ಸಾರಾಂಶ
ಬಾಳೆಹೊನ್ನೂರು: ಇಲ್ಲಿನ ಬಿ.ಕಣಬೂರು, ಬನ್ನೂರು, ಮಾಗುಂಡಿ ವ್ಯಾಪ್ತಿಯಲ್ಲಿ ಪ್ರವಾಹ ಪೀಡಿತ ಉಂಟಾದ ಸ್ಥಳಗಳಿಗೆ ಮಂಗಳವಾರ ಎನ್.ಆರ್.ಪುರ ತಹಸೀಲ್ದಾರ್ ತನುಜಾ ಟಿ.ಸವದತ್ತಿ, ತಾಪಂ ಇಒ ನವೀನ್‌ಕುಮಾರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಳೆ ಹೆಚ್ಚಾದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದರು.ಪಟ್ಟಣದ ಭದ್ರಾನದಿ ದಡದಲ್ಲಿರುವ ಬಂಡಿಮಠದಲ್ಲಿನ ೨೦ಕ್ಕೂ ಅಧಿಕ ಮನೆಗಳಿಗೆ ಮಳೆ ಅಧಿಕಗೊಂಡಲ್ಲಿ ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದ್ದು, ಅಲ್ಲಿನ ಜನರು ಕೂಡಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಬೇಕು. ಅಲ್ಲಿ ಎಲ್ಲಾ ಕುಟುಂಬಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು. ಆದರೆ ಬಂಡಿಮಠದ ಗ್ರಾಮಸ್ಥರು ಮಾತನಾಡಿ, ಪ್ರತೀ ವರ್ಷ ಮಳೆ ಬಂದ ಸಂದರ್ಭದಲ್ಲಿ ಮಾತ್ರ ಅಧಿಕಾರಿಗಳು ಭೇಟಿ ನೀಡಿ, ತಾತ್ಕಾಲಿಕ ವ್ಯವಸ್ಥೆ ಮಾಡುವ ಭರವಸೆ ನೀಡುತ್ತಾರೆ. 2019ರಲ್ಲಿಯೇ ಅಧಿಕ ಮಳೆ, ಪ್ರವಾಹದ ಕಾರಣ ಇಲ್ಲಿನ ಎಲ್ಲಾ ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಆಗ ನಮಗೆ ಪರ್ಯಾಯ ಜಾಗದ ವ್ಯವಸ್ಥೆ ಮಾಡಿಕೊಡುವುದಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇದೂವರೆಗೆ ನಮಗೆ ಯಾವುದೇ ವ್ಯವಸ್ಥೆಯಾಗಿಲ್ಲ. ನಮಗೆ ಶಾಶ್ವತ ವ್ಯವಸ್ಥೆ ಕಲ್ಪಿಸುವವರೆಗೆ ಇಲ್ಲಿಂದ ಬೇರೆ ಜಾಗಕ್ಕೆ ತೆರಳುವುದಿಲ್ಲ ಎಂದು ಪಟ್ಟುಹಿಡಿದರು.ತಹಸೀಲ್ದಾರ್ ತನುಜಾ ಸವದತ್ತಿ ಮಾತನಾಡಿ, ಪ್ರವಾಹ ಪೀಡಿತ ಸ್ಥಳಗಳನ್ನು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅಗತ್ಯ ಮುಂಜಾಗೃತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಬಾಳೆಹೊನ್ನೂರು ಹೋಬಳಿಯ ವ್ಯಾಪ್ತಿಯಲ್ಲಿ 16 ಮನೆಗಳಿಗೆ ಈಗಾಗಲೇ ನೀರು ನುಗ್ಗಿದ್ದು, ಎಲ್ಲಾ ಕುಟುಂಬಸ್ಥರು ಸುರಕ್ಷಿತ ಸ್ಥಳಗಳಿಗೆ ಅವರಾಗಿಯೇ ತೆರಳಿದ್ದಾರೆ. ಬಂಡಿಮಠದ ಗ್ರಾಮಸ್ಥರಿಗೆ ಸಹ ಪೊಲೀಸರ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ.ಮಳೆ ಹೆಚ್ಚಾಗಿ ಬೇರೆ ಯಾವುದೇ ಮನೆಗಳಿಗೆ ನೀರು ನುಗ್ಗಿದರೆ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಹಾಗೂ ಬಿಸಿಎಂ ಬಾಲಕಿಯರ ವಸತಿ ನಿಲಯಗಳನ್ನು ಕಾಳಜಿ ಕೇಂದ್ರಗಳಾಗಿ ತೆರೆಯಲು ಪರಿಶೀಲನೆ ನಡೆಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಳಜಿ ಕೇಂದ್ರಕ್ಕೆ ಅಗತ್ಯವಿರುವ ಕುಡಿಯುವ ನೀರು, ಆಹಾರ ಪದಾರ್ಥ ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಲಾಗಿದೆ ಎಂದರು.ಉಪ ತಹಸೀಲ್ದಾರ್ ನಾಗೇಂದ್ರ, ಆರ್.ಐ. ಮಂಜುನಾಥ್, ವಿಎ ಸಮೀಕ್ಷಾ, ನಾಗಶ್ರೀ, ಪಿಡಿಓ ಕಾಶಪ್ಪ, ಗ್ರಾಪಂ ಸದಸ್ಯರಾದ ಬಿ.ಕೆ.ಮಧುಸೂದನ್, ಬಿ.ಸಿ.ಸಂತೋಷ್‌ಕುಮಾರ್, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರಾದ ಕೊಟ್ರೇಶಪ್ಪ, ರಮೇಶ್ ನಾಯಕ್ ಹಾಜರಿದ್ದರು.