ಮಾನಸಿಕ ಒತ್ತಡದಲ್ಲಿರುವವರಿಗೆ ಟೆಲಿ ಮಾನಸ್‌ ಸಂಜೀವಿನಿ!

| Published : Jul 27 2025, 01:54 AM IST

ಸಾರಾಂಶ

ಕೋವಿಡ್‌ ನಂತರದಲ್ಲಿ ದೇಶದಲ್ಲಿ ಸಾಕಷ್ಟು ಜನರು ಮಾನಸಿಕ ಒತ್ತಡಕ್ಕೆ ಒಳಗಾದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2022ರಲ್ಲಿ ಟೆಲಿ ಮಾನಸ್‌ ಎಂಬ ನೂತನ ಕಾರ್ಯಕ್ರಮ ಶುರು ಮಾಡಿದರು. ದೇಶದ ಪ್ರತಿ ರಾಜ್ಯದಲ್ಲೂ ಟೆಲಿ ಮಾನಸ ಕೇಂದ್ರಗಳಿದ್ದು, ಬೆಂಗಳೂರಿನ ನಿಮಾನ್ಸ್‌ ಹಾಗೂ ಧಾರವಾಡದ ಡಿಮಾನ್ಸ್‌ನಲ್ಲಿ ಈ ಕೇಂದ್ರಗಳು 2022ರಿಂದ ಕಾರ್ಯ ನಿರ್ವಹಿಸುತ್ತಿವೆ.

ಬಸವರಾಜ ಹಿರೇಮಠ

ಧಾರವಾಡ: ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ಮಗುವಿನಿಂದ ಹಿಡಿದು ವಯೋ ವೃದ್ಧರ ವರೆಗೂ ಮಾನಸಿಕ ಒತ್ತಡ ಸವಾಲಾಗಿದೆ. ಈ ಮಾನಸಿಕ ಒತ್ತಡ ತಡೆಯಲಾಗದೇ ಕೆಲವರು ಆತ್ಮಹತ್ಯೆಯೂ ಮಾಡಿಕೊಂಡಿದ್ದುಂಟು. ಮಾನಸಿಕ ರೋಗಕ್ಕೆ ಪ್ರಾಥಮಿಕ ಮಟ್ಟದಲ್ಲಿ ಆಪ್ತ ಸಮಾಲೋಚನೆ, ಧೈರ್ಯ ಮತ್ತು ಮಾರ್ಗದರ್ಶನ ದೊರೆತರೆ ಮಾನಸಿಕ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂಬುದನ್ನು ಟೆಲಿ ಮಾನಸ್‌ ಸಾಬೀತುಪಡಿಸಿದೆ.

ಪಿಯುಸಿ ವಿದ್ಯಾರ್ಥಿಯೊಬ್ಬ ಅನುತ್ತೀರ್ಣನಾಗಿ ಮನನೊಂದು ಬೇಸತ್ತು ಧಾರವಾಡ ರೇಲ್ವೆ ನಿಲ್ದಾಣಕ್ಕೆ ಆತ್ಮಹತ್ಯೆಗೆ ತೆರಳಿದ್ದನು. ಇನ್ನೇನು ನಿಲ್ದಾಣದ ಮೂಲಕ ಹಳಿ ಕಡೆ ಹೋಗಬೇಕು ಎನ್ನುವಷ್ಟರಲ್ಲಿ ನಿಲ್ದಾಣದ ಗೋಡೆ ಮೇಲೆ ಪರೀಕ್ಷೆ ಒತ್ತಡ ನಿರ್ವಹಿಸಲು ಸಲಹೆ ಬೇಕೆ? ಎಂಬ ಜಾಹೀರಾತು ನೋಡಿ ಟೆಲಿ ಮಾನಸ್‌ಗೆ ಶುಲ್ಕ ರಹಿತ ಕರೆ ಮಾಡಿದ. ಆಪ್ತ ಸಮಾಲೋಚಕರ ಜತೆಗೆ ಮಾತನಾಡಿ ಮನಸ್ಸು ಹಗುರ ಮಾಡಿಕೊಂಡು ಆತ್ಮಹತ್ಯೆ ನಿರ್ಧಾರ ಕೈ ಬಿಡುವುದಲ್ಲದೇ ಮತ್ತೆ ಪರೀಕ್ಷೆ ಬರೆದು ಈಗ ಬ್ಯಾಂಕ್‌ನಲ್ಲಿ ನೌಕರಿ ಮಾಡುತ್ತಿದ್ದಾನೆ...!

ನಿತ್ಯ ಇಂತಹ ಹತ್ತಾರು ಒತ್ತಡಗಳಿಂದ ಬಳಲುವವರು ಟೆಲಿ ಮಾನಸ್‌ಗೆ ಕರೆ ಮಾಡಿ ಮನಸ್ಸು ಹಗುರ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಕಂಡವರಿದ್ದಾರೆ. ಟೆಲಿ ಮಾನಸ್‌ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 65,551 ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಕರೆಗಳನ್ನು ಸ್ವೀಕರಿಸಿ ಅವರಿಗೆ ಪರಿಹಾರ ಮಾರ್ಗಗಳನ್ನು ಒದಗಿಸಿದೆ.

ಏನಿದು ಟೆಲಿ ಮಾನಸ್‌?: ಕೋವಿಡ್‌ ನಂತರದಲ್ಲಿ ದೇಶದಲ್ಲಿ ಸಾಕಷ್ಟು ಜನರು ಮಾನಸಿಕ ಒತ್ತಡಕ್ಕೆ ಒಳಗಾದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2022ರಲ್ಲಿ ಟೆಲಿ ಮಾನಸ್‌ ಎಂಬ ನೂತನ ಕಾರ್ಯಕ್ರಮ ಶುರು ಮಾಡಿದರು. ದೇಶದ ಪ್ರತಿ ರಾಜ್ಯದಲ್ಲೂ ಟೆಲಿ ಮಾನಸ ಕೇಂದ್ರಗಳಿದ್ದು, ಬೆಂಗಳೂರಿನ ನಿಮಾನ್ಸ್‌ ಹಾಗೂ ಧಾರವಾಡದ ಡಿಮಾನ್ಸ್‌ನಲ್ಲಿ ಈ ಕೇಂದ್ರಗಳು 2022ರಿಂದ ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರದ ಪ್ರಯೋಜನ ಬಗ್ಗೆ ಅಷ್ಟೊಂದು ಜಾಗೃತಿ ಇರದೇ ಇದ್ದರೂ ಎರಡೂ ಕೇಂದ್ರಗಳು ಸೇರಿ ಮೂರು ವರ್ಷಗಳಲ್ಲಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿ ಪರಿಹಾರ ಒದಗಿಸಿದ್ದಾರೆ.

ಈ ನಂಬರ್‌ಗೆ ಕರೆ ಮಾಡಿ: ಈ ಯೋಜನೆ ಕುರಿತು ಕೇಂದ್ರದ ನೋಡಲ್‌ ಅಧಿಕಾರಿ ರಂಗನಾಥ ಕುಲಕರ್ಣಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿ, ಉಚಿತ ಸಹಾಯವಾಣಿ ಸಂಖ್ಯೆ - 14416 ಅಥವಾ 18008914416 ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, 20 ಜನ ಪಾಳಿ ಪ್ರಕಾರದಲ್ಲಿ ಆಪ್ತ ಸಮಾಲೋಚಕರು ಕರೆ ಸ್ವೀಕರಿಸುತ್ತಾರೆ. ಕರೆ ಮಾಡುವಾಗ ಇನ್ನೊಂದು ಕರೆ ಬಂದರೂ ವೇಟಿಂಗ್‌ ಮೂಲಕ ನಂತರದಲ್ಲಿ ಅವರನ್ನು ಸಂಪರ್ಕಿಸುವ ವ್ಯವಸ್ಥೆ ಈಗ ಶುರು ಮಾಡಿದೆ. ವ್ಯಥೆಗೆ ಒಳಪಟ್ಟವರು, ಪರೀಕ್ಷಾ ಒತ್ತಡಕ್ಕೊಳಗಾದವರು, ಕೌಟುಂಬಿಕ ಸಮಸ್ಯೆಗೊಳಗಾದವರು, ಆತ್ಮಹತ್ಯೆ ಆಲೋಚನೆಗಳು, ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕಶಕ್ತಿ ತೊಂದರೆಯುಳ್ಳವರು, ಆರ್ಥಿಕ ಒತ್ತಡದಲ್ಲಿರುವವರು, ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಕರೆ ಮಾಡಬಹುದು ಎಂದರು.

ಶೇ. 15ರಷ್ಟು ಗಂಭೀರ ಕರೆ: ಈ ಹಿಂದೆ ಬಂದಿರುವ ಕರೆಗಳ ಮಾಹಿತಿ ಪ್ರಕಾರ, ಹೆಚ್ಚು ರಾತ್ರಿ ಹೊತ್ತು ಕರೆಗಳು ಬರುತ್ತಿದ್ದು ಶೇ. 85ರಷ್ಟು ಜನರು ಆರೋಗ್ಯ ಸಮಸ್ಯೆಗಳಿಗೆ ಮಾನಸಿಕ ಪರಿಹಾರ, ಶಿಕ್ಷಣ, ವೈಯಕ್ತಿಕ ಬದುಕು, (ಅತ್ತೆ- ಸೊಸೆ ಜಗಳ, ದ್ವೇಷ), ಲೈಂಗಿಕ ಸಮಸ್ಯೆಗಳು ಅಂತಹ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಶೇ. 15ರಷ್ಟು ಜನರು ವಿವಿಧ ಚಟಗಳಿಂದ ಹೊರ ಬರುವುದು ಸೇರಿದಂತೆ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ. ಈ ಪೈಕಿ ನಾವು ಗಂಭೀರ ಸಮಸ್ಯೆಗಳಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಹೋಗುವ ಸಂಗತಿಗಳಿದ್ದರೆ, ಆಪ್ತಸಮಾಲೋಚಕರು ಈ ಕರೆಯನ್ನು ಮನೋವೈದ್ಯರಿಗೆ ವರ್ಗಾಯಿಸುತ್ತಾರೆ. ಮನೋವೈದ್ಯರು ಅವರೊಂದಿಗೆ ವಿಡಿಯೋ ಕಾಲ್‌ ಮಾಡಿಯಾದರೂ ಅಥವಾ ಅವರನ್ನು ಡಿಮಾನ್ಸ್‌ಗೆ ಕರೆಯಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಾರೆ. ಇಲ್ಲಿ ಕರೆ ಮಾಡಿದವರ ಮಾಹಿತಿ ಮಾತ್ರ ಗೌಪ್ಯವಾಗಿರುತ್ತದೆ ಎಂದರು.

ಪ್ರತಿ ಸಮಸ್ಯೆಗೆ ಇದೆ ಪರಿಹಾರ: ಕಳೆದ ಮೂರು ವರ್ಷಗಳಲ್ಲಿ 60 ಸಾವಿರಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದ್ದು, ಅವರ ಒತ್ತಡ ನಿರ್ವಹಣೆಯಲ್ಲಿ ಟೆಲಿ ಮಾನಸ್‌ ಕಾರ್ಯಕ್ರಮ ಯಶಸ್ವಿಯಾಗಿದೆ. ಹೆಚ್ಚಾಗಿ ವಿದ್ಯಾರ್ಥಿಗಳು ಈ ಯೋಜನೆ ಬಳಸಿಕೊಂಡು ತಮ್ಮ ಶೈಕ್ಷಣಿಕ ಬದುಕು ರೂಪಿಸಿಕೊಳ್ಳಬೇಕು. ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದು ಯಾರೂ ಆತ್ಮಹತ್ಯೆ ಅಥವಾ ಇನ್ನಾವುದೇ ಕಠಿಣ ಕ್ರಮಕ್ಕೆ ಮುಂದಾಗದೇ ಉತ್ತಮ, ಒತ್ತಡ ರಹಿತ ಜೀವನ ನಡೆಸಬೇಕು ಎಂಬುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಡಿಮಾನ್ಸ್‌ ನಿರ್ದೇಶಕ ಅರುಣಕುಮಾರ ಹೇಳಿದರು.