ಸಾರಾಂಶ
ಮಹನೀಯರ ತತ್ವ, ಸಿದ್ಧಾಂತಗಳನ್ನು ನಮ್ಮೊಳಗೆ ಆಳವಡಿಸಿಕೊಂಡು ಸಾಗಬೇಕು. ಶಿಕ್ಷಣದ ಜೊತೆಗೆ ಜ್ಞಾನವನ್ನು ನೀಡಿ ದೇಶದ ಕಲೆ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮಾಡುವ ಶಿಕ್ಷಕರು, ಗುರು ಹಿರಿಯರನ್ನು ವಿದ್ಯಾರ್ಥಿಗಳು ಸ್ಮರಿಸಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಕ್ಕಳಿಗೆ ದೇಶದ ಕಲೆ, ಸಂಸ್ಕೃತಿ, ಆಚಾರ, ವಿಚಾರ ತಿಳಿಸುವ ಜೊತೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೈದ ಮಹನೀಯರ ಬಗ್ಗೆ ತಿಳಿಸಬೇಕಿದೆ ಎಂದು ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ಮಹನೀಯರ ತತ್ವ, ಸಿದ್ಧಾಂತಗಳನ್ನು ನಮ್ಮೊಳಗೆ ಆಳವಡಿಸಿಕೊಂಡು ಸಾಗಬೇಕು. ಶಿಕ್ಷಣದ ಜೊತೆಗೆ ಜ್ಞಾನವನ್ನು ನೀಡಿ ದೇಶದ ಕಲೆ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮಾಡುವ ಶಿಕ್ಷಕರು, ಗುರು ಹಿರಿಯರನ್ನು ವಿದ್ಯಾರ್ಥಿಗಳು ಸ್ಮರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷೀಯ ಭಾಷಣ ಮಾಡದೆ ಅರ್ಧದಲ್ಲೇ ಹೊರ ತೆರಳಿದರು. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಷಣ ಮುಗಿಸಿ ಹೊರ ಹೋಗುವುದು ವಾಡಿಕೆ. ಆದರೆ, ಶಾಸಕರು ಯಾವುದೇ ಕಾರಣ ನೀಡದೆ ಅರ್ಧದಲ್ಲೇ ಹೊರ ಹೋಗಿದ್ದರಿಂದ ಸಾರ್ವಜನಿಕರು, ಮಕ್ಕಳಿಗೆ ನಿರಾಸೆ ಮೂಡಿಸಿತು.ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಎ.ಸಿ.ಮಂಜುಳಾ ಉಪನ್ಯಾಸ ನೀಡಿದರು. ವಿವಿಧ ಶಾಲಾ ಮಕ್ಕಳು ಪಥ ಸಂಚಲನದ ಮೂಲಕ ಗಣ್ಯರಿಗೆ ಗೌರವ ವಂದನೆ ನೀಡಿದರು. ಕ್ರೀಡಾಂಗಣದಲ್ಲಿ ವಿವಿಧ ಶಾಲೆಗಳ ಮಕ್ಕಳು ದೇಶ ಭಕ್ತಿಗೀತೆ ಹಾಡುಗಳ ಮೂಲಕ ಸಂಗೀತಮಯ ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಮುಖ್ಯಾಧಿಕಾರಿ ರಾಜಣ್ಣ ಧ್ವಜಾರೋಹಣ ನಂತರ ಶಾಲಾ ಮಕ್ಕಳೊಂದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ನಂತರ ಐತಿಹಾಸಿಕ ಬತ್ತೇರಿ ಮೇಲೆ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಧ್ವಜಾರೋಹಣ ಮಾಡಿದರು. ಈ ವೇಳೆ ತಾಪಂ ಇಒ ವೇಣು, ಬಿಇಒ ಮಹೇಶ್, ಮುಖ್ಯಾಧಿಕಾರಿ ರಾಜಣ್ಣ, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮಾರುತಿ ಸೇರಿದಂತೆ ಇತರ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.