ಮುಂಗಾರಿನಲ್ಲಿ ಸಂಭವಿಸುವ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದು ತಹಸೀಲ್ದಾರ್ ಕೃಷ್ಣಮೂರ್ತಿ ಹೇಳಿದರು.
ಸೋಮವಾರಪೇಟೆ: ಮುಂಗಾರಿನಲ್ಲಿ ಸಂಭವಿಸುವ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದು ತಹಸೀಲ್ದಾರ್ ಕೃಷ್ಣಮೂರ್ತಿ ಹೇಳಿದರು.ತಾಲೂಕು ಆಡಳಿತ ಕಚೇರಿಯಲ್ಲಿ ಗುರುವಾರ ನಡೆದ ಪ್ರಕೃತಿ ವಿಕೋಪ ತಡೆ ಮುಂಜಾಗ್ರತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ವರ್ಷ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನಲೆಯಲ್ಲಿ ದೊಡ್ಡಮಟ್ಟದ ಹಾನಿಯಾಗಲಿಲ್ಲ. ಜಿಲ್ಲಾಡಳಿತದಿಂದ ಮಳೆಹಾನಿ ಪರಿಹಾರವನ್ನು ಸೂಕ್ತ ಸಮಯದಲ್ಲಿ ಮಾನವೀಯ ಹಿತದೃಷ್ಟಿಯಿಂದ ನೀಡಲಾಗಿದೆ ಎಂದು ಹೇಳಿದರು.ಮುಂದಿನ ಜೂನ್, ಜುಲೈ, ಅಗಸ್ಟ್ ತಿಂಗಳಲ್ಲಿ ಮುಂಗಾರಿನ ರಭಸ ಹೆಚ್ಚಾಗಬಹುದು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇದ್ದುಕೊಂಡು ಕರ್ತವ್ಯ ನಿರ್ವಹಿಸಿಬೇಕು. ಆಸ್ಪತ್ರೆಯಲ್ಲಿ ವೈದ್ಯರ ಸೇವೆ ಸಕಾಲದಲ್ಲಿ ಸಿಗಬೇಕು. ಸೆಸ್ಕ್, ಗ್ರಾಮ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಪ್ರತಿಯೊಂದು ಇಲಾಖೆಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.ಪ್ರವಾಹ ಪೀಡಿತ ಹಾಗೂ ಭೂಕುಸಿತ ಪ್ರದೇಶ ಸೇರಿದಂತೆ ಸೂಕ್ಷ್ಮ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅಂತಹ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರವಹಿಸಬೇಕು. ಸೂಕ್ತ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕಾಗಿದೆ. ಸ್ಥಳಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ಪ್ರವಾಹ ಪೀಡಿತ ಸ್ಥಳದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹೇಳಲಾಗುತ್ತದೆ. ಮಾತು ಕೇಳದಿದ್ದರೆ ನೋಟಿಸು ಕೊಡಲಾಗುವುದು. ಅಪಾಯ ಸ್ಥಳದಲ್ಲಿನ ನಿವಾಸಿಗಳು ಜಿಲ್ಲಾಡಳಿತದ ಸಲಹೆ- ಸೂಚನೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ಮಾತನಾಡಿ, ತಾಲೂಕು ಮಟ್ಟದ ಸಹಾಯವಾಣಿ ಕೇಂದ್ರದೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿರಬೇಕು. ಅನಾಹುತ ನಡೆದ ಸ್ಥಳಕ್ಕೆ ಶೀಘ್ರ ಹೋಗಬೇಕು. ಅಂಗನವಾಡಿ ಕಾರ್ಯಕರ್ತರ ಸಭೆಯನ್ನು ಕರೆದು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಜನ-ಜಾನುವಾರು ರಕ್ಷಣೆ ಅತೀ ಮುಖ್ಯವಾಗಿದೆ ಎಂದು ಹೇಳಿದರು. ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಇದ್ದರು.