ಸಾರಾಂಶ
ಮುಂಡರಗಿ: ಎನ್ನೆಸ್ಸೆಸ್ ಎಂದರೆ ನಾನು ಸದಾ ಸಿದ್ಧ ಅಥವಾ ನಾನು ಶಿಸ್ತಿನ ಸಿಪಾಯಿ ಎಂದು ಅರ್ಥ. ಎನ್ನೆಸ್ಸೆಸ್‌ನವರು ದೇಶ ಕಟ್ಟಿದರೆ, ಎನ್ಸಿಸಿಯವರು ದೇಶ ರಕ್ಷಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಶ್ರಮದ ಮಹತ್ವ ತಿಳಿಯುತ್ತದೆ ಎಂದು ಜಅಸಂ ಪಪೂ ಕಾಲೇಜಿನ ಕಾರ್ಯಾಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.
ಅವರು ಇತ್ತೀಚೆಗೆ ತಾಲೂಕಿನ ಹೆಸರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವೀಪೂರ್ವ) ಜಅಸಂಪಪೂ ಮಹಾ ವಿದ್ಯಾಲಯ, ಜಿಪಂ,ತಾಪಂ, ಗ್ರಾಪಂ ಹೆಸರೂರು ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.ಕಾಲೇಜಿನ ವಿದ್ಯಾರ್ಥಿಗಳು ಸುಮಾರು 7 ದಿನಗಳ ಕಾಲ ಈ ಗ್ರಾಮದಲ್ಲಿದ್ದು, ವಿವಿಧ ಚಟುವಟಿಕೆ ಮಾಡುತ್ತಾರೆ. ನಿತ್ಯವೂ ಸಂಜೆ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದ್ದು, ಗ್ರಾಮಸ್ಥರು ಈ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಅವರಿಗೆ ಬೇಕಾದ ಎಲ್ಲ ರೀತಿಯ ಸಹಾಯ ಸಹಕಾರ ನೀಡಿ ಈ ಶಿಬಿರ ಯಶಸ್ವಿಗೊಳಿಸಬೇಕು ಎಂದರು.
ಜ.ಅ.ವಿದ್ಯಾ ಸಮೀತಿ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ ಮಾತನಾಡಿ, ಗ್ರಾಮದಲ್ಲಿನ ಸ್ವಚ್ಛತೆ, ಆರೋಗ್ಯ, ನೀರು, ನೈರ್ಮಲ್ಯ ಸೇರಿದಂತೆ ಅನೇಕ ವಿಷಯಗಳ ಕುರಿತು ಶಿಬಿರಾರ್ಥಿಗಳು ಜಾಗೃತಿ ಮೂಡಿಸಲಿದ್ದಾರೆ. ಕೇಂದ್ರ ಸರ್ಕಾರ ಯುವ ಸಬಲೀಕರಣಕ್ಕಾಗಿ ಎನ್.ಸಿ.ಸಿ, ಎನ್.ಎಸ್.ಎಸ್ ಹಾಗೂ ನೆಹರು ಯುವ ಕೇಂದ್ರ ಯೋಜನೆಗಳನ್ನು ಮಹಾತ್ಮ ಗಾಂಧಿಜಿಯವರ 100ನೇ ಜನ್ಮದಿನದ ಅಂಗವಾಗಿ ಪ್ರಾರಂಭಿಸಿದರು ಎಂದರು.ಗ್ರಾಮದ ಯುವಕ ಗರಡಪ್ಪ ಜಂತ್ಲಿ, ವಿರೇಶ ಶಾಸ್ತ್ರಿಮಠ ಮಾತನಾಡಿ, ಶಿಕ್ಷಣ ಎನ್ನುವುದು ಒಂದು ಸಿಹಿ ಕ್ಷಣ. ಯಾರಾದರು ಶಿಕ್ಷಣದಿಂದ ವಂಚಿತರಾದರೆ ಜೀವನ ಪೂರ್ತಿ ಕಹಿ ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಭಾವೈಕ್ಯತೆ, ಐಕ್ಯತೆ, ಜಾತ್ಯಾತೀತತೆ, ಗ್ರಾಮಗಳ ಅಭಿವೃದ್ಧು ಈ ಶಿಬಿರದ ಉದ್ದೇಶವಾಗಿದೆ. ಈ ಶಿಬಿರಕ್ಕೆ ನಮ್ಮ ಗ್ರಾಮ ಆಯ್ಕೆ ಮಾಡಿಕೊಂಡಿರುವುದು ನಮ್ಮ ಸುದೈವ. ಗ್ರಾಮಸ್ಥರೆಲ್ಲರೂ ಈ ಶಿಬಿರಕ್ಕೆ ಸಹಕರಿಸೋಣ ಎಂದರು.
ಜ.ಅ. ಮಹಿಳಾ ಕಾಲೇಜಿನ ಕಾರ್ಯಾಧ್ಯಕ್ಷ ಬಿ.ಎಸ್. ಶಿವಶೆಟ್ಟರ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ರಾಷ್ಟ್ರೀಯ ಯೋಜನಾ ಶಿಬಿರದಲ್ಲಿ ಗ್ರಾಮಸ್ಥರು ಎಲ್ಲರೂ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದಲ್ಲಿನ ಆಗು ಹೋಗುಗಳ ಕುರಿತು ಪರಿಚಯಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಹೆಮಕ್ಕ ಶಾಸ್ತ್ರಿಮಠ, ಬನ್ನೆಪ್ಪ ಚೂರಿ, ಹಿರಿಯರಾದ ದ್ಯಾಮಣ್ಣ ತಳವಾರ, ಕಾರ್ಯಕ್ರಮಾಧಿಕಾರಿ ಬಿ.ಎಸ್.ಜೋಗಿನ, ಎ.ಎಂ.ಶಿರೋಡಕರ್, ಎಸ್.ಎ. ಅಂಗಡಿ, ಎಸ್.ಎಸ್. ಮುಂಡರಗಿಮಠ, ಎಲ್.ಜಿ. ನಾಡಗೌಡ್ರ, ಎಸ್.ಬಿ. ಪರಮೇಶ್ವರಪ್ಪ, ಐ.ಎನ್. ಪೂಜಾರ, ಲಮಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಾಚಾರ್ಯ ಪಿ.ಎಂ. ಕಲ್ಲನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಆರ್. ಇನಾಮದಾರ್ ಸ್ವಾಗತಿಸಿ, ನಿರೂಪಿಸಿದರು. ಮಂಜುನಾಥ ಲೇಂಡ್ವೆ ವಂದಿಸಿದರು.