂತರ್ಜಾಲಗಳ ಬಳಕೆ, ಆಹಾರ, ಮನೋರಂಜನೆ, ವ್ಯಾಯಾಮ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮೊದಲಾದವು ಹಾರ್ಮೋನ್‌ಗಳ ಮೇಲೆ ತನ್ನ ಪ್ರಭಾವವನ್ನು ಬೀರುವುದರಿಂದ ಪೋಷಕರು ತಮ್ಮ ಮಕ್ಕಳಿಗೆ ಸೂಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದರು. ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ, ಶಿಕ್ಷಣವೆಂಬುದು ಓದು-ಬರಹಕ್ಕೆ ಸೀಮಿತವಾಗದೆ ವಿವೇಕಪ್ರಜ್ಞೆಯನ್ನು ಜಾಗೃತಗೊಳಿಸುವ ಪ್ರಕ್ರಿಯೆಯಾಗಬೇಕು. ತಾಯಿ, ತಂದೆ ಮತ್ತು ಶಿಕ್ಷಕರು ಈ ದಿಸೆಯಲ್ಲಿ ನಿಷ್ಕ್ರಿಯರಾದರೆ ಮಕ್ಕಳು ಮತ್ತು ಸಮಾಜ ಅನಾಥವಾದಂತೆ. ಕಳೆದ ಹದಿನಾಲ್ಕು ವರ್ಷಗಳಿಂದ ತಮ್ಮ ಸಂಸ್ಥೆಯ ಮಕ್ಕಳು ಹಾಗೂ ಪೋಷಕರನ್ನು ಆಶ್ರಮಕ್ಕೆ ಕರೆತಂದು ಈ ವಿಶೇಷ ಕಾರ್ಯಕ್ರಮದ ಮೂಲಕ ಕ್ರಿಯಾಶೀಲವಾಗಿರುವ ಶಿಕ್ಷಣ ತಜ್ಞ ವಿದ್ಯಾಶಂಕರ್ ನಿಜಕ್ಕೂ ಅಭಿನಂದನೀಯರು ಎಂದು ನುಡಿದರು.ಕಾರ್ಯಕ್ರಮದಲ್ಲಿ ಅಮೆರಿಕಾದಿಂದ ಆಗಮಿಸಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಅರ್ಚನಾ ಸಚಿನ್, ಶ್ಯಾಮಲಾ ವಿದ್ಯಾಶಂಕರ್ ಹಾಗೂ ಶಿಕ್ಷಕ ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.
ಶಿಕ್ಷಕ ಸುನೀಲ್ ಹುಲಿಕಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.