ಸಾರಾಂಶ
ಎಸ್.ಎಂ. ಸೈಯದ್ಗಜೇಂದ್ರಗಡ:ಕಳೆದದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಒಳಗೆ ನೀರು ನುಗ್ಗಿ ಸಿಬ್ಬಂದಿ ಕಾರ್ಯ ನಿರ್ವಹಣೆಗೆ ಅಡಚಣೆ ಉಂಟು ಮಾಡಿದೆ.
ಸ್ಥಳಾಂತರ ಉದ್ದೇಶಿತ ಎಪಿಎಂಸಿಯ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೂ ಮಳೆ ನೀರು ನುಗ್ಗಿದೆ. ತಾಲೂಕಾಡಳಿತಕ್ಕೆ ಮಳೆ ನೀರು ಸಮಸ್ಯೆಯಾಗಿ ಕಾಡುತ್ತಿದೆ.ಮಳೆ ಬಂದಾಗ ಜನಸಾಮಾನ್ಯರ ಮನೆಗಳು ಹಾಗೂ ಬೆಳೆಗಳಿಗೆ ಹಾನಿಯಾದ ವರದಿಗಳು ಸಾಮಾನ್ಯ. ಆದರೆ ತಾಲೂಕಿನಲ್ಲಿ ಕಳೆದ ಎರಡು ದಿನಗಳ ಕಾಲ ಸುರಿದ ಮಳೆಗೆ ಕಾಲಕಾಲೇಶ್ವರ ವೃತ್ತದಲ್ಲಿನ ತಹಸೀಲ್ದಾರ್ ಕಾರ್ಯಾಲಯ ಸೋರಿದರೆ ಇತ್ತ ತಹಸೀಲ್ದಾರ್ ಕಚೇರಿ ತಾತ್ಕಾಲಿಕ ಸ್ಥಳಾಂತರಕ್ಕೆ ಉದ್ದೇಶಿತ ಕಚೇರಿಗೂ ಮಳೆ ನೀರು ಹೊಕ್ಕಿದೆ. ಹೀಗಾಗಿ ತಹಸೀಲ್ದಾರ್ ಕಾರ್ಯಾಲಯ ಇದ್ದ ಸ್ಥಳದಲ್ಲೇ ಕಾರ್ಯ ನಿರ್ವಹಿಸುತ್ತಾ ಅಥವಾ ಬೇರೆಡೆ ವರ್ಗಾಯಿಸುತ್ತಾ ತಾಲೂಕಾಡಳಿತ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಶಿಥಿಲಗೊಂಡಿದೆ. ಹೀಗಾಗಿ ಎಪಿಎಂಸಿಯ ಆವರಣಕ್ಕೆ ಸ್ಥಳಾಂತರಿಸುವ ಆದೇಶಕ್ಕೆ ವಿರೋಧ ವ್ಯಕ್ತವಾಗಿದೆ. ತಹಸೀಲ್ದಾರ್ ಕಾರ್ಯಾಲಯವನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಿದರೆ ಸಾರ್ವಜನಿಕರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ, ವಾಹನ ನಿಲುಗಡೆಗೆ ಸ್ಥಳವಿಲ್ಲ ಎಂದು ಎಪಿಎಂಸಿ ವರ್ತಕರು, ಶ್ರಮಿಕರು ಹಾಗೂ ವಿವಿಧ ಸಂಘಟನೆಗಳು ಹೋರಾಟದ ಎಚ್ಚರಿಕೆ ನೀಡಿ ತಹಸೀಲ್ದಾರ್ ಅವರಿಗೆ ಮನವಿ ನೀಡಿದ್ದರು.
ಪಟ್ಟಣದ ಹೃದಯ ಭಾಗದಲ್ಲಿರುವ ತಹಸೀಲ್ದಾರ್ ಕಾರ್ಯಾಲಯ ಶಿಥಿಲಗೊಂಡಿದ್ದು, ಮುಂದಿನ ಆದೇಶದ ವರೆಗೆ ಎಪಿಎಂಸಿ ಆವರಣದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಕಚೇರಿಗೆ ಸ್ಥಳಾಂತರ ಮಾಡಲು ಯೋಗ್ಯವಾಗಿದೆ ಎಂಬ ವರದಿ ಸಿದ್ಧಪಡಿಸಲಾಗಿತ್ತು. ಆದರೆ ಉದ್ದೇಶಿತ ಕಚೇರಿಯಲ್ಲಿ ಮಂಗಳವಾರ ಹಾಗೂ ಬುಧವಾರ ಸುರಿದ ಮಳೆಯ ನೀರು ಹೊಕ್ಕಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಿಬ್ಬಂದಿ ಮಳೆ ನೀರನ್ನು ಹೊರ ಹಾಕುವುದೇ ದಿನದ ಮೊದಲ ಕಾಯಕ ಮಾಡಿಕೊಂಡಿದ್ದು ಒಂದೆಡೆಯಾದರೆ ಪ್ರಸ್ತುತ ತಹಸೀಲ್ದಾರ್ ಕಾರ್ಯಾಲಯದ ಕೆಲ ಕೊಠಡಿಗಳಲ್ಲಿ ನಿಂತಿದ್ದ ಮಳೆ ನೀರನ್ನು ಕೆಲ ಸಿಬ್ಬಂದಿ ಹೊರ ಹಾಕಿದ್ದಾರೆ. ಹೀಗಾಗಿ ಪ್ರಸ್ತುತ ಹಾಗೂ ಉದ್ದೇಶಿತ ಎಪಿಎಂಸಿ ಆವರಣದಲ್ಲಿನ ಕಚೇರಿಗಳು ಸುಸ್ಥಿತಿಯಲ್ಲಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೆ ತಹಸೀಲ್ದಾರ್ ಕಾರ್ಯಾಲಯವನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿದರೆ ಕಾರ್ಯಾಲಯದಲ್ಲಿನ ಮಹತ್ವದ ಕಡತಗಳು ಹಾಗೂ ಇತರ ಸಾಮಗ್ರಿಗಳ ಪರಿಸ್ಥಿತಿ ಕಥೆ ಏನು ಎಂಬ ಪ್ರಶ್ನೆಗಳು ನಾಗರಿಕರನ್ನು ಕಾಡಲಾರಂಭಿಸಿವೆ. ಇತ್ತ ಕಾಲಕಾಲೇಶ್ವರ ವೃತ್ತದಲ್ಲಿನ ತಹಸೀಲ್ದಾರ್ ಕಾರ್ಯಾಲಯದಲ್ಲಿಯೂ ಮಳೆ ನೀರು ಬಿದ್ದಿದ್ದು ತಹಸೀಲ್ದಾರ್ ಕಚೇರಿ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ತಹಸೀಲ್ದಾರ್ ಕಾರ್ಯಾಲಯದ ಸ್ಥಳಾಂತರದ ಕುರಿತು ವಿವಾದವಿದ್ದು ತಾಲೂಕಾಡಳಿತ ಗಂಭೀತ ಚಿಂತನೆ ಕುರಿತು ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು ಎಂಬ ಆಗ್ರಹಗಳು ಪ್ರಜ್ಞಾವಂತ ನಾಗರಿಕರಿಂದ ಕೇಳಿ ಬರುತ್ತಿವೆ.ಪಟ್ಟಣದಲ್ಲಿ ಮಂಗಳವಾರ ಹಾಗೂ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ತಹಸೀಲ್ದಾರ್ ಕಚೇರಿಯ ಕೊಠಡಿಗೆ ಮಳೆ ನೀರು ಬಂದಿದೆ. ಆದರೆ ಎಪಿಎಂಸಿಯಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೀರು ನುಗ್ಗಿದ್ದು ಬಗ್ಗೆ ಮಾಹಿತಿಯಿಲ್ಲ. ತಹಸೀಲ್ದಾರ್ ಕಚೇರಿ ಎಪಿಎಂಸಿಗೆ ಸ್ಥಳಾಂತರಿಸಬೇಕು ಎಂದೇನಿಲ್ಲ. ಸುಸಜ್ಜಿತವಾದ ಕಟ್ಟಡವಿದ್ದರೆ ಸಾಕು, ಅದು ಸರ್ಕಾರಿ ಅಥವಾ ಖಾಸಗಿ ಕಟ್ಟಡವಿರಲಿ ಗಜೇಂದ್ರಗಡ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಹೇಳಿದರು.