ಸಾರಾಂಶ
ದೇವದುರ್ಗ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಶ್ರೀ ಬಸವೇಶ್ವರ ಡಿಇಡಿ ಕಾಲೇಜಿನಲ್ಲಿ ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ದೇವದುರ್ಗ
ನೋವು, ನಲಿವು, ಅಸಮಾನತೆ, ಅವಮಾನ, ಶೋಷಣೆ ಇಂತಹ ಅನೇಕ ಘಟನಾವಳಿಗಳ ಸ್ಫೂರ್ತಿಯಿಂದ ರಚನೆಗೊಂಡಿರುವ ಅಂಬೇಡ್ಕರ್ ಅವರ ಸಂವಿಧಾನದ ತಿರುಳನ್ನು ಮಕ್ಕಳಿಗೆ ಬೋಧಿಸುವ ಹೊಣೆ ನಿಮ್ಮ ಮೇಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಡೋಣಿ ತಿಳಿಸಿದರು.ಪಟ್ಟಣದ ಹೊರವಲಯದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಶ್ರೀ ಬಸವೇಶ್ವರ ಡಿ.ಇಡಿ ಕಾಲೇಜಿನಲ್ಲಿ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾದ ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಜ.26ರಿಂದ ಒಂದು ತಿಂಗಳ ಕಾಲ ಪ್ರತಿಯೊಂದು ಜಿಲ್ಲೆಯಲ್ಲಿ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸಲಿದ್ದು, ಇದರಲ್ಲಿ ಉಪನ್ಯಾಸ, ಚಿಂತನ-ಮಂಥನ ಕಾರ್ಯಕ್ರಮಗಳು ಜರುಗಲಿವೆ. ಗ್ರಾಮ ವಾಸ್ತವ್ಯ ಕೂಡ ಇರುತ್ತದೆ. ಆದ್ದರಿಂದ ಈ ಸಂವಿಧಾನ ಜಾಗೃತಿ ಜಾಥಾದ ಉದ್ದೇಶ ಯಶಸ್ವಿಗೆ ನಾವು-ನೀವೆಲ್ಲಾ ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸೋಣ ಎಂದರು.ಯುವ ಹೋರಾಟಗಾರ ರಮೇಶ ರಾಮನಾಳ ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ಹೀರಾಲಾಲ್, ಶಾಖಾ ಗ್ರಂಥಾಲಯದ ಗ್ರಂಥಪಾಲಕ ಹನುಮಂತ ಅಂಚೆಸೂಗೂರು ಮಾತನಾಡಿದರೆ, ಕುಮಾರಿ ಯಲ್ಲಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಯೋಜಕ ಶ್ರೀನಿವಾಸ ಪಿ. ಸಂವಿಧಾನ ಪೀಠಿಕೆ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲ ಖೇಮಣ್ಣ ಪವಾರ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ನರಸಿಂಗರಾವ್ ಸರಕೀಲ್, ಜಾಲಹಳ್ಳಿ ವಲಯ ಮೇಲ್ವಿಚಾರಕಿ ಶಾಂತಾಬಾಯಿ ನೂರಾನಾಯ್ಕ್, ಮರಿಯಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹನುಮಂತಿ ಸಂಗಡಿಗರು ಪ್ರಾರ್ಥಿಸಿದರೆ, ಫಾತೀಮಾ ಸ್ವಾಗತಿಸಿದರು. ಶಿವಕಲಾ ನಿರೂಪಿಸಿದರೆ, ತಸ್ಲೀಮಾ ವಂದಿಸಿದರು.