ಸಿರಿಧಾನ್ಯ ವಿಶೇಷತೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ನಮ್ಮ ಹಿರಿಯರ ಆರೋಗ್ಯದ ಗುಟ್ಟನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಅಗತ್ಯ
ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯ ಬೆಳೆಯುವುದು ಹಾಗೂ ಅವುಗಳ ಖಾದ್ಯ ಸೇವಿಸುವುದು ಕಡಿಮೆಯಾಗುತ್ತಿದೆ. ಹಾಗಾಗಿ ಮುಂದಿನ ಪೀಳಿಗೆ ಮಕ್ಕಳಿಗೆ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ವಿಶೇಷತೆ ಕುರಿತು ತಿಳಿಸುವುದು ಹಾಗೂ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ ಹೇಳಿದರು.
ಕೊಪ್ಪಳ ತಾಪಂ ಆವರಣದಲ್ಲಿರುವ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಹಾರ ಮತ್ತು ಪೌಷ್ಟಿಕ ಯೋಜನೆಯಡಿ ನ್ಯೂಟ್ರಿ ಸಿರಿಧಾನ್ಯ ಕಾರ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2026ರ ಅಂಗವಾಗಿ ಬೆಳೆ ಉತ್ಪಾದನೆಯಾಚೆಗಿನ ಕೃಷಿ-ರೈತರ ಸಬಲೀಕರಣ ಎಂಬ ಪರಿಕಲ್ಪನೆಯೊಂದಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಿರಿಧಾನ್ಯ ವಿಶೇಷತೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ನಮ್ಮ ಹಿರಿಯರ ಆರೋಗ್ಯದ ಗುಟ್ಟನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಅಗತ್ಯವಾಗಿದೆ. ಇಂದಿನ ಮಕ್ಕಳು ಮತ್ತು ಯುವಕರು ಹಳೆಯ ಶೈಲಿಯ ಅಡುಗೆ ಇಷ್ಟಪಡದಿರಬಹುದು. ಹಾಗಾಗಿ ಅವರ ರುಚಿಗೆ ತಕ್ಕಂತೆ ಸಿರಿಧಾನ್ಯ ಬಳಸಿ ಬಿಸ್ಕತ್ತು ಮತ್ತು ಕೇಕ್ ನಂತಹ ಇಷ್ಟವಾಗುವ ರೂಪದಲ್ಲಿ ಪೌಷ್ಟಿಕ ಆಹಾರ ನೀಡುವ ಮೂಲಕ ಮುಂದಿನ ಪೀಳಿಗೆಯ ಆರೋಗ್ಯ ಹೆಚ್ಚಿಸುವ ಉದ್ದೇಶದಿಂದಲೂ ಸಹ ನಮ್ಮ ಜಿಲ್ಲೆಯಲ್ಲಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು.
ಗಮನ ಸೆಳೆದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪ್ರದರ್ಶನ:ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಮಹಿಳೆಯರು ಮತ್ತು ಸುಮಾರು 25ಕ್ಕೂ ಹೆಚ್ಚು ಮಹಿಳಾ ತಂಡಗಳು ಭಾಗವಹಿಸಿದ್ದವು. ನವಣಿ, ಸಜ್ಜಿ, ಹಾರಕ, ಬರಗು, ರಾಗಿ, ಸಾಮೆ, ಅಗಸಿ, ಮುಂತಾದ ಧಾನ್ಯಗಳಿಂದ ತಯಾರಿಸಿದ ವಿವಿಧ ತರಹದ ಖಾದ್ಯ ಸ್ಪರ್ಧೆಯಲ್ಲಿ ಪ್ರದರ್ಶಿಸಿದರು. ರಾಗಿಯಿಂದ ತಯಾರಿಸಿದ ಕೇಕ್, ಹಲ್ವಾ, ಪೇಡಾ, ಲಾಡು ಮತ್ತು ಬಿಸ್ಕತ್ತು, ಸಜ್ಜೆ ಪೇಡಾ, ಆಳ್ವಿ ಪಾಯಸ, ಜೋಳದ ಹಿಟ್ಟಿನ ಖಾರದ ಒಗ್ಗರಣೆ ಮುದ್ದೆ, ಜೋಳದ ಸಮೋಸಾ, ನವಣೆ ನಿಪ್ಪಟ್ಟು, ಬ್ರಾಹ್ಮಿ ತಂಬುಳಿ ಸೇರಿದಂತೆ ಇತರೆ ಪದಾರ್ಥಗಳು ಎಲ್ಲರ ಗಮನ ಸೆಳೆದವು.
ವಿಜೇತರಿಗೆ ಬಹುಮಾನ:ಪಾಕ ಸ್ಪರ್ಧೆಯಲ್ಲಿ ಸಿರಿಧಾನ್ಯ ಖಾದ್ಯ, ಮರೆತು ಹೋದ ಖಾದ್ಯ ಮತ್ತು ಸಿಹಿ ಖಾದ್ಯ ಈ ಮೂರು ವಿಭಾಗದಲ್ಲಿ ಮೂರು ತಂಡ ವಿಜೇತರನ್ನಾಗಿ ಘೋಷಿಸಿ ಪ್ರತಿ ವಿಭಾಗದಲ್ಲಿನ ವಿಜೇತರಿಗೆ ಪ್ರಥಮ ಬಹುಮಾನ ₹5 ಸಾವಿರ, ದ್ವಿತೀಯ ₹3 ಸಾವಿರ, ತೃತೀಯ ₹2 ಸಾವಿರ ಬಹುಮಾನ ನೀಡಲಾಗುವುದು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕ ಎಲ್. ಸಿದ್ದೇಶ್ವರ, ಸಹಾಯಕ ಕೃಷಿ ನಿರ್ದೆಶಕ ಜೀವನ ಸಾಬ್ ಹಾಗೂ ಶಶಿಕಲಾ ಸವಣೂರು, ಕೃಷಿ ವಿಸ್ತೀರ್ಣ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಎಂ.ವಿ ರವಿ, ಎ.ಇ.ಸಿ. ವಾಮನ್ ಮೂರ್ತಿ, ಕೃಷಿ ಅಧಿಕಾರಿ ಪ್ರಕಾಶ ಚವಡಿ ಸೇರಿದಂತೆ ಯೋಗೇಶ, ಮುತ್ತಣ್ಣ, ಸ್ಮೀತಾ, ಡಾ. ಕವಿತ ಉಳಿಕಾಶಿ, ಡಾ. ರಾಧಾ ಹಾಗೂ ಡಾ. ರೇವತಿ ಹಾಗೂ ಕೃಷಿ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ಮತ್ತು ಸ್ಪರ್ಧಾ ತಂಡಗಳ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.