ಸ್ಕೌಟ್ಸ್‌, ಗೈಡ್ಸ್ ಮಹತ್ವ ವಿದ್ಯಾರ್ಥಿಗಳಿಗೆ ತಿಳಿಸಿ: ಎಂ ಧನಂಜಯ

| Published : Sep 01 2024, 01:51 AM IST

ಸ್ಕೌಟ್ಸ್‌, ಗೈಡ್ಸ್ ಮಹತ್ವ ವಿದ್ಯಾರ್ಥಿಗಳಿಗೆ ತಿಳಿಸಿ: ಎಂ ಧನಂಜಯ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಎಂದು ಸಂಸ್ಥೆ ಅಧ್ಯಕ್ಷರಾದ ಎಂ. ಧನಂಜಯ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಕೌಶಲ್ಯಗಳನ್ನು ಕಲಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಂಸ್ಥೆ ಅಧ್ಯಕ್ಷರಾದ ಎಂ ಧನಂಜಯ ಹೇಳಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸಂಪಾಜೆ ವತಿಯಿಂದ ಇತ್ತೀಚೆಗೆ ಇಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಬೇಸಿಗೆ ಶಿಬಿರ, ಗೀತ ಗಾಯನ, ಮಕ್ಕಳ ಮೇಳಗಳಲ್ಲಿ ಎಲ್ಲರ ಸಲಹೆ ಸಹಕಾರ ಬೇಕು. ವಿದ್ಯಾರ್ಥಿನಿಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು. ಇದು ಒಂದು ಸ್ವಯಂಸೇವಾ ಸಂಸ್ಥೆ ಎಂಬುದು ಎಲ್ಲರ ಚಿತ್ತದಲ್ಲಿದ್ದು ಅರ್ಪಣಾ ಭಾವದಿಂದ ಕಾರ್ಯಪ್ರವೃತ್ತರಾಗಬೇಕು ಎಂದರು.

ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲರಾದ ಕೆ.ಡಿ. ನೀತಾ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿಗೆ ಹೆಸರಾದ ಸಂಸ್ಥೆಯಾಗಿದೆ ಎಂದರು.

ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು ಮಾತನಾಡಿ, ಸ್ಥಳೀಯ ಸಂಸ್ಥೆಯಲ್ಲಿ ರಾಜ್ಯ ಸಂಸ್ಥೆಯ ನಿಗದಿತ ಕಾರ್ಯಕ್ರಮಗಳಲ್ಲದೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ .ಮಕ್ಕಳನ್ನು ಪ್ರಥಮ, ದ್ವಿತೀಯ ಸೋಪಾನ ಹಾಗೂ ಜಿಲ್ಲೆಯಲ್ಲಿ ನಡೆಯುವ ತೃತೀಯ ಸೋಪಾನ ಪರೀಕ್ಷೆಗೆ ಸಿದ್ಧಗೊಳಿಸಿ ನಮ್ಮ ಜಿಲ್ಲೆಯಿಂದ ಹೆಚ್ಚು ಮಕ್ಕಳನ್ನು ರಾಜ್ಯಮಟ್ಟದಲ್ಲಿ ಪುರಸ್ಕಾರ ಪಡೆಯುವಂತಾಗಬೇಕು ಎಂದರು.

ಜಿಲ್ಲಾ ಸಂಘಟಕಿ ದಮಯಂತಿ ಯು.ಸಿ. ಅವರು ರಾಜ್ಯ ಸಂಸ್ಥೆಯವರು ಪ್ರಕಟಿಸುತ್ತಿರುವ ವಾರ್ಷಿಕ ಕಾರ್ಯಕ್ರಮದ ಕೈಪಿಡಿ ಪುಸ್ತಕವನ್ನು ಬಿಡುಗಡೆ ಮಾಡಿದರು. ತರಬೇತಿ ಹೊಂದಿದ ಶಿಕ್ಷಕರು ಸಭೆ ಮತ್ತು ಸಮಾರಂಭಗಳಿಗೆ ಬರುವಾಗ ಯಾವುದೇ ಮುಜುಗರ ಪಟ್ಟುಕೊಳ್ಳದೆ ಸಮವಸ್ತ್ರವನ್ನು ಧರಿಸಿಕೊಂಡು ಬರಬೇಕು. ಅದಕ್ಕೆ ವಿಶೇಷವಾದ ಗೌರವವಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು ಎಂದರು.

ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ರಂಜಿತ್ ಕೆ.ಯು., ಸ್ಕೌಟ್ಸ್ ಮತ್ತು ಗೈಡ್ಸ್ ಬಗ್ಗೆ ಪುನಶ್ಚೇತನ ಮಾಹಿತಿ ನೀಡಿ ಎಲ್ಲ ಶಾಲೆಗಳಲ್ಲಿ ದಳವಿರುವುದನ್ನು ಖಾತರಿಪಡಿಸಬೇಕು. ಶಿಕ್ಷಣ ಇಲಾಖೆಯ ಒಂದು ಭಾಗವಾಗಿ ಸಂಸ್ಥೆ ಕೆಲಸ ಮಾಡುತ್ತಿರುವುದರಿಂದ ಶಾಲಾ ಮಕ್ಕಳಿಗೆ ಸಾಕಷ್ಟು ಪ್ರಯೋಜನಗಳಾಗುತ್ತಿವೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ ವರದಿ ವಾಚಿಸಿದರು. ಸಹ ಕಾರ್ಯದರ್ಶಿ ಲಲಿತ ವಾರ್ಷಿಕ ಆಯವ್ಯಯ ಮಂಡನೆ ಮಾಡಿದರು. ಸ್ಕೌಟ್ ಮಾಸ್ಟರ್ ಶ್ಯಾಮಿಲಿ ಅಂದಾಜು ಆಯವ್ಯಯ ಮಂಡಿಸಿದರು. ಸ್ಕೌಟ್ ಮಾಸ್ಟರ್ ಅನುಷಾ ವಾರ್ಷಿಕ ಕಾರ್ಯಕ್ರಮಗಳ ಪಟ್ಟಿಯನ್ನು ಓದಿದರು. ಸಭೆಯಲ್ಲಿ ಜಿಲ್ಲಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎಂ ವಸಂತಿ ಹಾಗೂ ವಿವಿಧ ಶಾಲೆಗಳ 35 ಮಂದಿ ಶಿಕ್ಷಕರು ಪಾಲ್ಗೊಂಡಿದ್ದರು. ಸ್ಕೌಟ್ ಮಾಸ್ಟರ್ ಸುಮಿತ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.