ಫೆ. 28ರಿಂದ 5 ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಟೆಲಿವಿಷನ್‌ ಪ್ರೀಮಿಯರ್‌ ಲೀಗ್‌: ಬಿ.ಆರ್‌. ಸುನೀಲಕುಮಾರ್‌

| Published : Feb 10 2024, 01:47 AM IST

ಫೆ. 28ರಿಂದ 5 ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಟೆಲಿವಿಷನ್‌ ಪ್ರೀಮಿಯರ್‌ ಲೀಗ್‌: ಬಿ.ಆರ್‌. ಸುನೀಲಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಫೆ. 28, 29, ಮಾರ್ಚ್‌ 1, 2, 3ರಂದು ಕ್ರಿಕೆಟ್‌ ಪಂದ್ಯಾವಳಿ ಜರುಗಲಿದೆ. ಈಗಾಗಲೇ ಬೆಂಗಳೂರಿನ ಅಶೋಕ ಹೊಟೇಲ್‌ನಲ್ಲಿ ಬಿಡ್ಡಿಂಗ್‌ ನಡೆಸಲಾಗಿದ್ದು, ಈ ಪಂದ್ಯಾವಳಿಗೆ ನಟಿ ರಾಗಿಣಿ ದ್ವಿವೇದಿ ಬ್ರ್ಯಾಂಡ್ ಅಂಬಾಸಿಡರ್‌ ಆಗಿದ್ದಾರೆ.

ಹುಬ್ಬಳ್ಳಿ: ಫೆ. 28ರಿಂದ 5 ದಿನಗಳ ಕಾಲ ಇಲ್ಲಿನ ರಾಜ್‌ ನಗರದಲ್ಲಿರುವ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ಎನ್‌1 ಕ್ರಿಕೆಟ್‌ ಅಕಾಡೆಮಿಯಿಂದ ಟೆಲಿವಿಷನ್‌ ಪ್ರೀಮಿಯರ್‌ ಲೀಗ್‌ ಸೀಸನ್‌-3 ಕ್ರಿಕೆಟ್‌ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಎನ್‌1 ಅಕಾಡೆಮಿಯ ಬಿ.ಆರ್‌. ಸುನೀಲಕುಮಾರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಕೆಟ್‌ಗೂ ಸಿನಿಮಾಗೂ ನಂಟಿದೆ. ಸಿನಿಮಾ ಕಲಾವಿದರಲ್ಲಿ ಎಷ್ಟೋ ಮಂದಿ ತಾವೊಬ್ಬ ಉತ್ತಮ ಕ್ರಿಕೆಟ್‌ ಆಟಗಾರನಾಗಬೇಕೆಂದು ಬಯಸಿದ್ದವರು. ಕಲಾವಿದರು ಕೂಡ ಕ್ರಿಕೆಟ್‌ ಆಡಲು, ನೋಡಲು ಬಯಸುತ್ತಾರೆ. ಇದೇ ಕಾರಣಕ್ಕೆ ಕಳೆದ 2 ವರ್ಷಗಳಿಂದ ಯಶಸ್ವಿಯಾಗಿ ಈ ಟೆಲಿವಿಷನ್‌ ಲೀಗ್‌ ನಡೆಸಲಾಗಿದೆ. ಇದೀಗ ಹುಬ್ಬಳ್ಳಿಯಲ್ಲಿ ಮೂರನೇ ಸೀಸನ್‌ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಫೆ. 28, 29, ಮಾರ್ಚ್‌ 1, 2, 3ರಂದು ಕ್ರಿಕೆಟ್‌ ಪಂದ್ಯಾವಳಿ ಜರುಗಲಿದೆ. ಈಗಾಗಲೇ ಬೆಂಗಳೂರಿನ ಅಶೋಕ ಹೊಟೇಲ್‌ನಲ್ಲಿ ಬಿಡ್ಡಿಂಗ್‌ ನಡೆಸಲಾಗಿದ್ದು, ಈ ಪಂದ್ಯಾವಳಿಗೆ ನಟಿ ರಾಗಿಣಿ ದ್ವಿವೇದಿ ಬ್ರ್ಯಾಂಡ್ ಅಂಬಾಸಿಡರ್‌. ಅಶ್ವಸೂರ್ಯ ರೈಡರ್ಸ್‌, ಗೋಲ್ಡನ್‌ ಈಗಲ್‌, ಕೆಕೆಆರ್‌ ಮಿಡಿಯಾ ಹೌಸ್‌, ಬಯೋಟಾಪ್‌ ಲೈಫ್‌ ಸೇವಿಯರ್ಸ್, ಎವಿಆರ್‌ ಟಸ್ಕರ್ಸ್, ರಾಸು ವಾರಿಯರ್ಸ್, ಭಜರಂಗಿ ಬಾಯ್ಸ್, ದಿ ಬುಲ್‌ ಸ್ಕ್ವಾಡ್, ಇನ್‌ಸೇನ್‌ ಕ್ರಿಕೆಟ್‌ ಟೀಂ, ಜಿಎಲ್‌ಆರ್‌ ವಾರಿಯರ್ಸ್ ಸೇರಿದಂತೆ ಒಟ್ಟು 10 ತಂಡಗಳು ಈ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, 12 ಓವರ್‌ಗಳ ಪಂದ್ಯ ಇದಾಗಿದ್ದು, 23 ಪಂದ್ಯಗಳು ನಡೆಯಲಿವೆ.

ಹೊನಲು ಬೆಳಕಿನ ಪಂದ್ಯಾವಳಿಯಿದ್ದು, ಫೆ. 28ರಂದು ಬೆಳಗ್ಗೆ 11ಕ್ಕೆ ಮೊದಲ ಪಂದ್ಯ ಆರಂಭವಾಗಲಿದೆ. ಅಂದು 4 ಪಂದ್ಯಾವಳಿ ನಡೆಯಲಿವೆ. 29ರಂದು 5, ಮಾರ್ಚ್‌ 1ರಂದು 5, 2ರಂದು 5 ಹಾಗೂ ಮಾ. 3ರಂದು ಸೆಮಿಫೈನಲ್‌ ಪಂದ್ಯ ಸೇರಿ ಒಟ್ಟು 4 ಪಂದ್ಯಗಳು ನಡೆಯಲಿವೆ. ವಿನ್ನರ್‌ ತಂಡಕ್ಕೆ ₹4 ಲಕ್ಷ, ರನ್ನರ್‌ ತಂಡಕ್ಕೆ ₹2 ಲಕ್ಷ ಹಾಗೂ ಮಾನ್‌ ಆಫ್ ದಿ ಮ್ಯಾಚ್‌ಗೆ 1 ಕಾರ್‌ ನೀಡಲಾಗುತ್ತಿದೆ ಎಂದರು.

ಕಿರುತೆರೆಯ 170ಕ್ಕೂ ಹೆಚ್ಚು ನಟನಟಿಯರು ಈ ಸಾಲಿನ ಟಿಪಿಎಲ್‌ ಸೀಸನ್‌-3ಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಮುಖ ನಟರಾದ ಲೂಸ್‌ ಮಾದ ಯೋಗಿ, ರವಿಶಂಕರಗೌಡ ಟಿಪಿಎಲ್‌ನಲ್ಲಿ ಆಡಲಿದ್ದಾರೆ. ಸುಮಾರು 6 ಸಾವಿರಕ್ಕೂ ಅಧಿಕ ಜನರು ವೀಕ್ಷಿಸುವ ನಿರೀಕ್ಷೆ ಹೊಂದಲಾಗಿದೆ. ಪಂದ್ಯಾವಳಿ ವೀಕ್ಷಣೆಗೆ ಆಗಮಿಸುವವರಿಗೆ ₹100 ಶುಲ್ಕ ನಿಗದಿಗೊಳಿಸಲಾಗಿದೆ ಎಂದರು.

ನಟಿ, ಟಿಪಿಎಲ್‌ ಸೀಸನ್‌-3ನ ಬ್ರ್ಯಾಂಡ್‌ ಅಂಬಾಸಿಡರ್‌ ರಾಗಿಣಿ ದ್ವಿವೇದಿ ಮಾತನಾಡಿ, ಹುಬ್ಬಳ್ಳಿ ನನ್ನ ಮನೆ ಇದ್ದಂತೆ. ಉತ್ತರ ಕರ್ನಾಟಕದ ಹೆಬ್ಬಾಲು ಆಗಿರುವ ಹುಬ್ಬಳ್ಳಿಯ ಜನತೆ ಮೊದಲಿನಿಂದಲೂ ಚಿತ್ರಗಳನ್ನು ನೋಡಿ ಹಾರೈಸುತ್ತಾ ಬಂದಿದ್ದು, ಈಗ ನಗರದಲ್ಲಿ 5 ದಿನಗಳ ಕಾಲ ನಡೆಯುವ ಟಿಪಿಎಲ್‌-3 ಕ್ರಿಕೆಟ್‌ ಪಂದ್ಯಾವಳಿ ನಡೆಯುತ್ತಿದ್ದು ಹುಬ್ಬಳ್ಳಿ ಜನತೆ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಚಿತ್ರನಟ ಲೂಸ್‌ ಮಾದ, ರವಿಶಂಕರಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಕ್ರಿಕೆಟ್‌ ತಂಡದ ನಾಯಕರಾದ ಚೇತನ ಸೂರ್ಯ, ಅಲಕಾನಂದ, ವಿಹಾನ್‌ ನಾಯಕ, ಕುಶಾಲ ಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.