ಸಾರಾಂಶ
ಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಯಾವುದೇ ಎಸ್ಕಾರ್ಟ್ ಇಲ್ಲದೆ ಮಂಗಳವಾರ ಬೆಳಗ್ಗೆ ಇಲ್ಲಿನ ತಹಸೀಲ್ದಾರ್ ಕಚೇರಿಗೆ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಚೇರಿ ಸಮಯಕ್ಕೆ ದಿಢೀರ್ ಭೇಟಿ ನೀಡಿದ್ದು, ಆ ಸಮಯದಲ್ಲಿ ತಹಸೀಲ್ದಾರ್ ಕಚೇರಿಗೆ ತಡವಾಗಿ ಬಂದದ್ದನ್ನು ಕಂಡು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಬಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ 9.30ರಿಂದ 10.15 ಗಂಟೆಯವರೆಗೂ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಚಹ ಸೇವಿಸಿ ಕಾದು ನಂತರ ಕಚೇರಿ ಸಮಯವಾಗುತ್ತಿದ್ದಂತೆ ಯಾವುದೇ ಎಸ್ಕಾರ್ಟ್ ಇಲ್ಲದೆ ಕಂದಾಯ ಆಯುಕ್ತ ಸುನೀಲಕುಮಾರ ಹಾಗೂ ಇತರೆ ಸಿಬ್ಬಂದಿ ಜತೆ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದರು.ಆಗ ಕಚೇರಿಯಲ್ಲಿ ತಹಸೀಲ್ದಾರ್ ಇಲ್ಲದ್ದನ್ನು ಕಂಡು ಕೆಂಡಾಮಂಡಲವಾದ ಸಚಿವರು ತಡವಾಗಿ ಬಂದ ತಹಸೀಲ್ದಾರ್ ರೇಣುಕಾ ಅವರಿಗೆ ಕ್ಲಾಸ್ ತೆಗೆದುಕೊಂಡರು. ಕಂದಾಯ ಇಲಾಖೆಯ ದಾಖಲಾತಿಗಳು ಯಾವ ರೀತಿ ಪ್ರಗತಿಯಾಗಿದೆ, ಎಷ್ಟು ಕಡತಗಳು ಬಾಕಿ ಇವೆ ಎಂದು ಕೇಳಿದರೆ ತಹಸೀಲ್ದಾರ್ ಹಾರಿಕೆ ಉತ್ತರ ನೀಡಿದರು. ನಂತರ ಸರ್ವೇ ಅಧಿಕಾರಿ ಬಸವರಾಜ್ ಅವರಿಂದ ಮಾಹಿತಿ ಪಡೆದರು. ಬಡವರಿಗೆ ಸಂಬಂಧಿಸಿದ ಕೆಲಸಗಳನ್ನು ಕುರಿತು ಕೇಳಲಾಗುತ್ತಿರುವ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡಿದ್ದರಿಂದ ಅಮ್ಮ, ತಾಯಿ ಜನರು ಕೆಲಸಗಳಿಗೆ ಕಚೇರಿ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ನಿಮ್ಮಂತ ಅಧಿಕಾರಿಗಳು ಇದಕ್ಕೆ ಸ್ಪಂದನೆ ನೀಡುತ್ತಿಲ್ಲ ಎಂದು ಆಕ್ರೋಶಗೊಂಡರು. ಅಲ್ಲದೇ ತತ್ಕಾಲ್ ಪೋಡಿ ಬಗ್ಗೆ ಸರ್ಕಾರ ಆದೇಶ ನೀಡಿದೆ ಎಂಬುದಾದರೂ ಗೊತ್ತಿದೆಯಾ ಎಂದು ಕೇಳಿದರೂ ಅದಕ್ಕೂ ತಹಸೀಲ್ದಾರ್ ನಿರುತ್ತರ. ಕಂದಾಯ ಸಚಿವರು ರಾಜ್ಯದ ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ತಹಸೀಲ್ದಾರರೇ ಹೀಗಾದರೆ ಹೇಗೇ ಎಂದು ಬೇಸರವ್ಯಕ್ತಪಡಿಸಿದರು.
ಯಾವುದೇ ಕೆಲಸ ಕೇಳಿದರೂ ಸಿಬ್ಬಂದಿ ಕೊರತೆ ಎಂದು ಹಾರಿಕೆ ಉತ್ತರ ನೀಡುತ್ತೀರಾ? ಹಾಗಾದರೆ 20 ಸಿಬ್ಬಂದಿಯನ್ನು ಯಾಕೆ ಡೆಪ್ಯೂಟೇಶನ್ ಮೇಲೆ ಕಳುಹಿಸಿದ್ದೀರಿ. ನಿಮಗೆ ಡೆಪ್ಯುಟೇಶನ್ ಮೇಲೆ ಕಳುಹಿಸಿ ಎಂದು ನಾನು ಹೇಳಿದ್ದೀನಾ? ಯಾರನ್ನು ಕೇಳಿ ಡೆಪ್ಯುಟೇಶನ್ ಕಳುಹಿಸಿದ್ದೀರಾ ಎಂದು ತಹಸೀಲ್ದಾರ್ ರೇಣುಕಮ್ಮ ಅವರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳ ಹತ್ತಿರ ಕುಳಿತು ನನಗೆ ಸಿಬ್ಬಂದಿ ಕೊಡಿ, ಇಲ್ಲದಿದ್ದರೆ ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂದು ಪಟ್ಟು ಹಿಡಿದು ಕೇಳಿ ಎಂದು ತಹಸೀಲ್ದಾರ್ ರೇಣುಕಮ್ಮ ಅವರಿಗೆ ಬುದ್ಧಿವಾದ ಹೇಳಿದರು. ನಂತರ ಸಚಿವರು ರಿಜಿಸ್ಟರ್, ಅಭಿಲೇಖಾಲಯ, ಸರ್ವೇ ಇಲಾಖೆ, ಪಹಣಿ ಕೊಡುವ ಹಾಗೂ ಆಧಾರ್ ಮಾಡುವ ಕೋಣೆಗೆ ಭೇಟಿ ನೀಡಿ ಜನರಿಂದಲೇ ಸಮಸ್ಯೆ ಆಲಿಸಿದರು. ಸರ್ವೇ ಇಲಾಖೆಗೆ ಸಂಬಂಧಿಸಿದ ಪೋಡಿ ಹಾಗೂ ಇತರೆ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಬಾಕ್ಸ್...ಕೂಡ್ಲಿಗಿಗೆ ಡಿಸಿ ಭೇಟಿ ಕೂಡ್ಲಿಗಿ ತಹಸೀಲ್ದಾರ್ ಕಚೇರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ ತಿಳಿದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಸಚಿವರನ್ನು ಭೇಟಿ ಮಾಡಿದರು. ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ ತಹಸೀಲ್ದಾರ್ ನೀಡಿದ ಹಾರಿಕೆ ಉತ್ತರದ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿಸಿದ ಸಚಿವರು, ಜನರ ಸಮಸ್ಯೆಗೆ ಸ್ಪಂದಿಸುವ ಬಗ್ಗೆ ತಿಳಿಸಿದರು. ಸಚಿವರ ಜತೆ ಕಂದಾಯ ಇಲಾಖೆಯ ಆಯುಕ್ತ ಸುನೀಲ್ ಕುಮಾರ, ಸಚಿವರ ಆಪ್ತ ಸಹಾಯಕ ರವಿ ತಿರ್ಲಾಪುರ ಹಾಗೂ ಇತರರಿದ್ದರು. ನಂತರ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ಮಾಜಿ ಅಧ್ಯಕ್ಷ ಕೋಗಳಿ ಮಂಜುನಾಥ, ಮಹಿಳಾ ಘಟಕದ ಜಿಂಕಾಲ್ ನಾಗಮಣಿ, ಪಪಂ ಸದಸ್ಯರಾದ ಕಾವಲ್ಲಿ ಶಿವಪ್ಪ ನಾಯಕ, ಸಿರಿಬಿ ಮಂಜುನಾಥ, ಈಶಪ್ಪ, ಟಿ.ಜಿ. ಮಲ್ಲಿಕಾರ್ಜುನ ಗೌಡ, ಮಾದಿಹಳ್ಳಿ ನಜೀರ, ರಾಘವೇಂದ್ರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.