ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆಆಧುನಿಕತೆ ಹೆಚ್ಚಿದಂತೆ ಧಾರ್ಮಿಕ ಆಚಾರ ವಿಚಾರಗಿಂದ ಜನರು ದೂರವಾಗುತ್ತಿದ್ದಾರೆ ಎನ್ನುವ ಆತಂಕ ವ್ಯಕ್ತವಾಗುತ್ತಿತ್ತು ಆದರೆ ಇಂದು ಇದಕ್ಕೆ ವ್ಯತಿರಿಕ್ತವಾಗಿ ಎಲ್ಲೆಡೆಯೂ ಧಾರ್ಮಿಕ ಆಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ ಎಂದು ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮಿಜಿ ತಿಳಿಸಿದರು. ಪಟ್ಟಣದ ೧ನೇ ವಾರ್ಡ್‌ನ ಪದವಿ ಕಾಲೇಜಿನ ಹಿಂಭಾಗದಲ್ಲಿರುವ ವೀರಭದ್ರಸ್ವಾಮಿ ನೂತನ ದೇವಾಲಯ ಮತ್ತು ಪುನರ್ ಪ್ರತಿಷ್ಠಾಪನಾ ಹಾಗೂ ಶಿಖರ ಕಲಶಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಮೌಲ್ಯ ಮತ್ತು ಹಿನ್ನೆಲೆ ಇರುತ್ತದೆ. ನಮ್ಮ ಪೂರ್ವಿಕರು ಇವುಗಳನ್ನು ನಮ್ಮ ಸಮುದಾಯದ ಹಂತದಲ್ಲಿ ಆಚರಣೆಗೆ ತಂದಿದ್ದು ಪ್ರತಿಯೊಂದು ಪ್ರಾಂತದಲ್ಲೂ ಆಚರಣೆಗಳ ಶೈಲಿ ಬದಲಾದರೂ ಸಹ ಮೂಲವಾಗಿ ಎಲ್ಲದರ ಸಾರ ಒಂದೇ ಆಗಿದ್ದು ನಾವುಗಳು ನಮ್ಮ ಮುಂದಿನ ಪೀಳಿಗೆಗೆ ನಮ್ಮ ಆಚಾರ ವಿಚಾರಗಳನ್ನು ತಲುಪಿಸಲು ಧಾರ್ಮಿಕ ಆಚರಣೆಗಳು ಸೇತುವೆಗಳಾಗಿದ್ದು ಇವುಗಳನ್ನು ಶ್ರದ್ಧಾ ಪೂರ್ವಕವಾಗಿ ಆಚರಿಸಬೇಕು ಎಂದು ಹೇಳಿದರು. ಮೈಸೂರಿನ ನಾಗೇಶ ಶರ್ಮ ಮತ್ತು ಪುಟ್ಟವೀರಯ್ಯ ನೇತೃತ್ವದಲ್ಲಿ ಹೋಮ ಹವನ ಮತ್ತು ಯಾಗಗಳನ್ನು ನಡೆಸಲಾಯಿತು. ದೇವಾಲಯ ಸಮಿತಿದ ಸದಸ್ಯರಾದ ನವೀನ್, ವೀರಭದ್ರಸ್ವಾಮಿ, ಹೇಮಂತ್, ದೊಡ್ಡವೀರಯ್ಯ, ನಾಗರಾಜು, ಬಸವರಾಜು, ಕೊಂಡಪ್ಪ, ಮೂಡ್ಲಯ್ಯ ಇದ್ದರು.